ತಿನ್ನಲು ಅನ್ನವಿಲ್ಲ-ಕುಟುಂಬ ಬೀದಿಗೆ ಬಿದ್ದಿದೆ: ದಯಾಮರಣ ಕೋರಿ ಪತ್ರ ಬರೆದ ಬಿಎಂಟಿಸಿ ಚಾಲಕ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಚಾಲಕನೊಬ್ಬ ದಯಾ ಮರಣ ಕೋರಿ ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ರಾಜ್ಯದ ಮುಖ್ಯಮಂತ್ರಿ, ಸಾರಿಗೆ ಸಚಿವರಿಗೆ ಪತ್ರ ಬರೆದಿದ್ದಾರೆ. ಬಿಎಂಟಿಸಿ ನೌಕರ ಶಂಬುಲಿಂಗಯ್ಯ ಚಿಕ್ಕಮಠ ಪತ್ರ ಬರೆದಿದ್ದು, ತಿನ್ನಲು ಅನ್ನವಿಲ್ಲ-ನಮ್ಮ ಕುಟುಂಬ ಬೀದಿಗೆ ಬಿದ್ದಿದೆ, ಮನೆ ಬಾಡಿಗೆ ಕಟ್ಟಲು ಸಹ ಆಗುತ್ತಿಲ್ಲ ಎಂದು ತಮ್ಮ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ.

2021ರ ಏಪ್ರಿಲ್‌ನಲ್ಲಿ ನಡೆದ ಮುಷ್ಕರದಲ್ಲಿ ನಾನು ಭಾಗಿಯಾಗಿರಲಿಲ್ಲ. ಆದರೂ ಬಿಎಂಟಿಸಿ ಅಧಿಕಾರಿಗಳು ನನ್ನನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಒಂದು ವರ್ಷದಿಂದ ಮಾಡಲು ಕೆಲಸವಿಲ್ಲ, ಈ ಬಗ್ಗೆ ಸಾಕಷ್ಟು ಬಾರಿ ಸಾರಿಗೆ ಸಚಿವರಿಗೆ ಮನವಿ ಮಾಡಿದರೂ ನ್ಯಾಯ ಸಿಗಲಿಲ್ಲ. ಹಾಗಾಗಿ ನನಗೆ ಮತ್ತು ನನ್ನ ಹೆಂಡತಿ ಮಕ್ಕಳಿಗೆ ದಯಾ ಮರಣ ಕೊಡಿ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ಶ್ರೀರಾಮುಲು ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಈಗಾಗಲೇ ವಜಾಗೊಂಡಿರುವ ಸುಮಾರು 5 ರಿಂದ 10 ಮಂದಿ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಸರ್ಕಾರ ವಜಾಗೊಂಡ ನೌಕರರಿಗೆ ಮತ್ತೆ ಕೆಲಸ ನೀಡುತ್ತಿಲ್ಲ. ಪ್ರತಿಭಟನೆಗೆ ಕರೆ ಕೊಟ್ಟವರನ್ನು ಮತ್ತು ಭಾಗಿಯಾದವರಿಗೆ ಮಾತ್ರ ಪುನಃ ಕೆಲಸಕ್ಕೆ ಕರೆಸಿಕೊಳ್ಳುತ್ತಿದ್ದಾರೆ. ಹೀಗಾಗಿ ನನಗೆ ಅನ್ಯಾಯವಾಗಿದೆ.

ಸಾರಿಗೆ ಅಧಿಕಾರಿಗಳು ಮುಷ್ಕರದಲ್ಲಿ ಭಾಗವಹಿಸಿದ್ದೀರಿ ಎಂದು ಹೇಳಿದ್ದಾರೆ. ಆದರೆ ಯಾವುದೇ ವಿಚಾರಣೆ ಮಾಡದೇ ಏಕಾಏಕಿ ವಜಾ ಮಾಡಿದ್ದಾರೆ. ಇದರಿಂದ ಸಮಾಜದಲ್ಲಿ ಗೌರವ ಮತ್ತು ನೆಮ್ಮದಿ ಹಾಳಾಗಿದೆ.‌ ಒಂದು ಹೊತ್ತಿನ‌ ಊಟಕ್ಕೂ ಪರದಾಡುವಂತಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *