ದಲಿತ ಯುವಕನ ಸಾವಿಗೆ ನ್ಯಾಯ : ಕೋಲಾರ ಚಲೋ ಮೂಲಕ ಆಗ್ರಹ

ಕೋಲಾರ: ಜಾತಿ ದೌರ್ಜನ್ಯದಿಂದ ಸಾವನ್ನಪ್ಪಿದ ದಲಿತ ಯುವಕ ಉದಯ್ ಕಿರಣ್ ಕುಟುಂಬಕ್ಕೆ ಪರಿಹಾರ ಹಾಗೂ ನ್ಯಾಯಕ್ಕಾಗಿ ಆಗ್ರಹಿಸಿ ವಿವಿಧ ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಘಟನೆ ನಡೆದ ಪೆತ್ತಾಂಡ್ಲಹಳ್ಳಿಯಿಂದ ಜಿಲ್ಲಾಧಿಕಾರಿ ಕಛೇರಿಯವರಗೆ ಸೋಮವಾರ ಬೈಕ್ ರ್ಯಾಲಿ ನಡೆಸಿ ಮನವಿ ಸಲ್ಲಿಸಿ ಆಗ್ರಹಿಸಿದರು.

ಮುಳಬಾಗಿಲು ತಾಲೂಕಿನ ಪೆತ್ತಾಂಡ್ಲಹಳ್ಳಿ ಗ್ರಾಮದ ದಲಿತ ಜನಾಂಗದ ಉದಯ್ ಕಿರಣ್ ಎಂಬ ಯುವಕ ಬೈಕ್​ ಓವರ್​ ಟೆಕ್​ ಮಾಡಿದ್ದಕ್ಕೆ ಅದೇ ಗ್ರಾಮದ ಕೆಲವು ಸವರ್ಣೀಯ ಜಾತಿಯ ಯುವಕರು ಆತನನ್ನು ಕಂಬಕ್ಕೆ ಕಟ್ಟಿಹಾಕಿ ಹೊಡೆದಿದ್ದಾರೆ ಇದರಿಂದಾಗಿ ಮನನೊಂದು ಉದಯ್ ಕಿರಣ್ ಕಳೆದ ನವೆಂಬರ್ 30 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಇದು ನಾಗರೀಕ ಸಮಾಜ ತಲೆತಗ್ಗಿಸುವ ಘಟನೆಯಾಗಿದ್ದು ಜಿಲ್ಲಾಡಳಿತ ಹಾಗೂ ಸರಕಾರ ಕೂಡಲೇ ಆತ್ಮಹತ್ಯೆ ಮಾಡಿಕೊಂಡ ಯುವಕನ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವಕನ ತಾಯಿ ರೆಡ್ಡೆಮ್ಮ ಮಾತನಾಡಿ ಜಾತಿ ವ್ಯವಸ್ಥೆಯಿಂದಾಗಿ ನಮ್ಮ ಮಗನನ್ನು ಕಳೆದುಕೊಂಡಿದ್ದೇವೆ ನಮಗೆ ಬಂದಂತಹ ಕಷ್ಟ ಮತ್ತೆ ಯಾರಿಗೂ ಬರಬಾರದು ಈ ಘಟನೆಗೆ ಕಾರಣವಾದವರಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆಯನ್ನು ನೀಡುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ ಸಮಾಜ ಬೆಳೆದಂತೆ ಇಂತಹ ಅನಾಗರಿಕ ಘಟನೆಗಳು ನಡೆಯುತ್ತಲೇ ಇವೆ ದಲಿತರು ಶೈಕ್ಷಣಿಕವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಮುಂದುವರೆದರೆ ಸಾಕು ಒಂದಲ್ಲ ಒಂದು ರೀತಿಯಲ್ಲಿ ದೌರ್ಜನ್ಯ ಹಿಂಸೆ ನಡೆಸುತ್ತಿದ್ದಾರೆ ಇಂತಹ ಘಟನೆಗಳು ಮತ್ತೆ ಮರುಕಳಿಸದ ರೀತಿಯಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದರು

