ಬೆಂಗಳೂರು: ಕನ್ನಡದ ಹಿರಿಯ ನಟ ಅಶೋಕ್ ಸೂಪರ್ ಸ್ಟಾರ್ ರಜನಿಕಾಂತ್ ಆಪ್ತತೆಯ ಗೆಳತನದ ಬಗ್ಗೆ ಬರಹಗಳ ಮೂಲಕ ಹಂಚಿಕೊಂಡಿದ್ದು, ಆ ಕುರಿತಾದ ಗೆಳೆಯ ಶಿವಾಜಿ ಎಂಬ ಕೃತಿಯು ಡಿಸೆಂಬರ್ 12ರಂದು ಬಿಡುಗಡೆಯಾಗಲಿದೆ. ತಮ್ಮ ಆಪ್ತ ಗೆಳೆಯನ ಜೊತೆಗಿನ ಅಪರೂಪದ ಕ್ಷಣಗಳನ್ನು ಅಶೋಕ್ ಅವರು ಈ ಪುಸ್ತಕದಲ್ಲಿ ಹಿಡಿದಿಟ್ಟಿದ್ದಾರೆ.
ಅಶೋಕ್ ಮತ್ತು ರಜನಿಕಾಂತ್ ಆತ್ಮೀಯ ಸ್ನೇಹಿತರು. ರಜನಿ ಬಗ್ಗೆ ಯಾರಾದರೂ ವಸ್ತುನಿಷ್ಠವಾಗಿ ಬರೆಯಬಲ್ಲರು ಅಂದರೆ, ಅದು ಅಶೋಕ್ ಅವರು ಮಾತ್ರ. ರಜನಿ ಅವರ ಕಷ್ಟದ ದಿನಗಳಿಂದ ಸೂಪರ್ ಸ್ಟಾರ್ ಆಗಿ ಬೆಳೆದ ಪರಿಯನ್ನು ಕಣ್ಣಾರೆ ಕಂಡವರು. ಕಂಡುಂಡು ಮೆರೆದವರು ನಟ ಅಶೋಕ್ ಅವರು.
ಕೃತಿಯಲ್ಲಿ ವ್ಯಕ್ತವಾಗಿರುವುದು ಕೇವಲ ಭಾವನೆಗಳ ಗುಚ್ಛವಲ್ಲ. ಸಾಕಷ್ಟು ಘಟನೆಗಳಿಗೂ ಸಾಕ್ಷಿಯಾಗಿದೆ. ಅಲ್ಲದೇ, ಅನೇಕ ಊಹಾಪೋಹಗಳಿಗೆ ಈ ಪುಸ್ತಕ ಉತ್ತರವಾಗಿ ನಿಲ್ಲಬಲ್ಲದು. ಗೊತ್ತಿರದ ರಜನಿಯನ್ನು ಗೆಳೆಯ ಅನ್ನುವ ಆಪ್ತತೆಯ ಮೂಲಕ ಅಶೋಕ್ ಅವರು ಅನೇಕ ಸಂಗತಿಗಳನ್ನು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ಹಾಗಾಗಿ ‘ಗೆಳೆಯ ಶಿವಾಜಿ’ ರಜನಿಕಾಂತ್ ಜೀವನದ ದಿ ಬೆಸ್ಟ್ ಪುಸ್ತಕವೂ ಆಗಿದೆ. ಗಿರಿಜಾ ಲೋಕೇಶ್ ಈ ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದರೆ, ಬೆಂಗಳೂರಿನ `ಬೀ ಕಲ್ಚರ್’ ಪ್ರಕಾಶನ ಸಂಸ್ಥೆ ಈ ಪುಸ್ತಕ ಹೊರತರುತ್ತಿದೆ.
ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಡಿಸೆಂಬರ್ 12ರ ಸಂಜೆ 5.30ಕ್ಕೆ ಈ ಪುಸ್ತಕ ಬಿಡುಗಡೆ ಆಗಲಿದೆ. ಅಗ್ರಹಾರ ಕೃಷ್ಣಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ನಟ ನೀನಾಸಂ ಸತೀಶ್ ಈ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಚಿತ್ರ ನಿರ್ದೇಶಕಿ ಸುಮನಾ ಕಿತ್ತೂರ್ ಕೃತಿಯನ್ನು ಪರಿಚಯಿಸುತ್ತಾರೆ. ಸಿ.ಎಸ್.ದ್ವಾರಕನಾಥ್ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಕೃತಿಕಾರ ನಟ ಅಶೋಕ್, ಬೀ ಕಲ್ಚರ್ ಪ್ರಕಾಶನ ಸಂಸ್ಥೆಯ ಎಸ್ ವಿಷ್ಣುಕುಮಾರ್ ಮತ್ತು ದಿಲಾವರ್ ರಾಮದುರ್ಗ ಉಪಸ್ಥಿತರಿರುವರು.