ಉಡುಪಿ: ʻರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವಾರು ಜಿಲ್ಲೆಗಳಲ್ಲಿ ಪ್ರಕರಣಗಳು ಶೂನ್ಯಕ್ಕೆ ತಲುಪಿವೆ. ಹಾಗಾಗಿ ಶಾಲೆ ಆರಂಭಿಸಬಹುದು ಎಂದು ತಜ್ಞರು ಅಭಿಪ್ರಾಯ ನೀಡಿದ್ದಾರೆ. ದಸರಾ ಮುಗಿದ ತಕ್ಷಣವೇ ಶಾಲೆಗಳು ಆರಂಭ ಮಾಡುವ ಬಗ್ಗೆ ತೀರ್ಮಾನಿಸಲಾಗುವುದುʼ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.
ಶಾಲೆಗಳು ಆರಂಭದ ಬಗ್ಗೆ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಟಾಸ್ಕ್‌ಫೋರ್ಸ್ ಸಭೆ ಕರೆಯುತ್ತಾರೆ. ಅಂದು ಅಂತಿಮಗೊಳ್ಳುವ ಸಾಧ್ಯತೆ ಇದೆ. ಜೊತೆಗೆ ದಸರಾ ಮುಗಿದ ತಕ್ಷಣ ಬಿಸಿಯೂಟ ಆರಂಭವಾಗಲಿದೆ. ಆಯಾ ಜಿಲ್ಲೆಯ ಅಧಿಕಾರಿಗಳು ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವರು “ಎಲ್ಲರಿಗೂ ಶಾಲೆ ಕಡ್ಡಾಯ ಮಾಡಿಲ್ಲ, ಮುಂದೆಯೂ ಕಡ್ಡಾಯ ಮಾಡಲ್ಲ. ಆನ್‌ಲೈನ್ ಹಾಗೂ ಆಫ್‌ಲೈನ್ ಎರಡು ಮಾದರಿಯಲ್ಲಿ ತರಗತಿಗಳು ನಡೆಯಲಿದೆ. ಈಗ ಆರಂಭವಾಗಿರುವ ಶಾಲೆಗಳ ಹಾಜರಾತಿ ತೃಪ್ತಿಕರವಾಗಿದೆ,” ಎಂದು ತಿಳಿಸಿದರು.
“ಆನ್‌ಲೈನ್ ತರಗತಿಯಿಂದ ಕೆಲ ಗ್ರಾಮೀಣ ಮಕ್ಕಳಿಗೆ ತೊಂದರೆ ಆಗಿದೆ. ಗ್ರಾಮೀಣ ಭಾಗದಲ್ಲಿ ಹೈಸ್ಕೂಲ್ ಮಕ್ಕಳ ಹಾಜರಾತಿ ಶೇ.90ರಷ್ಟು ಇದೆ. ದಸರಾದ ಮರುದಿನದಿಂದಲೇ ಎಲ್ಲಾ ಶಾಲೆಗಳಲ್ಲಿ ಬಿಸಿಯೂಟ ಆರಂಭಿಸಲಾಗುವುದು,” ಎಂದು ಉಡುಪಿಯಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.