ನ್ಯಾಯ ಸಿಗಲಿಲ್ಲವೆಂದು ದಯಾಮರಣಕ್ಕಾಗಿ ರಾಷ್ಟ್ರಪತಿಗಳಿಗೆ ಅರ್ಜಿ ಪತ್ರ ಬರೆದ 26 ಜನ

ನೆಲಮಂಗಲ: ವಾಯಿದೇ ಕ್ರಯಕ್ಕೆ ಕೊಟ್ಟಿದ್ದ ಜಮೀನನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಶುದ್ಧ ಕ್ರಮಯ ಮಾಡಿಕೊಂಡು ವಂಚನೆಯಾಗಿದ್ದು ತಮ್ಮ ಕುಟುಂಬಕ್ಕೆ ಅನ್ಯಾಯವಾಗಿದೆ ಎಂದು ಒಂದೇ ಕುಟುಂಬದ 26 ಮಂದಿ ನೆಲಮಂಗಲ ತಹಶೀಲ್ದಾರ್‌ ಕಛೇರಿ ಮುಂಭಾಗ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಅರ್ಜಿ ಹಾಕಲು ಮುಂದಾಗಿರುವ ಘಟನೆ ನಡೆದಿದೆ.

ತ್ಯಾಮಗೊಂಡ್ಲು ಹೋಬಳಿ ತಡಸಿಘಟ್ಟ ಗ್ರಾಮದ 26 ಜನರು ತಹಶೀಲ್ದಾರ್ ಕಚೇರಿ ಬಳಿ ಜಮಾಯಿಸಿದ್ದನ್ನು ಕಂಡು ತಹಶೀಲ್ದಾರ್ ಬೆಚ್ಚಿಬಿದ್ದಿದ್ದಾರೆ. ತಡಸಿಘಟ್ಟ ಗ್ರಾಮದ ನಿವಾಸಿ ಗಂಗಹನುಮಕ್ಕ ಎಂಬುವವರ ಕುಟುಂಬದ 26 ಸದಸ್ಯರು ನಮಗೆ ನ್ಯಾಯ ಕೊಡಿಸಿ ಎಂದು ಅಂಗಲಾಚಿ ಬೇಡಿಕೊಂಡಿದ್ದಾರೆ.

ಇದಕ್ಕೆ ಕಾರಣ ಮುಖ್ಯ ಕಾರಣ, ಇವರ ಪಿತ್ರಾರ್ಜಿತ ಆಸ್ತಿ. ಎಸ್ ತಡಸಿಗಟ್ಟ ಗ್ರಾಮದಲ್ಲಿನ ಸರ್ವೆ ನಂ 73ರಲ್ಲಿ ತಮ್ಮ 3ಎಕರೆ 22ಕುಂಟೆ ಜಮೀನು ಇದೇ ಗ್ರಾಮದ ನಿವಾಸಿ ರಾಜಗೋಪಾಲಯ್ಯ ಎಂಬ ವ್ಯಕ್ತಿಗೆ ಗಂಗಹನುಮಕ್ಕನ ತಂದೆ ದಿವಂಗತ ಭೈರಣ್ಣ 10-06-1981 ರಂದು 3500ರೂಗಳಿಗೆ ವಾಯಿದೇ ಕ್ರಯಕ್ಕೆ ಕೊಟ್ಟಿದ್ದರು. ಆದರೆ ರಾಜಗೋಪಾಲಯ್ಯ ನಕಲಿ ದಾಖಲೆಗಳನ್ನು ಸೃಷ್ಟಿಸಿ ತನ್ನ ರಾಜಕೀಯ ಹಾಗೂ ಹಣದ ಬೆಂಬಲದಿಂದ ಶುದ್ದ ಕ್ರಯ ಮಾಡಿಕೊಂಡು ಮೋಸ ಮಾಡಿದ್ದಾನೆ ಎಂಬುದು ಕುಟುಂಬಸ್ಥರ ಆರೋಪವಾಗಿದೆ.

