ಚಿಕ್ಕಮಗಳೂರು: ದಲಿತ ಯುವತಿಯನ್ನು ಮದುವೆಯಾದ ಕಾರಣ ಸ್ವಜಾತಿಯವರು ಯುವಕನ ಕುಟುಂಬಕ್ಕೆ ಬಹಿಷ್ಕಾರ ಹಾಕಿರುವ ಘಟನೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸೋಮಶೇಖರ್ ಎನ್ನುವಾತ ದಲಿತ ಯುವತಿಯನ್ನ ಪ್ರೀತಿಸಿ ಮದುವೆಯಾಗಿದ್ದರು. ಇದನ್ನು ಖಂಡಿಸಿ ಸ್ವಜಾತಿಯವರು ವರನ ಸಂಪೂರ್ಣ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ.
ಈ ಕುಟುಂದ ಜೊತೆ ಯಾರು ಮಾತಾನಾಡುವಂತಿಲ್ಲ, ಯಾವುದೇ ಕಾರ್ಯಕ್ರಮಕ್ಕೂ ಕರೆಯುವಂತಿಲ್ಲ. ಒಂದು ವೇಳೆ ಜೊತೆ ಮಾತಾನಾಡಿದರೆ ಐದು ಸಾವಿರ ದಂಡ ಎಂದು ಘೋಷಿಸಿ ಬಹಿಷ್ಕಾರ ಹಾಕಲಾಗಿದೆ ಎನ್ನಲಾಗಿದೆ.
ಫರ್ಮಾನು ಹೊರಡಿಸಿದ ಊರ ಹಿರಿಯರು : ಸೋಮಶೇಖರ್ ಕುಟುಂಬಕ್ಕೆ ಊರಿನ ದೇವಾಲಯಕ್ಕೆ ಪ್ರವೇಶವನ್ನ ಕೊಡ್ತಿಲ್ಲ, ಯಾರೂ ಕೂಡ ಇವರನ್ನ ಯಾವುದೇ ಕಾರ್ಯಕ್ರಮಕ್ಕೂ ಕರೆಯಬಾರದು ಅಂತಾ ಫರ್ಮಾನು ಹೊರಡಿಸಿದ್ದಾರೆ. ಕೆಲ್ಸನೂ ಯಾರೂ ಕೊಡುವ ಹಾಗಿಲ್ಲ. ಕೆಲ್ಸಾ ಕೊಡೋದು ಇರ್ಲಿ, ಬಹಿಷ್ಕಾರಗೊಂಡಿರುವ ಈ ಕುಟುಂಬದವರನ್ನ ಮಾತನಾಡಿಸಿದ್ರೂ 5 ಸಾವಿರ ರೂ. ದಂಡ ಹಾಕೋದಾಗಿ ಎಚ್ಚರಿಕೆ ನೀಡಿದ್ದಾರಂತೆ. ಇದರಿಂದ ಮಾನಸಿಕವಾಗಿ ನೊಂದಿರುವ ಸೋಮಶೇಖರ್ ಕುಟುಂಬ, ನ್ಯಾಯ ಕೊಡಿಸುವಂತೆ ಜಿಲ್ಲಾಡಳಿತದ ಮೊರೆ ಹೋಗಿದೆ.
ಈ ಬಗ್ಗೆ ಕಳೆದ ಕೆಲ ತಿಂಗಳಿನಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ರೂ ಸಹ ಈ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ. ತಮ್ಮ ಪಾಡಿಗೆ ತಾವು ಜೀವನ ಮಾಡ್ಕೊಂಡು ಇರ್ತೀವಿ ಅಂತಾ ಸುಮ್ಮನಿದ್ರೂ ಸೋಮಶೇಖರ್ ಕುಟುಂಬಕ್ಕೆ ಕಿರುಕುಳ ತಪ್ಪಿಲ್ವಂತೆ. ಇದನ್ನೆಲ್ಲ ನೋಡುತ್ತಿದ್ದರೆ ನಾವು ಯಾವ ಕಾಲದಲ್ಲಿ ಇದ್ದೇವೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಬಹಿಷ್ಕಾರ, ದೌರ್ಜನ್ಯ ನಡೆಸದಂತೆ ಕಾನೂನು ಇದ್ದರು ಜಿಲ್ಲಾಡಳಿತ ಆ ಬಗ್ಗೆ ಜಾಗೃತಿ ಮೂಡಿಸದ ಕಾರಣ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿವೆ.