ಹಾಸನ: ಜಿಲ್ಲೆಯಲ್ಲಿ ದಲಿತರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ ಹಾಗೂ ಸಂವಿಧಾನ ವಿರೋಧಿ ಸಂಘ ಪರಿವಾರ ಶಕ್ತಿಗಳ ನಡೆ ಖಂಡಿಸಿ ನಗರದಲ್ಲಿಂದು(ಸೆಪ್ಟಂಬರ್ 15) ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದವು.
ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಮೆರವಣಿಗೆ ಎನ್.ಆರ್.ವೃತ್ತದ ಮೂಲಕ ಜಿಲ್ಲಾಸ್ಪತ್ರೆ ಮುಂಭಾಗ ಹಾಕಿದ್ದ ವೇದಿಕೆಗೆ ಆಗಮಿಸಿತು. ಈ ವೇಳೆ ದಲಿತರಿಗೆ ರಕ್ಷಣೆ ನೀಡದ, ತೊಂದರೆ, ದಬ್ಬಾಳಿಕೆ ಮಾಡುತ್ತಿರುವವರ ವಿರುದ್ಧ ಯಾವುದೇ ಕ್ರಮಕೈಗೊಳ್ಳದ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ, ಪ್ರಗತಿಪರ ಚಿಂತಕ ದಿನೇಶ್ ಅಮೀನ್ ಮಟ್ಟು, ದೇಶದಲ್ಲಿ ಸಂವಿಧಾನ ಮತ್ತು ಅಟ್ರಾಸಿಟಿ ಕಾಯಿದೆ ದುರ್ಬಲ ಮಾಡಲು ಅನೇಕ ಪ್ರಯತ್ನ ನಡೆಯುತ್ತಲೇ ಇವೆ ಎಂದು ಕಳವಳ ವ್ಯಕ್ತಪಡಿಸಿದರು.
ನಾವೆಲ್ಲರೂ ಇಂದು ದೈರ್ಯದಿಂದ ಬದುಕಲು ಇರುವ ಒಂದೇ ಒಂದು ಆಯುಧ ಎಂದರೆ ಸಂವಿಧಾನ. ಅದನ್ನೇ ಬುಡಮೇಲು ಮಾಡಲು ಮುಂದಾಗಿರುವ ಸರಕಾರಗಳ ನಡೆ ಬಗ್ಗೆ ಜನರು ಯೋಚಿಸಬೇಕಿದೆ ಎಂದರು. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ, ದಲಿತರ ಮೇಲೆ ಹಲ್ಲೆ, ದೌರ್ಜನ್ಯ ನಡೆಯುತ್ತಲೇ ಇವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ನಡೆಯುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ರಾಷ್ಟ್ರೀಯ ಅಪರಾಧ ದಾಖಲು ವರದಿಯ ಪ್ರಕಾರ ದೇಶದಲ್ಲಿ ಪ್ರತಿ 16 ನಿಮಿಷಕ್ಕೆ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಪ್ರತಿದಿನ 13 ದಲಿತರ ಕೊಲೆ, 4 ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗುತ್ತಿವೆ. ಎಂಬುದು ಅಂಕಿ ಅಂಶಗಳನ್ನು ಕೇಂದ್ರ ಸರ್ಕಾರವೇ ಬಹಿರಂಗಪಡಿಸಿದೆ ಎಂದು ವಿವರಿಸಿದರು.
ಇಂದಿಗೂ ಪರಿಶಿಷ್ಟ ಜಾತಿ, ಪಂಗಡದವರ ಮೇಲೆ ನಡೆದಿರುವ ಸಾವಿರಾರು ದೌರ್ಜನ್ಯ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಸಕಲೇಶಪುರದಲ್ಲಿ ನಡೆದ ಘಟನೆ ನೋಡಿದರೆ ಇತಿಹಾಸದ ಚಕ್ರದ ಹಿಂದೆ ಹೋಗಬೇಕಿತ್ತು, ಆದರೆ ವಿರೋಧಿ ದಿಕ್ಕಿಗೆ ಹೋಗುತ್ತಿದೆ ಎಂದು ಆತಂಕ ಹೊರ ಹಾಕಿದರು.
