ಕಲಬುರ್ಗಿ : ಐದೂ ಗ್ಯಾರಂಟಿ ಯೋಜನೆಗಳನ್ನು ಸಂಪೂರ್ಣ ಅನುಷ್ಠಾನಗೊಳಿಸಿ ಬಹಳ ಆತ್ಮವಿಶ್ವಾಸದಿಂದ ಇಲ್ಲಿಗೆ ಬಂದಿದ್ದೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿದ್ದಾರೆ. ಗ್ಯಾರಂಟಿ ಯೋಜನೆ
ರಾಜಕಾರಣದಲ್ಲಿ ಯಾವುದೇ ಪಕ್ಷ ಅಥವಾ ಸರ್ಕಾರಕ್ಕೆ ಕೊಟ್ಟ ಮಾತು ಉಳಿಸಿಕೊಳ್ಳುವುದಕ್ಕಿಂತ ದೊಡ್ಡ ತೃಪ್ತಿ ಬೇರೊಂದಿಲ್ಲ. ಮಾರ್ಚ್ 10ಕ್ಕೆ ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ನಾಲ್ಕು ವರ್ಷ ಪೂರ್ಣಗೊಂಡಿದೆ. ಬೆಳಗಾವಿಯಲ್ಲಿ ಪ್ರಜಾಧ್ವನಿ ಪ್ರಾರಂಭಿಸಿದ ನಂತರ ನಾವು ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆವು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಬಜೆಟ್ ನಲ್ಲಿ ಇದಕ್ಕಾಗಿ 52 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ.
ನಮ್ಮ ಗ್ಯಾರಂಟಿ ಯೋಜನೆಗಳನ್ನು ದೇಶದಲ್ಲಿ ಜನ ಮೆಚ್ಚಿದ್ದಾರೆ. ಬಿಜೆಪಿಯವರು ಒಪ್ಪಿ ಮೋದಿ ಗ್ಯಾರಂಟಿ ಯೋಜನೆ ಎಂದು ಪ್ರಚಾರ ಪಡೆಯುತ್ತಿದ್ದಾರೆ.
ಮತದಾರರು ಹಾಗೂ ಕಾಂಗ್ರೆಸ್ ನಾಯಕರು ಈ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದು, ನಾವು ನಾಯಕರು ನೆಪ ಮಾತ್ರ. ನಾವು ಪ್ರತಿ ತಾಲೂಕು, ಜಿಲ್ಲೆಗಳಲ್ಲಿ 15 ಕಾರ್ಯಕರ್ತರನ್ನು ಒಳಗೊಂಡಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.
ತಾಲೂಕು ಮಟ್ಟದ ಸಮಿತಿ ಅಧ್ಯಕ್ಷರಿಗೆ ತಾಲೂಕು ಮಟ್ಟದಲ್ಲಿ ಕಚೇರಿ ಹಾಗೂ 25 ಸಾವಿರ ಗೌರವಧನ, ಜಿಲ್ಲಾ ಸಮಿತಿ ಅಧ್ಯಕ್ಷರಿಗೆ ಜಿಲ್ಲಾ ಮಟ್ಟದಲ್ಲಿ ಕಚೇರಿ ಹಾಗೂ 50 ಸಾವಿರ ಗೌರವಧನ ನೀಡಲಾಗುವುದು. ರಾಜ್ಯ ಮಟ್ಟದ ಸಮಿತಿಯಲ್ಲಿ ಓರ್ವ ಅಧ್ಯಕ್ಷರು ಹಾಗೂ ಐವರು ಉಪಾಧ್ಯಕ್ಷರನ್ನು ಒಳಗೊಂಡಿದೆ. ಅಧ್ಯಕ್ಷರಿಗೆ ಸಚಿವ ಸಂಪುಟ ಸ್ಥಾನಮಾನ ನೀಡಲಾಗುವುದು. ಆಮೂಲಕ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ. ಇದರ ಜತೆಗೆ ಕಾರ್ಯಕರ್ತರುಗಳಿಗೆ ಸ್ಥಳೀಯ ಮಟ್ಟದ ಆಸ್ಪತ್ರೆ, ಶಾಲಾ ಹಾಗೂ ಇತರೆ ಸಮಿತಿ ಸಮಿತಿಯಲ್ಲಿ ಸ್ಥಾನಮಾನ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ. ಇವರು ಸಾರ್ವಜನಿಕರ ಸೇವೆ ಮಾಡಬೇಕು, ಅವರಿಗೆ ಗೌರವ ನೀಡಲು ತೀರ್ಮಾನಿಸಿದ್ದೇವೆ.