ಕೂಡಲೇ ಜಿಲ್ಲಾಡಳಿತ ಮತ್ತು ಸರಕಾರ ಮೃತ ಉದಯ್ ಕಿರಣ್ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು, ಕುಟುಂಬದ ಸದಸ್ಯರೊಬ್ಬರಿಗೆ ಸರಕಾರಿ ಉದ್ಯೋಗ ಕಲ್ಪಿಸಬೇಕು, ಕುಟುಂಬ ನಿರ್ವಹಣೆಗೆ ಕನಿಷ್ಠ 5 ಎಕರೆ ಭೂಮಿಯನ್ನು ಮಂಜೂರು ಮಾಡಬೇಕು ಜೊತೆಗೆ ಮನೆ ಮತ್ತು ನಿವೇಶನ ನೀಡಬೇಕು ಎಂದು ಒತ್ತಾಯಿಸಿದರು

ಜಿಲ್ಲೆಯಲ್ಲಿ ಜಾತಿ ದೌರ್ಜನ್ಯ ಪ್ರಕರಣಗಳು ಮರುಕಳಿಸದಂತೆ ಜಿಲ್ಲಾಡಳಿತ ಸಮಾಜ ಕಲ್ಯಾಣ ಇಲಾಖೆ ಹಾಗೂ ಪೋಲೀಸ್ ಇಲಾಖೆಯ ವತಿಯಿಂದ ಜಾತಿಯ ಸಂಬಂಧಿಸಿದ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಉದಯ್ ಕಿರಣ್ ಸಾವಿಗೆ ಕಾರಣವಾದವರ ಮೇಲೆ ಕಾನೂನು ಕ್ರಮ ಕೈಗೊಂಡು ಆರೋಪಿಗಳನ್ನು ಗಡಿಪಾರು ಮಾಡಬೇಕು ಜೊತೆಗೆ ಮೃತನ ಕುಟುಂಬಕ್ಕೆ ಕಾನೂನು ಹೋರಾಟ ಪೂರ್ವಗೊಳ್ಳುವವರೆಗೂ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮನವಿ ಸ್ವೀಕರಿಸಿ ಮಾತನಾಡಿ ಜಿಲ್ಲೆಯಲ್ಲಿ ಇಂತಹ ಜಾತಿ ದೌರ್ಜನ್ಯ ಘಟನೆಗಳು ನಡೆಬಾರದು ಎಷ್ಟೋ ಬಾರಿ ಜಾಗೃತಿ ಮೂಡಿಸಿದ್ದರೂ ನಡೆದಿದ್ದು ನಾನು ಕೂಡ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಈಗಾಗಲೇ ಜಿಲ್ಲಾಡಳಿತದಿಂದ ಒಂದಿಷ್ಟು ಪರಿಹಾರ ನೀಡಲಾಗಿದ್ದು ಮುಂದಿನ ಪರಿಹಾರಕ್ಕೆ ಸರಕಾರದ ಗಮನಕ್ಕೆ ತರಲಾಗುತ್ತದೆ ಎಂದರು

ಈ ಪ್ರತಿಭಟನೆಯ ನೇತೃತ್ವವನ್ನು ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಯೋಜಕ ಮೆಕಾನಿಕ್ ಶ್ರೀನಿವಾಸ್, ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ, ಡಿಎಸ್ಎಚ್ ಜಿಲ್ಲಾ ಸಂಚಾಲಕ ಪಿ.ತಂಗರಾಜ್, ಡಿಎಸ್ಎಸ್ ಜಿಲ್ಲಾ ಸಂಚಾಲಕ ಹಾರೋಹಳ್ಳಿ ರವಿ, ಮುಖಂಡರಾದ ಪುಣ್ಯಹಳ್ಳಿ ಶಂಕರ್, ಗುಜ್ಜಮಾರಂಡಹಳ್ಳಿ ಜಗದೀಶ್, ಯಲ್ಲಪ್ಪ, ಭೀಮರಾಜ್ ಮೃತನ ಪೋಷಕರಾದ ರೆಡ್ಡೆಮ್ಮ, ವೆಂಕಟೇಶಪ್ಪ, ಬೇವಹಳ್ಳಿ ನಾಗರಾಜ್ ಮುಂತಾದವರು ಇದ್ದರು

Donate Janashakthi Media

Leave a Reply

Your email address will not be published. Required fields are marked *