ವಿದ್ಯಾರ್ಥಿಗಳಲ್ಲಿ ಕಡಿಮೆಯಾಗುತ್ತಿರುವ ಆತ್ಮಸ್ತೈರ್ಯ; ಹೆಚ್ಚುತ್ತಿರುವ ಆತ್ಮಹತ್ಯೆ

ಕಾನೂನು ಕೇವಲ ಸಾಧನವಾಗಿರದೆ, ಬದುಕಿಗೆ ದಾರಿತೋರಿಸುವ ದೀಪವೂ ಆಗಬೇಕು ಎಂಬ ಸತ್ಯವನ್ನು ನಾನೊಬ್ಬ ನ್ಯಾಯವಾದಿಯಾಗಿ ನ್ಯಾಯದ ಹಾದಿಯಲ್ಲಿರುವವನಾಗಿ ಪ್ರತೀ ದಿನ ನ್ಯಾಯಾಲಯದ ಚರ್ಚೆಗಳಲ್ಲಿ ಕೇಳುತ್ತಿರುತ್ತೇನೆ. ಅದಕ್ಕೆ ಪೂರಕವಾಗಿ ಇತ್ತೀಚಿಗೆ ರಾಜಸ್ತಾನ ಹೈಕೋರ್ಟ್ ಆದೇಶವನ್ನು ಇಲ್ಲಿ ತಮ್ಮ ಜೊತೆ ಹಂಚಿಕೊಳ್ಲುತ್ತಿದ್ದೇನೆ. ಕಡಿಮೆ

– ಭೀಮನಗೌಡ ಸುಂಕೇಶ್ವರಹಾಳ (ವಕೀಲರು)

D.B. Civil Writ Petition No. 11889/2025 ನಂಬರಿನ Sujeet swami & Ors Vs. Union of India and ors. ಅರ್ಜಿಯಲ್ಲಿ ‘ಕನಿಷ್ಟ 10 ರಿಂದ 30 ವಯಸ್ಸಿನ’ ವಿದ್ಯಾರ್ಥಿಗಳಲ್ಲಿ ಕಡಿಮೆಯಾಗುತ್ತಿರುವ ಆತ್ಮಸ್ತೈರ್ಯ, ಹೆಚ್ಚಾಗುತ್ತಿರುವ ಮಾನಸಿಕ ಖಿನ್ನತೆಯ ಕಾರಣದಿಂದ ವಿದ್ಯಾರ್ಥಿಗಳ ಆತ್ಮಹತ್ಯೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿರುವುದನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿದೆ. ಕಡಿಮೆ

ಗೌರವಾನ್ವಿತ ನ್ಯಾಯಮೂರ್ತಿಗಳಾದ ಸಂಜೀವ್ ಪ್ರಕಾಶ ಶರ್ಮ ಹಾಗೂ ಸಂಜೀತ್ ಪುರೋಹಿತ್  ರವರ ರಾಜಸ್ತಾನ ಹೈಕೋರ್ಟ್ ಪೀಠವು  ಇದನ್ನು ಪರಿಶೀಲಿಸಿ, ರಾಜ್ಯದ ಪ್ರತೀ ಶಾಲೆ – ಕಾಲೇಜುಗಳಲ್ಲಿ ಆಪ್ತ ಸಮಾಲೋಚಕರು ಇರಬೇಕು. ಅಲ್ಲದೆ, ಅಧ್ಯಯನ ಮಾಡುವ ಪಠ್ಯಕ್ರಮದಲ್ಲಿ ಮಾನಸಿಕ ಆರೋಗ್ಯ ಮತ್ತು ಮನೋವೈಜ್ಞಾನಿಕ ಸಂರಕ್ಷಣೆಗೆ ಸಂಭಂಧಿಸಿದ ವಿಷಯ ಇರಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೂ, UGC ಹಾಗೂ CBSEಗೂ, ಆಯೋಗಗಳಿಗೂ, ಪಠ್ಯಕ್ರಮ ಸಮಿತಿಗೂ ಕಟ್ಟುನಿಟ್ಟಾದ ಸೂಚನೆ ನೀಡಿದೆ.

