ದಲಿತ ಬಾಲಕನಿಗೆ ದಂಡ ಪ್ರಕರಣ: ವಿವಿಧ ಪ್ರಗತಿಪರ ಸಂಘಟನೆಗಳಿಂದ ‘ಉಳ್ಳೇರಹಳ್ಳಿ ಚಲೋ’

ಕೋಲಾರ: ಜಿಲ್ಲೆಯ ಮಾಲೂರು ತಾಲ್ಲೂಕಿನ ಉಳ್ಳೇರಹಳ್ಳಿಯಲ್ಲಿನ ಅಸ್ಪೃಶ್ಯತಾ ಆಚರಣೆ ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ‘ಉಳ್ಳೇರಹಳ್ಳಿ ಚಲೋ’ ಬೃಹತ್ ಜಾಥಾ ನಡೆಯಿತು. ದೇವಾಲಯ ಪ್ರವೇಶಕ್ಕಾಗಿ ಅಲ್ಲ, ಬದಲಿಗೆ ಘನತೆ ಮತ್ತು ಸ್ವಾಭಿಮಾನಕ್ಕಾಗಿ ನಮ್ಮ ನಡಿಗೆ ಎಂಬ ಘೋಷಣೆಯೊಂದಿಗೆ ನಡೆದ ಈ ಹೋರಾಟದಲ್ಲಿ ಜೈಭೀಮ್ ಘೋಷಣೆಗಳು ಮೊಳಗಿದವು.

ಮಾಲೂರು ತಾಲೂಕಿನ ಉಳ್ಳೇರಹಳ್ಳಿ ಗ್ರಾಮದಲ್ಲಿ ದೇವರ ಗುಜ್ಜಕೋಲು ಮುಟ್ಟಿದ ಕಾರಣಕ್ಕೆ ದಲಿತ ಬಾಲಕನಿಗೆ ದಂಡ ವಿಧಿಸಿದ್ದನ್ನು ಖಂಡಿಸಿ ನಡೆದ ಈ ಬೃಹತ್‌ ಪ್ರತಿಭಟನಾ ಮೆರವಣಿಗೆಯಲ್ಲಿ 5 ಸಾವಿರಕ್ಕೂ ಹೆಚ್ಚಿ ಮಂದಿ ಭಾಗವಹಿಸಿದ್ದರು.   ಪಟ್ಟಣ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದಲೂ ಜನರು ವಾಹನಗಳಲ್ಲಿ ಆಗಮಿಸಿದರು. ಜಾಥಾದ ವೇಳೆ ದಲಿತ ಸಂಘಟನೆಗಳ ಕಾರ್ಯಕರ್ತರು ಗ್ರಾಮದ ಭೂತಮ್ಮನ ದೇವಾಲಯದ ಎದುರು ಧರಣಿ ನಡೆಸಿ ಘೋಷಣೆ ಕೂಗಿದರು. ಬಳಿಕ ದೇಗುಲದಿಂದ ಗುಜ್ಜಕೋಲು ಹೊರತಂದು ದೇಗುಲದ ಮೇಲೆ ಧ್ವಜ ಕಟ್ಟಿದರು. ಈ ವೇಳೆ ನೂಕಾಟ ನಡೆದಿದ್ದು, ದಲಿತ ಬಾಲಕನಿಗೆ ದಂಡ ವಿಧಿಸಿದ ಕ್ರೂರ ಮನಸ್ಸುಗಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು.

ದಲಿತ ಹೋರಾಟಗಾರರು ಟೇಕಲ್ ರೈಲು ನಿಲ್ದಾಣದಿಂದ ಮೆರವಣಿಗೆ ಆರಂಭಿಸಿ ಉಳ್ಳೇರಹಳ್ಳಿಯ ಸಂತ್ರಸ್ತ ದಲಿತ ಕುಟುಂಬವನ್ನು ಭೇಟಿ ಮಾಡಿದರು. ದಾರಿಯುದ್ದಕ್ಕೂ ಜೈ ಭೀಮ್ ಘೋಷಣೆಗಳೊಂದಗೆ, ಜಾತಿಪದ್ದತಿ, ಆಸ್ಪೃಶ್ಯತೆ ವಿರುದ್ಧ ಕಿಡಿಕಾರಿದರು. ಇಂದಿಗೂ ಜಾರಿಯಲ್ಲಿರುವ ಅಸ್ಫೃಶ್ಯತೆ ಮತ್ತು ಜಾತಿಪದ್ದತಿಯನ್ನು ತೊಡೆದುಹಾಕಲು ದೀರ್ಘ ಹೋರಾಟ ಮಾಡಬೇಕಿದೆ. ಅದರೊಟ್ಟಿಗೆ ದಲಿತರೊಳಗೆ ಇರುವ ಜಾತಿಪದ್ದತಿಯನ್ನು ಸಹ ತೊಡೆದು ಹಾಕಬೇಕು. ಎಲ್ಲಿಯೇ ಜಾತಿ ದೌರ್ಜನ್ಯ ಅನ್ಯಾಯ ನಡೆದರೂ ಸಹ ದಲಿತರು ಒಗ್ಗಟ್ಟಾಗಿ ಹೋರಾಡಬೇಕು ಎಂದು ಹೋರಾಟಗಾರರು ಕರೆ ನೀಡಿದರು.

