ಹಾವೇರಿ: ತಾಲೂಕಿನ ದೇವಿಹೊಸೂರು ಗ್ರಾಮದಲ್ಲಿ ನೆನ್ನೆ(ಅಕ್ಟೋಬರ್ 26) ಹೋರಿ ಬೆದರಿಸುವ ಹಬ್ಬ ನಡೆಯಿತು. ಗ್ರಾಮದ ಅಗಸಿಯಲ್ಲಿ ವಿಜೃಂಭಣೆಯಿಂದ ಹಬ್ಬ ನಡೆಯಿತು. ದೇವಿಹೊಸೂರು ಸೇರಿದಂತೆ ಅಕ್ಕಪಕ್ಕದ ಊರುಗಳಿಂದ ಸಾವಿರಾರು ಜನರು ಹಬ್ಬದಲ್ಲಿ ಪಾಲ್ಗೊಂಡಿದ್ದರು.
ಕೊಬ್ಬರಿ ಹೋರಿ ಹಬ್ಬ ಎಂದರೆ ಗ್ರಾಮದ ಜನರಿಗೆ ಎಲ್ಲಿಲ್ಲದ ಖುಷಿ. ಅದರಲ್ಲೂ ರೈತಾಪಿ ವರ್ಗದ ಜನರು ಮತ್ತು ರೈತಾಪಿ ಕುಟುಂಬದ ಯುವಕರಿಗಂತೂ ಈ ಹಬ್ಬ ಎಂದರೆ ಹುರುಪು ಹಾಗೂ ಸಂಭ್ರಮ. ರೈತಾಪಿ ವರ್ಗದ ಪ್ರಮುಖ ಹಬ್ಬವಾದ ಹೋರಿ ಬೆದರಿಸುವ ಸ್ಪರ್ಧೆಗೆ ಗ್ರಾಮದ ಶ್ರೀ ಗಾಳೆಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
ರೋಮಾಂಚಕ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಹೋರಿಗಳಿಗೆ ಬಗೆಬಗೆಯ ಅಲಂಕಾರ ಮಾಡಲಾಗಿತ್ತು. ಕೆಲವರು ಹೋರಿಗಳ ಕೊರಳು ಮತ್ತು ಬೆನ್ನಿನ ಮೇಲೆ ಒಣಕೊಬ್ಬರಿಯಿಂದ ತಯಾರಿಸಿದ ಮಾಲೆಗಳನ್ನು ಹಾಕಿ ಅಲಂಕಾರ ಮಾಡಿದ್ದರು. ಕೆಲವು ಹೋರಿಗಳಿಗೆ ಜೂಲಾ ಹಾಕಿ, ರಿಬ್ಬನ್ ಕಟ್ಟಿ, ಎತ್ತರಕ್ಕೆ ಕಾಣುವಂತೆ ಕೊಡುಗಳಿಗೆ ಬಲೂನ್ ಗಳನ್ನು ಕಟ್ಟಿದ್ದರು. ಕಾಲ್ಗೆಜ್ಜೆ, ಬಲೂನು ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳಿಂದ ಹೋರಿಗಳನ್ನು ಅಚ್ಚುಕಟ್ಟಾಗಿ ಅಲಂಕರಿಸಲಾಗಿತ್ತು.
ಹಬ್ಬದಲ್ಲಿ ಪಾಲ್ಗೊಂಡ ಹೋರಿಗಳ ಅಲಂಕಾರ, ಅವುಗಳ ಓಟ ಕಂಡು ಸಾವಿರಾರು ಜನರು ಸಂತೋಷಪಟ್ಟರು. ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಜನರಲ್ಲಿ ಹೋರಿಗೆ ಕಟ್ಟಿದ್ದ ಕೊಬ್ಬರಿ ಮೇಲೆ ಕಣ್ಣು ನೆಟ್ಟ ಕೆಲವರು ಹೋರಿಯನ್ನು ಹಿಡಿದು, ಕೊಬ್ಬರಿ ಹರಿಯುವುದು ಕೂಡ ನಡೆಯಿತು.
ಹೋರಿಗಳನ್ನು ಓಡಿಸುವಾಗ ತಮ್ಮಿಷ್ಟದ ಹೆಸರಿನಲ್ಲಿ ಧ್ವಜವನ್ನು ಹಿಡಿದು ಯುವಕರು ಅಂಗಣದ ಸುತ್ತಲು ಸಂಭ್ರಮದಿಂದ ಓಡಾಡುತ್ತಿದ್ದರು. ಪ್ರತಿ ಹೋರಿಯು ಓಟಕ್ಕೆ ಇಳಿಯುತ್ತಿದ್ದಂತೆ ಅವುಗಳ ಮಾಲೀಕರು ಕೇಕೆ ಹಾಕಿ ಕುಣಿದು ಕುಪ್ಪಳಿಸುತ್ತಿದ್ದರು. ಇನ್ನು, ತಮ್ಮಿಷ್ಟದ ಹೋರಿಗಳು ಅಖಾಡಕ್ಕೆ ಇಳಿಯುತ್ತಿದ್ದಂತೆ ಜನರು ಜೋರಾಗಿ ಕೂಗಿ ಹುರುಪು ನೀಡುವ ದೃಶ್ಯ ಸಾಮಾನ್ಯವಾಗಿತ್ತು.
ವರದಿ: ಬಸವರಾಜ ಪೂಜಾರ