ಇದನ್ನೂ ಓದಿ: ಅಕ್ಟೋಬರ್ 9 ರಾಜ್ಯಾದ್ಯಂತ ನ್ಯಾಯಕ್ಕಾಗಿ ಜನಾಗ್ರಹ ದಿನ

ಈ ಆದೇಶವೂ ಕೇವಲ ರಾಜಸ್ಥಾನ ರಾಜಕ್ಕೆ ಮಾತ್ರ ಸೀಮಿತವಾಗದೇ, ಕರ್ನಾಟಕ ರಾಜ್ಯಕ್ಕೂ ಅದು ವಿಸ್ತರಣೆಯಾಗಬೇಕಿದೆ. ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಗಳು ಶೇ. 65ರಷ್ಟು ಏರಿಕೆ ಕಂಡಿವೆ. ಹಾಗೆಯೇ 2017-2021 ರವರೆಗೆ 1058 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರೆ, 2021ರ ವರ್ಷದಲ್ಲಿಯೇ 855 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವರದಿಯನ್ನು NCRB (National Crime Records Bureau) ಬಿಡುಗಡೆಗೊಳಿಸಿದೆ. ಇನ್ನೂ ದಾಖಲೆಯಲ್ಲಿ ಇರದವು ಅದೆಷ್ಟೋ?

ಸಾಲ, ನಿರುದ್ಯೋಗ, ಉದ್ಯೋಗದ ಅಭದ್ರತೆ

ವಿದ್ಯಾರ್ಥಿಗಳು ಸಾಲಕ್ಕೆ ಸಿಲುಕಿ ಲಕ್ಷಗಟ್ಟಲೇ ಶಾಲಾ-ಕಾಲೇಜು ಶುಲ್ಕವನ್ನು ಕಟ್ಟಿ ಪದವಿಯ ನಂತರ ಪೋಷಕರ ನಿರೀಕ್ಷೆಗೆ ತಕ್ಕಂತೆ ಉದ್ಯೋಗ ದೊರಕದೇ ಇದ್ದಾಗ/ ಉದ್ಯೋಗದ ಅಭದ್ರತೆ ಮತ್ತು ಕೊರತೆ  ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತಿದೆ. ವಿದ್ಯಾರ್ಥಿಗಳು ನಲಿ-ಕಲಿಯ ಸಮಯದಿಂದ ಪದವಿಯವರೆಗೂ ತೀವ್ರ ಸ್ಪರ್ದಾತ್ಮಕ ವಾತಾವರಣವನ್ನು ಎದುರಿಸುತ್ತಿದ್ದಾರೆ. ಲೈಂಗಿಕ ಶಿಕ್ಷಣದ ಕೊರತೆಯಿಂದ ಮಾನಸಿಕ ಖಿನ್ನತೆಯಿಂದ ಬಳಲುವುದು, ಮುಖ್ಯವಾಗಿ ಅವರ ಸಮಸ್ಯೆಗಳನ್ನು ಯಾರಾದರೂ ತಾಳ್ಮೆಯಿಂದ ಕೇಳುವ- ಪರಿಹಾರ ನೀಡುವ ಸಲಹೆಗಾರರ ತೀವ್ರ ಕೊರತೆಯಿಂದಾಗಿ ವಿದ್ಯಾರ್ಥಿಗಳ ಬದುಕನ್ನು ಒಟ್ಟು ಸಮಾಜ ಕತ್ತಲೆಗೆ ತಳ್ಳುತ್ತಿದೆ.