ನಾವು ಚುನಾವಣೆಗಾಗಿ ಗ್ಯಾರಂಟಿ ಯೋಜನೆ ನೀಡುತ್ತಿಲ್ಲ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಬದುಕಿನಲ್ಲಿ ನೆರವು ನೀಡಲು ಜಾರಿ ಮಾಡಿದ್ದೇವೆ.
ಕೋವಿಡ್ ಸಮಯದಲ್ಲಿ ಬಿಜೆಪಿ ಸರ್ಕಾರ ಕಾರ್ಮಿಕರಿಂದ ಬಸ್ ಪ್ರಯಾಣಕ್ಕೆ ಮೂರು ಪಟ್ಟು ಹಣ ಕೀಳಲು ಮುಂದಾದರು. ಆಗ ನಾನು ಸಿದ್ದರಾಮಯ್ಯ ಅವರು ಚರ್ಚೆ ಮಾಡಿ ಸರ್ಕಾರಕ್ಕೆ 1 ಕೋಟಿ ರೂಪಾಯಿ ಚೆಕ್ ನೀಡಿ ಆ ಕಾರ್ಮಿಕರನ್ನು ಉಚಿತವಾಗಿ ಅವರ ಊರಿಗೆ ತಲುಪಿಸಲು ಆಗ್ರಹಿಸಿದೆವು. ನಂತರ ಸರ್ಕಾರ ವಿಧಿ ಇಲ್ಲದೆ ಒಂದು ವಾರ ಉಚಿತ ಬಸ್ ಪ್ರಯಾಣ ಕಲ್ಪಿಸಿತು. ಕೇಂದ್ರ ಸರ್ಕಾರ ಉಚಿತ ರೈಲು ಸೇವೆ ಆರಂಭಿಸಿತು.
ಈ ರೀತಿ ಜನರ ಕಷ್ಟಗಳಿಗೆ ಸ್ಪಂದಿಸುವ ಪಕ್ಷ ಎಂದರೆ ಅದು ಕಾಂಗ್ರೆಸ್ ಪಕ್ಷ. ನಮಗೆ ಮತ ಮುಖ್ಯ ಅಲ್ಲ. ನಾವು ಬ್ಯಾಂಕುಗಳ ರಾಷ್ಟ್ರೀಕರಣ, ಅನ್ನಭಾಗ್ಯ, ಉಳುವವನಿಗೆ ಭೂಮಿ, ಬಡವರಿಗೆ ಮನೆ, ನಿವೇಶನ ನೀಡಿದ್ದೇವೆ. ನಮ್ಮ ಯೋಜನೆಗಳು ಯಾವುದೇ ಒಂದು ಜಾತಿ, ಧರ್ಮ, ಪಕ್ಷಕ್ಕೆ ಸೀಮಿತವಾಗಿಲ್ಲ. ಎಲ್ಲಾ ವರ್ಗದ ಜನರಿಗೆ ನೀಡಲಾಗುವುದು ಎಂದು ಡಿ ಕೆ ಶಿವಕುಮಾರ್ ಮಾತನಾಡಿದ್ದಾರೆ.