ಗ್ರಾಮದ ಮಧ್ಯ ಭಾಗದಲ್ಲಿರುವ ಅಶ್ವಥಕಟ್ಟೆಯ ಬಳಿ ಪ್ರತಿಭಟನಾಕಾರರು ಸಭೆ ನಡೆಸಿದರು. ಪ್ರಜಾ ಪರಿವರ್ತನೆ ಸಂಘಟನೆಯ ರಾಜ್ಯ ಅಧ್ಯಕ್ಷ ಬಿ.ಗೋಪಾಲ್ ಮಾತನಾಡಿ, ದೇಶದಲ್ಲಿ 9,315 ಜಾತಿಗಳು ಇದ್ದು, ಪರಿಶಿಷ್ಟ ಜಾತಿಯಲ್ಲಿಯೂ 1,600 ಉಪಜಾತಿಗಳು ಇವೆ. ಇದರಲ್ಲಿ ಒಂದು ಮೇಲು ಒಂದು ಕೀಳು ಎಂಬ ಬೇಧಗಳಿವೆ.

ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಸಂದೇಶ್ ಮಾತನಾಡಿ, ‘ಸೆಪ್ಟಂಬರ್‌ 8ರಂದು ಪ್ರಕರಣ ನಡೆದಿದ್ದು, 12 ದಿನ ಬೆಳಕಿಗೆ ಬಂದಿರಲಿಲ್ಲ. ನಮಗೆ ವಿಷಯ ತಿಳಿದ ಕೂಡಲೇ ಸಂತ್ರಸ್ತೆ ಶೋಭಾ ಅವರ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದೆ. ಆನಂತರ ಮಾಸ್ತಿ ಠಾಣೆಯಲ್ಲಿ ದೂರು ದಾಖಲಿಸಲಾಯಿತು. ಪೊಲೀಸರು ಆರೋಪಿಗಳನ್ನು ಬಂಧಿಸಿದರು. ಆದರೆ, ಗ್ರಾಮದ ಕೆಲವರು ಈಗ ನನ್ನ ವಿರುದ್ಧವೇ ಅಪಪ್ರಚಾರ ನಡೆಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಪ್ರಜಾಪರಿವರ್ತನ ವೇದಿಕೆ, ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ ಸೇವಾ ಸಮಿತಿ, ದಲಿತ ಹಕ್ಕುಗಳ ಸಮಿತಿ ಸೇರಿದಂತೆ ಹತ್ತಾರು ಸಂಘಟನೆಗಳು ಜೊತೆಗೂಡಿದ್ದವು. ಪಿಚ್ಚಳ್ಳಿ ಶ್ರೀನಿವಾಸ್, ದಸಂಸ ಮುಖಂಡ ವಿಜಯಕುಮಾರ್, ಬಿ.ಗೋಪಾಲ್, ಸಂದೇಶ್, ಗಾಂಧಿನಗರ ನಾರಾಯಣಸ್ವಾಮಿ, ಡಾ.ಅರಿವು ಶಿವಪ್ಪ, ಡಿಎಚ್‌ಎಸ್‌ನ ಪಿ.ವಿ.ರಮಣ, ಶಿವಣ್ಣ, ಭೀಮಸೇನೆಯ ಪಂಡಿತ್ ಮುನಿವೆಂಕಟಪ್ಪ, ಆಂಜಿನಪ್ಪ, ಎ.ಕೆ ವೆಂಕಟೇಶ್, ಹೆಬ್ಬಾಲೆ ವೆಂಕಟೇಶ್, ರಾಮಚಂದ್ರಪ್ಪ, ಲಕ್ಕೂರು ವೆಂಕಟೇಶ್, ಮೈಲಾಂಡಹಳ್ಳಿ ನಾರಾಯಣಸ್ವಾಮಿ, ಕೋದಂಡರಾಂ, ಮುನಿಕೃಷ್ಣಪ್ಪ, ಎಸ್.ಎಂ.ವೆಂಕಟೇಶ್ ಅಶ್ವತ್ಥನಾರಾಯಣ, ಆನಂದ ಸಿದ್ಧಾರ್ಥ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಕಾರ್ಯಕ್ರಮದ ಬಳಿಕ  ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಘೋರ್ಪಡೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಚನ್ನಬಸವಪ್ಪ ಅವರಿಗೆ ಸಂಘಟಕರು ಮನವಿ ಪತ್ರ ನೀಡಿದರು.

Donate Janashakthi Media

Leave a Reply

Your email address will not be published. Required fields are marked *