ಕಲಬುರಗಿ: ದಲಿತರ ಮೇಲಿನ ದೌರ್ಜನ್ಯ ವಿರೋಧಿ ಸಮಾವೇಶವು ದೆಹಲಿಯಲ್ಲಿರುವ ಹರಕಿಶನ್ ಸಿಂಗ್ ಸುರ್ಜಿತ್ ಭವನದಲ್ಲಿ ನವೆಂಬರ್ 5ರಂದು ಹಮ್ಮಿಕೊಳ್ಳಲಾಗಿದ್ದು, ಈ ಸಮಾವೇಶಕ್ಕೆ ರಾಜ್ಯದಿಂದ 25 ಮಂದಿ ಭಾಗವಹಿಸಲಿದ್ದಾರೆ ಎಂದು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ರಾಷ್ಟ್ರೀಯ ಮಂಡಳಿ ಸದಸ್ಯ ಡಾ. ಮಹೇಶಕುಮಾರ್ ರಾಠೋಡ್ ಹೇಳಿದರು.
ಸಮಾವೇಶ ಕುರಿತಾಗಿ ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಾ. ಮಹೇಶಕುಮಾರ್ ರಾಠೋಡ್, ದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಕಳೆದೊಂದು ದಶಕದಲ್ಲಿ ತೀವ್ರಗತಿಯಲ್ಲಿ ಏರಿಕೆಯಾಗಿದೆ. ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಕಾಲದಲ್ಲಿನ ಪ್ರಕರಣಗಳು ನಾಲ್ಕು ಲಕ್ಷದಷ್ಟು ದಾಟಿವೆ. 2021ರಲ್ಲಿಯೇ 61 ಸಾವಿರ ಪ್ರಕರಣಗಳು ದಾಖಲಾಗಿವೆ. ಇದು ಅತ್ಯಂತ ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಸೇರಿದಂತೆ ದಲಿತರ, ಕೃಷಿ ಕೂಲಿಕಾರರ, ಮಹಿಳೆಯರ ಮತ್ತು ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯಗಳನ್ನು ವಿರೋಧಿಸಿ ದೆಹಲಿಯಲ್ಲಿ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ರಾಮಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ ದೇಶದ ಎಲ್ಲ ರಾಜ್ಯಗಳಿಂದ ಆಯ್ದ 750 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಸಮಾವೇಶದಲ್ಲಿ ದಲಿತ ಶೋಷಣೆ ಮುಕ್ತಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ಸುಭಾಷಿನಿ ಅಲಿ, ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿ.ಎಸ್. ನಿರ್ಮಲ್, ಭಾರತೀಯ ಖೇತ್ ಮಜದೂರ್ ಯೂನಿಯನ್ ರಾಷ್ಟ್ರೀಯ ಅಧ್ಯಕ್ಷ ಎನ್. ಪೆರಿಸ್ವಾಮಿ, ಬಿಕೆಎಂಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಿ.ಎಸ್. ಗೋರಾ ಅವರು ಭಾಗವಹಿಸಿ ಮಾತನಾಡುವರು ಎಂದು ಅವರು ಹೇಳಿದರು.
ಸಮಾವೇಶದಲ್ಲಿ ಕರ್ನಾಟಕವೂ ಸೇರಿದಂತೆ ದೇಶದಲ್ಲಿ ತೀವ್ರವಾಗಿ ಹೆಚ್ಚುತ್ತಿರುವ ದಲಿತರ ಮೇಲಿನ ದೌರ್ಜನ್ಯಗಳ ಕುರಿತು ಚರ್ಚಿಸಿ, ಆ ದೌರ್ಜನ್ಯಗಳನ್ನು ತಡೆಗಟ್ಟುವಲ್ಲಿ ರಾಷ್ಟ್ರಮಟ್ಟದಲ್ಲಿ ದಲಿತಾಂದೋಲನವನ್ನು ಗಟ್ಟಿಯಾಗಿ ಸಂಘಟಿಸುವ ಮೂಲಕ ದಲಿತರ ಹಕ್ಕುಗಳಿಗಾಗಿ ಸಂಘಟಿತ ಬಲಿಷ್ಠ ಹೋರಾಟ ರೂಪಿಸುವುದರ ಕುರಿತು ಚರ್ಚೆಯಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಭೀಮಾಶಂಕರ್ ಮಾಡಿಯಾಳ್, ಸಾಗರ್ ರಾಠೋಡ್ ಮುಂತಾದವರು ಉಪಸ್ಥಿತರಿದ್ದರು.