ಆಳುವ ಸರ್ಕಾರಗಳು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡದೇ ನೈತಿಕ-ಮೌಲ್ಯಯುತ ಶಿಕ್ಷಣ ನೀಡಲು ಮುಂದಾಗಬೇಕು. ಉನ್ನತ ಶಿಕ್ಷಣದವರೆಗೆ ಉಚಿತ ಸಮಾನ ಗುಣಮಟ್ಟದ ಶಿಕ್ಷಣ ನೀಡುವುದು, ಓದಿಗೆ ತಕ್ಕಂತೆ ಉದ್ಯೋಗಗಳನ್ನು ಸೃಷ್ಟಿಸಲು ಮುಂದಾಗಬೇಕು. ಉದ್ಯೋಗದ ಅಭದ್ರತೆಯನ್ನು ಕಡಿಮೆ ಮಾಡಬೇಕು. ಕೇಳುವ, ಅರ್ಥಮಾಡಿಕೊಳ್ಳುವ, ತಾಳ್ಮೆಯಿಂದ ದಾರಿ ತೋರಿಸುವ ಆಪ್ತಸಮಾಲೋಚಕ ಸಿಬ್ಬಂದಿಗಳ ಕೊರತೆಯನ್ನು, ಕ್ರೀಡೆ-ಸಾಂಸ್ಕೃತಿಕ (ನಾಟಕ-ಕಲೆ) ಶಿಕ್ಷಕರನ್ನು ಕಡ್ಡಾಯವಾಗಿ ನೇಮಕಮಾಡಿಕೊಂಡು ವಿದ್ಯಾರ್ಥಿಗಳ ಜೊತೆ ದೃಡವಾಗಿ ನಿಲ್ಲಬೇಕಿದೆ. ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಆರೋಗ್ಯವನ್ನು ಕಾಪಾಡುವುದು ಸರ್ಕಾರ ಮತ್ತು ಶಿಕ್ಷಣ ಸಂಸ್ಥೆಗಳ ಕಾನೂನು ಬದ್ಧ ಕರ್ತವ್ಯ ಎಂಬುದನ್ನು Avinash Mehrotra v. Union of India (2009) ಎಂಬ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.

ಸಂವಿಧಾನದ ನಿರ್ದೇಶನ ತತ್ವಗಳಲ್ಲಿ [ಅನುಚ್ಛೇದ 39(ಎಫ್)] ಗುರುತಿಸಿದಂತೆ ಮಕ್ಕಳು ಆರೋಗ್ಯಕರ ವಾತಾವರಣದಲ್ಲಿ ಬೆಳೆದಿರಬೇಕು, ಅವರ ಸ್ವಾಭಿಮಾನ ಹಾಗೂ ಸ್ವಾತಂತ್ರ್ಯ ಕಾಪಾಡಬೇಕು ಎಂಬುದಾಗಲಿ,  Mental Healthcare Act, 2017 Section 18 ರಲ್ಲಿ ತಿಳಿಸಿದಂತೆ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೂ ಮಾನಸಿಕ ಆರೋಗ್ಯ ಸೇವೆಗಳ ಹಕ್ಕು ಇದೆ ಬಗ್ಗೆ ಹೇಳುತ್ತದೆ.

ಆಳುವ ಸರ್ಕಾರ ಜೀವ/ಜೀವನದ ಮೌಲ್ಯ ಕಳೆದುಕೊಂಡ ನಂತರ ಕ್ರಮ ತೆಗೆದುಕೊಳ್ಳುವುದಕ್ಕಿಂತ ಅವರು ಬದುಕಿರುವಾಗಲೇ ಅವರಿಗೆ ಬೆಂಬಲವಾಗಿ ನಿಲ್ಲುವುದು ಸಮಾಜದ ದೊಡ್ಡ ಹೊಣೆಗಾರಿಕೆ ಎಂಬುದು ನಾವೆಲ್ಲರೂ ಪಾಲಿಸಬೇಕಿದೆ.

ಇದನ್ನೂ ನೋಡಿ: ನಾಟಕ | “ಪ್ಲಾಸ್ಟಿಕ್‌ ಅಸುರ” Janashakthi Media

Donate Janashakthi Media

Leave a Reply

Your email address will not be published. Required fields are marked *