ಭೈರಣ್ಣ ನಿಧನದ ನಂತರ ಜಮೀನು ವಾಪಸ್ಸು ಪಡೆಯಲು ತೆರಳಿದಾಗ ಇವತ್ತು ನಾಳೆ ಅಂತ ಕಾಲಹರಣ ಮಾಡಿಕೊಂಡು ಬಂದ ರಾಜಗೋಪಾಲಯ್ಯ 2012ರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬೆಂಗಳೂರು ಗ್ರಾ. ಜಿಲ್ಲೆಯ ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಸಲ್ಲಿಸಿ ಈ ದಾವೆ ವಜಾಗೊಳಿಸಿ ಅವನ ಹೆಸರಿಗೆ ಮಾಡಿಕೊಂಡಿದ್ದಾನಂತೆ. ತಮಗೆ ಅನ್ಯಾಯವಾಗಿದೆ ಎಂದು ಭೈರಣ್ಣನ ಕುಟುಂಬಸ್ಥರು ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲು ಹತ್ತಿದ್ದರು. ಅಲ್ಲೂ ಕೂಡ ರಾಜಗೋಪಾಲಯ್ಯನ ನಕಲಿ ದಾಖಲೆಗಳನ್ನು ನೀಡಿ ಸಾಬೀತು ತನ್ನ ಪರವಾಗಿ ತೀರ್ಪು ಬರುವಂತೆ ಮಾಡಿಕೊಂಡಿದ್ದಾನೆ.

ಸ್ಥಳೀಯ ತ್ಯಾಮಗೊಂಡ್ಲು ಠಾಣೆಗೆ ರಾಜಗೋಪಾಲಯ್ಯನ ಬಳಿ ಇರುವ ಶುದ್ಧ ಕ್ರಯ ಪತ್ರದ ಮೇಲೆ ಇರುವ ಸಹಿ ಅಸಲಿ ಅಥವಾ ನಕಲಿ ಎಂದು ತಿಳಿಯಬೇಕಾದರೆ ಆ ಸಹಿಗಳ ಎಫ್.ಎಸ್.ಎಲ್ ಪರೀಕ್ಷೆಯಾಗುವಂತೆ ದೂರು ಸಲ್ಲಿಸುತ್ತಾರೆ. ಆದರೆ ಅಲ್ಲೂ ಕೂಡ ರಾಜಗೋಪಾಲಯ್ಯನ ಕಾಂಚಾಣ ಸದ್ದು ಮಾಡಿರುತ್ತೆ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ.

ರಾಜಗೋಪಾಲಯ್ಯನ ಬಳಿ ಶುದ್ದಕ್ರಯದ ಪತ್ರಗಳಲ್ಲಿ ಇರುವಂತಹ ಸಹಿ ಅಸಲಿಯೋ ನಕಲಿಯೋ ಎಂದು ತಿಳಿಯ ಬೇಕಾದರೆ ಎಫ್​ಎಸ್​ಎಲ್ ಪರೀಕ್ಷೆ ಆಗಬೇಕು. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಕಡೆಯ ಬಾರಿ ಪ್ರಯತ್ನ ಅಂತ ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ನೆಲಮಂಗಲ ತಹಶೀಲ್ದಾರ್ ಮುಖಾಂತರ ಅರ್ಜಿ ಸಲ್ಲಿಸಿದ್ದೇವೆ ಎಂದು ಕುಟುಂಬಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಸದ್ಯ ಅರ್ಜಿ ಸ್ವೀಕರಿಸಿರುವ ನೆಲಮಂಗಲ ತಹಶೀಲ್ದಾರ್ ಸಮಸ್ಯೆ ಈಡೇರಿಸುವ ಭರವಸೆ ನೀಡಿದರು.

Donate Janashakthi Media

Leave a Reply

Your email address will not be published. Required fields are marked *