ಇದನ್ನು ಓದಿ : ಸಿಎಎ ಜಾರಿ: ಬಿಜೆಪಿಯ ಚುನಾವಣಾ ಗಿಮಿಕ್ : ಮುಖ್ಯಮಂತ್ರಿ ಸಿದ್ದರಾಮಯ್ಯ
ಮಂಜುನಾಥ್ ಅವರ ಬಗ್ಗೆ ಗೌರವವಿದೆ, ಅವರ ಸ್ಪರ್ಧೆ ಸ್ವಾಗತಿಸುತ್ತೇವೆ:
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಡಾ. ಮಂಜುನಾಥ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಕೇಳಿದಾಗ, “ನನಗೆ ಡಾ. ಮಂಜುನಾಥ್, ಕುಮಾರಸ್ವಾಮಿ, ದೇವೇಗೌಡರ ಮೇಲೆ ಗೌರವವಿದೆ. ನಾವು ದೇವೇಗೌಡರ ವಿರುದ್ಧ ನಾನು ನಿಂತಿದ್ದೆ, ಒಬ್ಬ ಹೆಣ್ಣು ಮಗಳನ್ನು ನಿಲ್ಲಿಸಿ ಗೆಲ್ಲಿಸಿದ್ದೇನೆ. ಕುಮಾರಸ್ವಾಮಿ ಅವರ ವಿರುದ್ಧ ಸ್ಪರ್ಧೆ ಮಾಡಿ ಗೆದ್ದಿದ್ದೇನೆ, ಅವರ ಧರ್ಮ ಪತ್ನಿ ಅನಿತಾ ಕುಮಾರಸ್ವಾಮಿ ಅವರ ವಿರುದ್ಧ ನನ್ನ ಸಹೋದರನನ್ನು ನಿಲ್ಲಿಸಿ ಗೆಲ್ಲಿಸಿದ್ದೇವೆ. ಮಂಜುನಾಥ್ ಅವರ ಅಧಿಕಾರ ಅವಧಿಯನ್ನು ನಮ್ಮ ಸರ್ಕಾರವೂ ವಿಸ್ತರಣೆ ಮಾಡಿಕೊಂಡು ಬಂದಿದೆ. ನಮಗೆ ಅವರ ಮೇಲೆ ಯಾವುದೇ ಬೇಸರ ಇಲ್ಲ. ನಾವು ನೀತಿ ಮೇಲೆ ಚುನಾವಣೆ ಮಾಡುತ್ತೇವೆ. ಡಿ.ಕೆ ಸುರೇಶ್ ಸಂಸದನಾಗಿ ಕೆಲಸ ಮಾಡುವುದಕ್ಕಿಂತ ಪಂಚಾಯಿತಿ ಸದಸ್ಯನ ರೀತಿಯಲ್ಲಿ ಹಳ್ಳಿ ಹಳ್ಳಿಯಲ್ಲಿ ತಿರುಗಿ ಜನರ ಮಧ್ಯೆ ಕೆಲಸ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ ಯಾರೇ ನಿಂತರೂ ನಾವು ಸ್ವಾಗತಿಸುತ್ತೇವೆ. ಅವರ ಸಹೋದರಿ ಮಂಜುನಾಥ್ ಅವರ ಸ್ಪರ್ಧೆಗೆ ಒಲವಿಲ್ಲದೆ ಕಣ್ಣೀರು ಹಾಕಿದ್ದಾರೆ ಎಂದು ಕುಮಾರಸ್ವಾಮಿ ಅವರೇ ಹೇಳಿಕೆ ನೀಡಿದ್ದಾರೆ. ಅವರ ಮನೆ ವಿಚಾರದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ನಾವು ಕುಮಾರಸ್ವಾಮಿ ಅವರ ಮಗ ಹಾಗೂ ತಂದೆ ಇಬ್ಬರ ಚುನಾವಣೆಯನ್ನು ನೋಡಿದ್ದೇವೆ” ಎಂದು ತಿಳಿಸಿದರು.
ನಾನು, ಸಿಎಂ ಚರ್ಚೆ ಮಾಡಿ ರಾಜ್ಯ ಪ್ರವಾಸ:
ಗ್ಯಾರಂಟಿ ಸಮಾವೇಶಕ್ಕೆ ಮುಖ್ಯಮಂತ್ರಿಗಳು ಬಾರದೆ ಇರುವ ಬಗ್ಗೆ ಕೇಳಿದಾಗ, “ಸದ್ಯದಲ್ಲೇ ಚುನಾವಣಾ ನೀತಿ ಸಂಹಿತೆ ಜಾರಿ ಆಗಲಿದ್ದು, ನಾನು ಸಿದ್ದರಾಮಯ್ಯ ಅವರು ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ, ಇಬ್ಬರೂ ಬೇರೆ ಬೇರೆ ಕಡೆ ಕಾರ್ಯಕ್ರಮ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಅವರು ನಿನ್ನೆ ಚಾಮರಾಜನಗರದಲ್ಲಿ ಕಾರ್ಯಕ್ರಮ ಮಾಡಿದ್ದರು. ನಾನು ಕಲಬುರ್ಗಿಗೆ ಬಂದಿದ್ದೇನೆ. ಇನ್ನು ಜತೆಯಾಗಿ ಮಂಡ್ಯ, ದೊಡ್ಡಬಳ್ಳಾಪುರ ಮಾಡಿದ್ದೇವೆ. ಸಿದ್ದರಾಮಯ್ಯ ಅವರು ಇಂದು ಉಡುಪಿಗೆ ತೆರಳಿ, ಕೋಲಾರಕ್ಕೆ ಹೋಗಲಿದ್ದಾರೆ. ನಾಳೆ ಕೊನೆಯ ಸಚಿವ ಸಂಪುಟ ಸಭೆ ಇರುವ ಕಾರಣ ಅವರು ರಾಯಚೂರಿನ ಕಾರ್ಯಕ್ರಮಕ್ಕೆ ಬರುತ್ತಿಲ್ಲ. ಕಲಬುರ್ಗಿ ಮಲ್ಲಿಕಾರ್ಜುನ ಖರ್ಗೆ ಅವರ ಕ್ಷೇತ್ರ. ಅವರನ್ನು ಕರೆದುಕೊಂಡು ಬೆಂಗಳೂರಿನಲ್ಲಿ ರಾಜೀವ್ ಗಾಂಧಿ ಅವರ ಹೆಸರಲ್ಲಿ ಅಷ್ಟಪಥ ಕಾರಿಡಾರ್ ಉದ್ಧಾಟನೆ ಮಾಡಲಿದ್ದೇವೆ. ಹೀಗೆ ನಾವು ಕಾರ್ಯಕ್ರಮಗಳನ್ನು ಹಂಚಿಕೊಂಡು ರಾಜ್ಯ ಪ್ರವಾಸ ಮಾಡುತ್ತಿದ್ದೇವೆ” ಎಂದು ತಿಳಿಸಿದರು.
