ಪಾಟ್ನಾ: ಕಳ್ಳಭಟ್ಟಿ ಮದ್ಯ ಸೇವನೆಯಿಂದ ಕಳೆದ ಒಂದು ವಾರದ ಅವಧಿಯಲ್ಲಿ 70ಕ್ಕೂ ಹೆಚ್ಚಿನ ಮಂದಿ ಸಾವಿಗೀಡಾಗಿರುವ ಘಟನೆ ಬಿಹಾರ ರಾಜ್ಯದ ಸರಣ್ ಜಿಲ್ಲೆಯ ಛಾಪ್ರಾದಲ್ಲಿ ಸಂಭವಿಸಿದೆ. ಪ್ರಕರಣದ ಬಗ್ಗೆ ವಿಶೇಷ ತನಿಖಾ ತಂಡ(ಎಸ್‌ಐಟಿ) ತನಿಖೆಯನ್ನು ಕೈಗೊಂಡಿದ್ದು, ಜಿಲ್ಲೆಯಲ್ಲಿ ಕಳ್ಳಾಭಟ್ಟಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಅಖಿಲೇಶ್ ಕುಮಾರ್ ಯಾದವ್ ಅಲಿಯಾಸ್ ಅಖಿಲೇಶ್ ರೈ ಎಂದು ಗುರುತಿಸಲಾಗಿದ್ದು, ಆತನಿಂದ ರೂ.2.17 ಲಕ್ಷ ನಗದನ್ನು ವಶಕ್ಕೆ ಪಡೆದಿದ್ದಾರೆ. ಕಳ್ಳಾಭಟ್ಟಿ ಸೇವಿಸಿ ಜನರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಶ್ರಖ್ ಹಾಗೂ ಇಶುಪುರ್ ಪೊಲೀಸ್ ಠಾಣಾಯಲ್ಲಿ 2 ಪ್ರಕರಣಗಳು ದಾಖಲಾಗಿದ್ದು, ಆರೋಪಿಗಳ ಹೆಸರು ಇಲ್ಲವಾದರೂ ಎಸ್‌ಐಟಿ ತಂಡ ಕ್ಷಿಪ್ರ ತನಿಖೆ ಕೈಗೊಂಡು ಬಂಧಿಸಲಾಗಿರುವ ಅಖಿಲೇಶ್ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಸ್ಪಷ್ಟಪಡಿಸಿದ್ದಾರೆ.
ಆರೋಪಿಯ ವಿರುದ್ಧ ಈ ಹಿಂದೆಯೂ ಅಬಕಾರಿ ಕಾಯ್ದೆಯಡಿ 4 ಪ್ರಕರಣಗಳು ದಾಖಲಾಗಿವೆ. ಕಳ್ಳಾಭಟ್ಟಿ ದುರಂತ ರಾಷ್ಟ್ರ ಮಟ್ಟದಲ್ಲಿ ಬೆಳಕಿಗೆ ಬಂದಿದ್ದು, ಪೊಲೀಸರು ಅಕ್ರಮ ಮದ್ಯ ವ್ಯಾಪಾರ, ಸಾಗಣೆ, ಕಳ್ಳಸಾಗಣೆ ಹಾಗೂ ಅಕ್ರಮ ಮದ್ಯ ತಯಾರಿಕೆಯಲ್ಲಿ ತೊಡಗಿರುವ ಶಂಕಿತರನ್ನು ಪತ್ತೆ ಹಚ್ಚಲು ಹಾಗೂ ಬಂಧಿಸಲು ಕಾರ್ಯಾಚರಣೆಗೆ ಇಳಿದಿದ್ದಾರೆ.
ತನಿಖೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತಂಡ
ಬಿಹಾರದಲ್ಲಿ ಸಂಭವಿಸಿರುವ ಕಳ್ಳಭಟ್ಟಿ ದುರಂತದ ಬಗ್ಗೆ ತನಿಖೆಯನ್ನು ಕೈಗೊಳ್ಳಲು ತನ್ನ ಸದಸ್ಯರೊಬ್ಬರು ಒಳಗೊಂಡ ತಂಡವನ್ನು ರಚಿಸುವುದರ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಈಗಾಗಲೇ ಪ್ರಕಟಣೆ ನೀಡಿದೆ. ಆಯೋಗದ ತನಿಖಾ ತಂಡ ಕಳ್ಳಭಟ್ಟಿ ದುರಂತದ ಸಂತ್ರಸ್ತರಿಗೆ ಎಲ್ಲಿ ಹಾಗೂ ಯಾವ ರೀತಿಯ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಕೋರಿದೆ. ಕಳ್ಳಭಟ್ಟಿ ದುರಂತದ ಕುರಿತು ನಾಲ್ಕು ವಾರಗಳ ಒಳಗೆ ವರದಿ ಸಲ್ಲಿಸುವಂತೆ ಆಯೋಗ ಬಿಹಾರ ಸರಕಾರಕ್ಕೆ ನಿರ್ದೇಶಿಸಿದೆ.
ಕಳ್ಳಭಟ್ಟಿ ಸೇವಿಸಿದ ವ್ಯಕ್ತಿಗಳಿಗೆ ಪರಿಹಾರ, ಪುನರ್ವಸತಿಗಾಗಿ ಹಾಗೂ ರಾಜ್ಯಾದ್ಯಂತ ಕಳ್ಳಭಟ್ಟಿ ಉತ್ಪಾದನಾ ಕೇಂದ್ರಗಳನ್ನು ನೆಲಸಮಗೊಳಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆಯೂ ವರದಿಗಳ ಸಂಗ್ರಹಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮುಂದಾಗಿದೆ.