ಬೆಂಗಳೂರು: ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರ ತನ್ನ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಶೇ.3ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗಿದೆ. ತುಟ್ಟಿ ಭತ್ಯೆ ಹೆಚ್ಚಳದಿಂದ ನಿವೃತ್ತ ಸರ್ಕಾರಿ ನೌಕರರಿಗೂ ಅನುಕೂಲವಾಗಲಿದೆ.
ಜುಲೈ 1 ರಿಂದ ಪೂರ್ವಾನ್ವಯ ಆಗುವಂತೆ ತುಟ್ಟಿಭತ್ಯೆಯನ್ನು ಶೇ. 21.50 ರಿಂದ ಶೇ. 24.50ಕ್ಕೆ ಏರಿಸಲಾಗಿದೆ. ಕೇಂದ್ರ ಸರ್ಕಾರದ ನೌಕರರಿಗೆ ತುಟ್ಟಿಭತ್ಯೆಯನ್ನು ಮೂಲವೇತನದ ಶೇಕಡ 31ರಷ್ಟಕ್ಕೆ 2021ರ ಜುಲೈ 1ರಿಂದ ಅನ್ವಯವಾಗುವಂತೆ ಹೆಚ್ಚಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಕಳೆದ ವಾರ ಅನುಮೋದನೆ ನೀಡಿದೆ. ಈಗ ಕರ್ನಾಟಕ ರಾಜ್ಯ ಸರ್ಕಾರವು ಸರ್ಕಾರಿ ನೌಕಕರ ತುಟ್ಟಿಭತ್ಯೆ ಹೆಚ್ಚಳ ಮಾಡಿದೆ.
ಮೂರು ತಿಂಗಳ ಹಿಂದೆ ಜುಲೈನಲ್ಲಿ ರಾಜ್ಯ ಸರ್ಕಾರ ತನ್ನ ನೌಕರರಿಗೆ ಶೇ 11.15ರಿಂದ 21.50ಕ್ಕೆ ತುಟ್ಟಿ ಭತ್ಯೆ ಹೆಚ್ಚಿಸಿತ್ತು. ಇದರಿಂದ 6 ಲಕ್ಷ ಸರ್ಕಾರಿ ನೌಕರರು, 4.5 ಲಕ್ಷ ಪಿಂಚಣಿದಾರರು ಮತ್ತು ವಿವಿಧ ನಿಗಮ ಮಂಡಳಿಗಳಲ್ಲಿ ಸೇವೆ ಸಲ್ಲಿಸುತ್ತಿರುವ 3 ಲಕ್ಷ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.
ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯು ಮೂಲವೇತನದ ಶೇ 28ರಷ್ಟರಿಂದ ಶೇ 31ಕ್ಕೆ ಹೆಚ್ಚಳ ಆಗಲಿದೆ. ಸಶಸ್ತ್ರ ಪಡೆಗಳ ಸಿಬ್ಬಂದಿ ಹಾಗೂ ರೈಲ್ವೆ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಆದೇಶವನ್ನು ಸಂಬಂಧಪಟ್ಟ ಸಚಿವಾಲಯಗಳು ಹೊರಡಿಸಲಿವೆ.
ಕೊವಿಡ್-19 ಪಿಡುಗಿನ ಅವಧಿಯಲ್ಲಿ ಸರ್ಕಾರವು ತುಟ್ಟಿಭತ್ಯೆ ಮತ್ತು ಬೆಲೆ ಏರಿಕೆ ಪರಿಹಾರವನ್ನು ತಡೆಹಿಡಿದಿತ್ತು.