ಬಿಜೆಪಿ ಸದಸ್ಯತ್ವಕ್ಕೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ರಾಜೀನಾಮೆ

ಬೆಳಗಾವಿ : ಟಿಕೆಟ್ ತಪ್ಪಿಸಿಕೊಂಡಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಈಗ ಬಿಜೆಪಿ ಪಕ್ಷದ ಸದಸ್ಯತ್ವಕ್ಕೆ ರಾಜಿನಾಮೆ ನೀಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಬುಧವಾರ ಅಥಣಿ ಪಟ್ಟಣದಲ್ಲಿ ಸುದ್ದಿಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ನಿಷ್ಠಾವಂತನಿಗೆ ಗೌರವ ಇರದ ಪಕ್ಷದಲ್ಲಿ ಇರುವ ಅಗತ್ಯತೆ ಇಲ್ಲ ಎಂದರು.

ವಿಧಾನಪರಿಷತ್ ಸ್ಥಾನಕ್ಕೂ ರಾಜಿನಾಮೆ ನೀಡುವಂತೆ ಕ್ಷೇತ್ರದ ಜನತೆ ಸಲಹೆ ನೀಡಿದ್ದಾರೆ. ನಾನೂ ಕೂಡ ಸ್ವಾಭಿಮಾನಿ ರಾಜಕಾರಣಿ. ಲಜ್ಜೆಗೆಟ್ಟ ರಾಜಕಾರಣಿ ಅಲ್ಲ. ಅಧಿಕಾರದ ಅಮಲಿನಲ್ಲೂ ನಾನಿಲ್ಲ. ನಾನು ಯಾರ ಬೆನ್ನಿಗೂ ಚೂರಿ ಹಾಕಿಲ್ಲ ಎಂದರು. ನನ್ನ ಹೈ ಕಮಾಂಡ್ ನನ್ನ ಜನತೆ. ಜನತೆ ತೀರ್ಮಾನಕ್ಕೆ ಬದ್ಧನಾಗಿದ್ದು ತಕ್ಷಣ ವಿಧಾನಪರಿಷತ್ ಸದಸ್ಯತ್ವ ಸೇರಿದಂತೆ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜಿನಾಮೆ ನೀಡುವ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದರು.

ರಮೇಶ್ ಜಾರಕಿಹೊಳಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಲಕ್ಷ್ಮಣ ಸವದಿ, ‘ನನ್ನೊಂದಿಗೆ ಸ್ನೇಹದಿಂದ ಇದ್ದ, ಪ್ರೀತಿಯಿಂದ ನೋಡುತ್ತಿದ್ದ ಸಿಎಂ ಬಸವರಾಜ ಬೊಮ್ಮಾಯಿಗೆ ಈಗ ಎರಡನೇ ಬಾರಿಗೆ ಸಿಎಂ ಆಗುವ ಭಾಗ್ಯ ಇಲ್ಲ. ಪ್ರಧಾನಿ ಆಗುವ ಯೋಗ ಇದೆ. ಇದೆಲ್ಲದರ ನಡುವೆ ನನಗೂ ಒಬ್ಬರು ಗುರು ಇದ್ದಾರೆ. ಅವರ ಮಾತು ಮೀರುವ ಪರಿಸ್ಥಿತಿ ಬಂದಿದೆ. ಕ್ಷಮಿಸಿ ಗುರುವೇ’ ಎಂದು ಸಿಎಂ ವಿರುದ್ಧವೂ ಪರೋಕ್ಷವಾಗಿ ಮಾತಿನ ತಿರುಗೇಟು ಕೊಟ್ಟರು.

ಇದನ್ನೂ ಓದಿಸಚಿವ ರಾಜನಾಥ್ ಸಿಂಗ್ ಗೆ ಡಿಸಿಎಂ ಪತ್ರ : ವಿಶೇಷ ಬೇಡಿಕೆ ಇಟ್ಟ ಸವದಿ

ಪಕ್ಷಾಂತರ ವಿಷಯವಾಗಿ ಪ್ರತಿಕ್ರಿಯಿಸಿದ ಸವದಿ, ‘ಇಷ್ಟೆಲ್ಲ ಆದರೂ ಬಿಜೆಪಿ ವರಿಷ್ಟರಾರೂ ನನ್ನನ್ನು ಸಂಪರ್ಕಿಸಿಲ್ಲ. ಆದರೆ, ಇತರ ಪಕ್ಷಗಳ ಅನೇಕ ಮುಖಂಡರು ಸಂಪರ್ಕದಲ್ಲಿದ್ದಾರೆ. ನಾಳೆಯೇ ಗಟ್ಟಿ, ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದು ಪಕ್ಷ ಬದಲಾವಣೆಯ ಮುನ್ಸೂಚನೆ ನೀಡಿದರು.

Donate Janashakthi Media

Leave a Reply

Your email address will not be published. Required fields are marked *