ಬೆಳ್ತಂಗಡಿ : ದೀಪಾವಳಿ ಬೆಳಕಿನ ಹಬ್ಬ.ಈ ಹಬ್ಬ ಸೌಹಾರ್ದತೆಯನ್ನು ತುಂಬಿ ಜಗದ ಕತ್ತಲೆಯನ್ನು ಕಳೆದು ಮಾನವೀಯತೆ ಮನದಲ್ಲಿ ತುಂಬಿ ವಾತ್ಸಲ್ಯ ಬದುಕು ತುಂಬುವ ಉದ್ದೇಶದಿಂದ ದೀಪಾವಳಿಯ ಈ ಶುಭ ಸಂದರ್ಭದಲ್ಲಿ ಬೆಳ್ತಂಗಡಿಯ ಸಮುದಾಯ ಹಾಡುಗಾರರ ತಂಡ ಮನೆಮನೆಗೆ ತೆರಳಿ ಸೌಹಾರ್ದತೆಯ ದೀಪ ಬೆಳಗಿ ಹಾಡುವುದರ ಮೂಲಕ ಹೊಸ ರೀತಿಯ ದೀಪಾವಳಿಯನ್ನು ಆಚರಿಸುವುದಕ್ಕೆ ಮುನ್ನುಡಿ ಬರೆಯಿತು.
80 ದಶಕದಲ್ಲಿ ಹಾಡಿನ ಮೂಲಕ ನಾಡಿನ ಸೌಹಾರ್ದತೆಗೆ ಹೊಸ ರೀತಿಯ ಕಲ್ಪನೆ ಕೊಟ್ಟ ಸಮುದಾಯ ತಂಡ ಇದೀಗ ತಾಲೂಕಿನಲ್ಲಿ ಸೌಹಾರ್ದ ದೀಪಾವಳಿ ಎಂಬ ಪರಿಕಲ್ಪನೆಯೊಂದಿಗೆ ಎಲ್ಲಾ ಜಾತಿ ಧರ್ಮಗಳವರ ಮನೆಗೆ ತೆರಳಿ ಸೌಹಾರ್ದತೆಯ ಹಾಡು ಹಾಡುತ್ತಿರುವುದು ಈ ತಂಡದ ವಿಶೇಷ.ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೌಹಾರ್ದತೆಯ ಧ್ಯೇಯದೊಂದಿಗೆ ಹಾಡುವ ಮೂಲಕ ದೀಪಾವಳಿ ಆಚರಿಸುತ್ತಿದೆ. ದೀಪಾವಳಿ ದೀಪಗಳ ಹಬ್ಬ , ಅದು ಸೌಹಾರ್ದತೆಯ ಪ್ರತೀಕ. ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ಹೊಸ ಪರಿಕಲ್ಪನೆ ಸಮುದಾಯ ತಂಡದ್ದು ಎಂದು ನೇತೃತ್ವ ವಹಿಸಿರುವ ಉಪನ್ಯಾಸಕ ಸುಜೀತ್ ರಾವ್ ಉಜಿರೆ ಹೇಳಿದರು. ತಂಡದಲ್ಲಿ ರಂಗಭೂಮಿ ಕಲಾವಿದ ಪ್ರಶಾಂತ್ ಬೆಳ್ತಂಗಡಿ, ರಾಜ್ಯ ಪ್ರಶಸ್ತಿ ವಿಜೇತ ಕಲಾವಿದ ಹೆಚ್. ಕೃಷ್ಣಯ್ಯ ಲಾಯಿಲ,ಶಿಕ್ಷಕಿ ಆಶಾ ಕುಮಾರಿ ಪಿ.ಇವರಿದ್ದಾರೆ.
ಬುಧವಾರ ಬೆಳಗ್ಗೆ 10 ಘಂಟೆಗೆ ಸಾಹಿತಿ ದಂಪತಿಗಳಾದ ಆತ್ರಾಡಿ ಅಮೃತಾ ಶೆಟ್ಟಿ ಹಾಗೂ ಪಿ.ಡೀಕಯ್ಯ ರವರ ಮನೆಯಲ್ಲಿ ಉದ್ಘಾಟನೆಗೊಂಡು ಕ್ರಮವಾಗಿ ಉಜಿರೆಯ ಸೆರ್ವಾನ್,ಹರಿದಾಸ್ ಎಸ್.ಎಂ ಹಾಗೂ ನ್ಯಾಯವಾದಿ ಶಿವಕುಮಾರ್ ಅವರ ಮನೆಗಳಲ್ಲಿ ಕಾರ್ಯಕ್ರಮ ನಡೆಯಿತು.
ವರದಿ : ಆಶಾ ಕುಮಾರಿ