ಮೈಸೂರು: ಈ ಬಾರಿ ನಾಡಹಬ್ಬ ದಸರಾ ಮಹೋತ್ಸವ ಉದ್ಘಾಟನೆಗೆ ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ಅವರನ್ನು ಆಯ್ಕೆ ಮಾಡಲಾಗಿದೆ.
ಅ.17ರಂದು ಚಾಮುಂಡಿಬೆಟ್ಟದಲ್ಲಿ ಮುಖ್ಯಮಂತ್ರಿ ಸಮ್ಮುಖದಲ್ಲಿ ಅವರು ಚಾಲನೆ ನೀಡಲಿದ್ದಾರೆ. ಈ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಶನಿವಾರ ಇಲ್ಲಿ ಪ್ರಕಟಿಸಿದರು.ಬಿ.ಎಸ್.ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಈ ಆಯ್ಕೆ ಮಾಡಲಾಗಿದೆ.
ಮೈಸೂರಿನ ಪೌರಕಾರ್ಮಿಕರಾದ ಮರಗಮ್ಮ, ವೈದ್ಯಕೀಯ ಅಧಿಕಾರಿ ಡಾ. ನವೀನ್ ಕುಮಾರ್, ನರ್ಸ್ ರುಕ್ಮಿಣಿ, ಆಶಾ ಕಾರ್ಯಕರ್ತೆ ನೂರ್ ಜಾನ್, ಪೊಲೀಸ್ ಕಾನ್ಸ್ ಟೆಬಲ್ ಪಿ.ಕುಮಾರ್, ಸಾಮಾಜಿಕ ಕಾರ್ಯಕರ್ತ ಆಯೂಬ್ ಅಹಮದ್ ಅವರನ್ನು ದಸರಾ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನಿಸಲಾಗುವುದು ಎಂದರು.
ತಜ್ಞರ ತಂಡ ನೀಡಿದ ವರದಿ ಪ್ರಕಾರವಾಗಿಯೇ ದಸರಾ ಆಚರಣೆ ಮಾಡಲಾಗುವುದು. ಇದರಲ್ಲಿ ಯಾವುದೇ ವ್ಯತ್ಯಾಸ ಇರದು. ತಂಡದ ಶಿಫಾರಸಿನ ಅನ್ವಯ ಎಲ್ಲ ಕಾರ್ಯಕ್ರಮಗಳನ್ನು ನಿಗದಿಪಡಿಸುತ್ತೇವೆ. ಈ ಬಗ್ಗೆ ಮುಖ್ಯಮಂತ್ರಿಗೂ ಮಾಹಿತಿ ನೀಡಿದ್ದೇನೆ ಎಂದು ಹೇಳಿದರು.
ಕೊರೊನಾ ವಾರಿಯರ್‌ಗಳಿಗೆ, ವೈದ್ಯಕೀಯ ಕ್ಷೇತ್ರಕ್ಕೆ ಸಂದ ಗೌರವ
ದಸರಾ ಉದ್ಘಾಟನೆಗೆ ನನಗೆ ಸಿಕ್ಕ ಅವಕಾಶ ಕೋವಿಡ್ ವಿರುದ್ಧ ಹೋರಾಟದಲ್ಲಿ ತೊಡಗಿರುವ ಕೊರೊನಾ ವಾರಿಯರ್‌ಗಳಿಗೆ ಹಾಗೂ ವೈದ್ಯಕೀಯ ಕ್ಷೇತ್ರಕ್ಕೆ ಸಂದ ಗೌರವ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಪ್ರತಿಕ್ರಿಯಿಸಿದ್ದಾರೆ.
ನಾನು ಮೈಸೂರಿನಲ್ಲಿ ಪಿಯುಸಿ ಓದುವಾಗ ಸಯ್ಯಾಜಿ ರಾವ್ ರಸ್ತೆಯಲ್ಲಿ ನಿಂತು ಜಂಬೂಸವಾರಿ ವೀಕ್ಷಿಸುತ್ತಿದ್ದೆ. ಆದರೆ, ಬೆಟ್ಟದಲ್ಲಿ ನಡೆಯುವ ಉದ್ಘಾಟನೆ ಕಾರ್ಯಕ್ರಮ ವೀಕ್ಷಿಸಿರಲಿಲ್ಲ. ಈಗ ಉದ್ಘಾಟನೆಗೆ ಅವಕಾಶ ಲಭಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕೋವಿಡ್ ಪರಿಸ್ಥಿತಿಯಲ್ಲಿ ದಸರಾ ನಡೆಯುತ್ತಿದೆ. ಹೀಗಾಗಿ, ಸಾರ್ವಜನಿಕರು ಸರ್ಕಾರದೊಂದಿಗೆ ಕೈ ಜೋಡಿಸಿ ಸಹಕರಿಸಬೇಕು. ತಾಂತ್ರಿಕ ಸಲಹಾ ಸಮಿತಿ ನೀಡಿರುವ ಸಲಹೆಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.