ದೇಶದಲ್ಲಿ ದಲಿತರು, ಹಿಂದುಳಿದ ಹಾಗೂ ಮುಸ್ಲಿಮರನ್ನು ಒಡೆಯುವ ಶಕ್ತಿ ಸೃಷ್ಟಿಯಾಗುತ್ತಿದೆ. ಹಿಂದುತ್ವದ ಮೇಲೆ ರಾಜಕಾರಣ ಮಾಡುವವರಿಗೆ ದೇವರ ಮೇಲೆ ಎಳ್ಳಷ್ಟು ಭಕ್ತಿ ಇಲ್ಲದಂತಾಗಿದ್ದು, ರಾಮನ ಹೆಸರಿನಲ್ಲಿ ಪೋಸ್ಟರ್‌ಗಳು ಬರೀ ಚುನಾವಣೆ ಗಿಮಿಕ್ ಆಗಿದೆ ಎಂದು ಟೀಕಿಸಿದರು. ಇಂದು ಅಂಬೇಡ್ಕರ್ ಚಿಂತನೆಗಳು ಮಾತ್ರ ಬೀದಿಗೆ ಬರಬೇಕು. ಚಳುವಳಿ ಮೂಲಕ ಸರ್ಕಾರಗಳನ್ನು ಬದಲಾವಣೆ ಮಾಡಬಹುದು. ಅಂತಹ ಕಾರ್ಯಕ್ಕೆ ಜನರು ಮುಂದಾಗುವ ಮೂಲಕ ಉತ್ತಮ ಆಡಳಿತದ ಆಯ್ಕೆಗೆ ಸಹಕರಿಸಬೇಕು ಎಂದು ಕರೆ ನೀಡಿದರು.
ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಧರ್ಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೋಮುವಾದಿ ಸಂಘಟನೆಗಳನ್ನು ಹಿಮ್ಮಟಿಸಬೇಕಿದೆ. ದೇಶದ ಸಂವಿಧಾನ ಅಪ್ರಸ್ತುತಗೊಳಿಸುವ, ದುರ್ಬಲ ಮಾಡುವ ಪ್ರಯತ್ನ ಸತತವಾಗಿ ನಡೆಯುತ್ತಿದ್ದು, ಇದರ ವಿರುದ್ಧ ದಲಿತ ಹಾಗೂ ಹಿಂದುಳಿದ ವರ್ಗದವರು ಸಂಘಟಿತರಾಗಿ ಹೋರಾಡಬೇಕಿದೆ ಎಂದರು.
ಪ್ರತಿಭಟನಾ ಸಭೆಯಲ್ಲಿ ದಲಿತ ಮುಖಂಡರಾದ ಶ್ರೀಧರ್ ಕಲಿವೀರ್, ಹೆಚ್.ಕೆ.ಸಂದೇಶ್, ಆರ್‌ಪಿಐ ಸತೀಶ್, ಹೆತ್ತೂರು ನಾಗರಾಜ್, ಎಸ್.ಎನ್.ಮಲ್ಲಪ್ಪ, ರಾಜಶೇಖರ್, ಮಲ್ಲೇಶ್ ಅಂಬುಗ, ಟಿ.ಆರ್.ವಿಜಯಕುಮಾರ್, ಗಣೇಶ್ ವೇಲಾಪುರಿ, ಈರೇಶ್ ಹಿರೇಹಳ್ಳಿ, ಕೆರಗೋಡು ಸೋಮಶೇಖರ್, ಗಂಗಾಧರ್ ಬಹುಜನ್, ಪೃಥ್ವಿ, ಮರಿಜೋಸೆಫ್, ಕೃಷ್ಣದಾಸ್, ಶಂಕರ್ ರಾಜ್, ಅಂತಾರಾಷ್ಟ್ರೀಯ ಕಲಾವಿದ ಕೆ.ಟಿ.ಶಿವಪ್ರಸಾದ್, ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಹೆಚ್.ಆರ್.ನವೀನ್ ಕುಮಾರ್ ಮೊದಲಾದವರಿದ್ದರು.