ಹಾಲಿ ಸಂಸದರು ಶಾಸಕರು ಪಕ್ಷ ಸೇರಲು ಬಯಸಿದ್ದಾರೆ:
ಬೇರೆ ಪಕ್ಷದ ನಾಯಕರಿಗೆ ಆಹ್ವಾನ ನೀಡಿರುವ ಬಗ್ಗೆ ಕೇಳಿದಾಗ, “ಕಾಂಗ್ರೆಸ್ ಪಕ್ಷಕ್ಕೆ ಸೇರಲು ಬಹಳ ನಾಯಕರು ಮುಂದಾಗಿದ್ದಾರೆ. ನಿನ್ನೆ ಕೂಡ ಬಿಜೆಪಿ ಹಾಗೂ ಜೆಡಿಎಸ್ ನಿಂದ ಮಾಜಿ ಶಾಸಕರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಇನ್ನು ಮೂವರು ಹಾಲಿ ಸಂಸದರು, ಅನೇಕ ಹಾಲಿ ಶಾಸಕರು ಪಕ್ಷಕ್ಕೆ ಸೇರಲು ಮುಂದಾಗಿದ್ದು ನಾನು ಅವರ ಹೆಸರು ಬಹಿರಂಗಪಡಿಸಲು ಬಯಸುವುದಿಲ್ಲ” ಎಂದು ತಿಳಿಸಿದರು.
ಜೇವರ್ಗಿ ಭಾಗದಲ್ಲಿ ನೀರಿನ ಅಭಾವ ಹೆಚ್ಚಾಗಿದ್ದು, ಮಹಾರಾಷ್ಟ್ರ ಸರ್ಕಾರಕ್ಕೆ ಒತ್ತಾಯ ಮಾಡಿ ಭೀಮಾ ನದಿ ನೀರು ಬಿಡುವಂತೆ ಮಾಡಬೇಕು ಎಂಬ ಬೇಡಿಕೆ ಬಗ್ಗೆ ಕೇಳಿದಾಗ, “ನಮ್ಮ ಸರ್ಕಾರ ಈಗಾಗಲೇ ಪತ್ರ ಬರೆದಿದ್ದು, ತೆಲಂಗಾಣದವರೂ ಕೇಳುತ್ತಿದ್ದಾರೆ. ಇಲ್ಲಿ ಸ್ವಲ್ಪ ಪ್ರಮಾಣದ ನೀರು ಮಾತ್ರ ಇದೆ. ನಮ್ಮ ರಾಜ್ಯ ಕಾಪಾಡಿಕೊಂಡು ಬೇರೆ ರಾಜ್ಯಕ್ಕೆ ಸಹಕಾರ ನೀಡಲು ನಾವು ಸಿದ್ಧವಿದ್ದೇವೆ. ಬೇರೆ ರಾಜ್ಯಗಳು ನಮಗೆ ಸಹಕಾರ ನೀಡಬೇಕು” ಎಂದು ತಿಳಿಸಿದರು.
ಇದನ್ನು ನೋಡಿ : ನಿಮ್ಮದು ನಮ್ಮ ಪರಿವಾರ ಅಲ್ಲ, ನಿಮ್ಮದು ಸಂಘಪರಿವಾರ – ಪ್ರಕಾಶ್ ರೈ Janashakthi Media