ಮಂಗಳೂರು: ದೇಶದ ಪ್ರಥಮ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜಯಿಯಾದ ಎ ಕೆ ಗೋಪಾಲನ್, ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿ ಜನಸಾಮಾನ್ಯರ ಬದುಕಿನ ಬವಣೆಗಳನ್ನು ವ್ಯಕ್ತಪಡಿಸುತ್ತಿದ್ದ ಗಟ್ಟಿ ದ್ವನಿಯಾಗಿದ್ದರು. ದೇಶದ ಯಾವುದೇ ಮೂಲೆಯಲ್ಲಿ ನಡೆಯುತ್ತಿದ್ದ ಜನತೆಯ ಹೋರಾಟಗಳಲ್ಲಿ ಸ್ವತಃ ಭಾಗವಹಿಸಿ ಧೈರ್ಯ ತುಂಬುತ್ತಿದ್ದರು. ಜಾತಿ ವ್ಯವಸ್ಥೆಯ ವಿರುದ್ದ ಪ್ರಬಲ ಹೋರಾಟ ನಡೆಸಿ ಕೆಳವರ್ಗದ ಜನತೆಯ ಕಣ್ಮಣಿಯಾಗಿದ್ದರು ನಿವೃತ್ತ ಪ್ರಾಧ್ಯಾಪಕ ಬಾಲಕೃಷ್ಣ ಶೆಟ್ಟಿಗಾರ್ ಹೇಳಿದರು.
ಕಮ್ಯುನಿಸ್ಟ್ ಚಳುವಳಿಯ ಮಹಾನ್ ನಾಯಕ ಎ.ಕೆ.ಗೋಪಾಲನ್ ರವರ 45ನೇ ಸಂಸ್ಮರಣಾ ದಿನಾಚರಣೆ ಅಂಗವಾಗಿ ಮಂಗಳೂರಿನ ವಿಕಾಸ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಅವಿರತವಾಗಿ ಶ್ರಮಿಸಿದ್ದು ಮಾತ್ರವಲ್ಲದೆ ರೈತ ಕಾರ್ಮಿಕರ ಹೋರಾಟಗಳನ್ನು ಸ್ವಾತಂತ್ರ್ಯ ಚಳುವಳಿಯೊಂದಿಗೆ ಬೆಸೆಯುವ ಮೂಲಕ ತನ್ನ ಜೀವನದುದ್ದಕ್ಕೂ ದಣಿವರಿಯದೆ ಜನನಾಯಕರಾಗಿ ಮೆರೆದು ಜನತೆಯ ಹೃದಯ ಗೆದ್ದಿದ್ದರು. ಹುಚ್ಚರ ಸಂತೆಯೆಂದು ಕರೆಸಿಕೊಂಡಿದ್ದ ಕೇರಳವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ಎಕೆಜಿ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಪ್ರಗತಿಪರ ಚಿಂತಕ ಡಾ. ಕೃಷ್ಣಪ್ಪ ಕೊಂಚಾಡಿ ಮಾತನಾಡಿ, ಮಾರ್ಕ್ಸ್ವಾದಿ ದೃಷ್ಠಿಕೋನವಿಲ್ಲದೆ ಯಾರೂ ಪರಿಪೂರ್ಣ ಕಮ್ಯುನಿಸ್ಟರಾಗಲು ಸಾಧ್ಯವಿಲ್ಲ ಎಂಬ ವಾಸ್ತವಾಂಶವನ್ನು ಎಕೆಜಿಯವರ ಬದುಕಿನಿಂದ ಕಲಿಯಬೇಕಾಗಿದೆ. ಅವರ ಸಂಪೂರ್ಣ ಸಮರ್ಪಣಾಭಾವ, ಶೋಷಿತ ಹಾಗೂ ಜನಸಾಮಾನ್ಯರ ವಿಮೋಚನೆಗಾಗಿ ನಡೆಸಿದ ಅವಿರತ ಹೋರಾಟ, ಮಾರ್ಕ್ಸ್ವಾದಿ ನಿಲುವುಗಳಿಂದ ಪ್ರೇರಿತವಾದ ಅವರ ಗಾಢವಾದ ಮಾನವೀಯತೆ, ಕಾರ್ಯಕರ್ತರ ಬಗ್ಗೆ ಅವರಿಗಿದ್ದ ಅಪಾರ ವಾತ್ಸಲ್ಯ, ಕಷ್ಟಗಳು ಎದುರಾದಾಗ ಅವರು ಪ್ರದರ್ಶಿಸುತ್ತಿದ್ದ ಧೈರ್ಯ ನಿಜಕ್ಕೂ ಅತ್ಯದ್ಭುತವಾಗಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್ಎಫ್ಐ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಚಂದ್ರಹಾಸ ಜೆ. ಅವರು ತನ್ನ ಎಳೆಯ ಪ್ರಾಯದಲ್ಲೇ ಎಕೆಜಿಯನ್ನು ಕಂಡು ಅವರ ಮಾತುಗಳಿಂದ ಪ್ರೇರಣೆಗೊಂಡಂತಹ ಕ್ಷಣಗಳನ್ನು ಮೆಲುಕು ಹಾಕಿದರು. ತನ್ನ ಜೀವನದ 16 ವರ್ಷಗಳನ್ನು ಜೈಲಿನಲ್ಲಿ ಕಳೆದದ್ದು ಮಾತ್ರವಲ್ಲದೆ ಸ್ವಾತಂತ್ರ್ಯಗೊಂಡ ದಿನದಂದೂ ಕೂಡ ಎಕೆಜಿ ಜೈಲಲ್ಲಿ ಇದ್ದಿರುವುದು ಬ್ರಿಟೀಷರಿಂದ ಅಧಿಕಾರ ಹಸ್ತಾಂತರಗೊಂಡ ದೇಶದ ಆಳುವ ವರ್ಗದ ಮನಸ್ಥಿತಿಯನ್ನು ಅರ್ಥೈಸಬೇಕಾಗಿದೆ ಎಂದು ಹೇಳಿದರು.
ಆರಂಭದಲ್ಲಿ ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿದರೆ, ಕೊನೆಯಲ್ಲಿ ಅಶೋಕ್ ಸಾಲ್ಯಾನ್ ರವರು ವಂದಿಸಿದರು.