ಕಂಬಕ್ಕೆ ಕಟ್ಟಿ ಹಾಕಿ ದಲಿತ ಬಾಲಕನಿಗೆ ಥಳಿಸಿದ ಸವರ್ಣೀಯರು

ಚಿಂತಾಮಣಿ: ಸರ್ವಣೀಯರ ಗುಂಪೊಂದು 14 ವರ್ಷದ ದಲಿತ ಸಮುದಾಯದ ಬಾಲಕನನ್ನು ಕಂಬಕ್ಕೆ ಕಟ್ಟಿ ಹಾಕಿ ಮನಬಂದಂತೆ ಥಳಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗುರುವಾರ ರಾತ್ರಿ ನಡೆದಿದೆ. ಬಾಲಕನನ್ನು ರಕ್ಷಿಸಲು ಹೋದ ಪೋಷಕರ ಮೇಲೂ ಹಲ್ಲೆ ನಡೆಸಲಾಗಿದೆ.

ಚಿಂತಾಮಣಿ ತಾಲೂಕಿನಿಂದ 10 ಕಿಲೋ ಮೀಟರ್ ದೂರದಲ್ಲಿರುವ ಕೆಂಪದೇನಹಳ್ಳಿಯಲ್ಲಿ ಗುರುವಾರ ರಾತ್ರಿ 9 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿಎಲ್ ನಾಗೇಶ್ ತಿಳಿಸಿದ್ದಾರೆ.  ಶನಿವಾರ ಎಸ್ ಪಿ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎನ್ ಎಂ ನಾಗರಾಜ್, ಇದೊಂದು ದುರಾದೃಷ್ಟಕರ ಘಟನೆ ಎಂದಿದ್ದಾರೆ.  ಬಾಲಕ ಹಾಗೂ ಆತನ ಪೋಷಕರಿಗೆ ತಲಾ 25,000 ರೂಪಾಯಿ ಪರಿಹಾರವನ್ನು ಅವರು ಪ್ರಕಟಿಸಿದ್ದಾರೆ. ಬಾಲಕನ ತಾಯಿ ರತ್ನ ನೀಡಿದ ದೂರಿನ ಆಧಾರದ ಮೇಲೆ ಮಹಿಳೆ ಸೇರಿದಂತೆ 10 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳ ಬಂಧನಕ್ಕಾಗಿ ತಂಡವೊಂದನ್ನು ರಚಿಸಲಾಗಿದೆ.

ಇದನ್ನೂ ಓದಿ : ದಲಿತ ಬಾಲಕ ದೇವರ ಕೋಲು ಮುಟ್ಟಿದ್ದಕ್ಕೆ : ಬಹಿಷ್ಕಾರ, 60 ಸಾವಿರ ರೂ ದಂಡ

9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕ,  ಸರ್ವಣೀಯ ಸಮುದಾಯಕ್ಕೆ ಸೇರಿದ 4 ವರ್ಷದ ಬಾಲಕಿಯೊಬ್ಬಳ ಕಿವಿಯಲ್ಲಿದ್ದ ಚಿನ್ನದ ಓಲೆಯನ್ನು ಕಳ್ಳತನ ಮಾಡಲು ಪ್ರಯತ್ನಿಸಿದ್ದ ಎಂದು ಆರೋಪಿಸಿ ಬಾಲಕನನ್ನು ಹಿಡಿದು ಕಟ್ಟಿಹಾಕಿ ಥಳಿಸಿದ್ದಾರೆ. ಇದನ್ನು ಪ್ರಶ್ನೆ ಮಾಡಿದ್ದ ಬಾಲಕನ ತಂದೆ-ತಾಯಿಯ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಎಂದು ಎಸ್ ಪಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ, ‘ಅಂಬೇಡ್ಕರ್‌ ಸೇವಾ ಸಮಿತಿ-ಕರ್ನಾಟಕ’ದ ಸಂಸ್ಥಾಪಕರಾದ ಸಂದೇಶ್‌‌ ಅವರು ಭೇಟಿನೀಡಿ ಕುಟುಂಬಕ್ಕೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, “ಬಾಲಕನ ಮೇಲೆ ಸವರ್ಣೀಯರು ಹಲ್ಲೆ ಮಾಡುತ್ತಿರುವುದು ಇದುವೆ ಮೊದಲ ಬಾರಿ ಏನೂ ಅಲ್ಲ. ಈ ಹಿಂದೆಯು ಅವರ ಮೇಲೆ ದಾಳಿಗಳು ನಡೆದಿವೆ” ಜಿಲ್ಲಾಡಳಿ ದಲಿತರ ಮೇಲಿನ ದೌರ್ಜನ್ಯವನ್ನು ತಡೆಯಲು ಮುಂದಾಗಬೇಕು ಎಂದು  ಆಗ್ರಹಿಸಿದ್ದಾರೆ.

ವಿಡಿಯೋ ನೋಡಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ

 

 

Donate Janashakthi Media

Leave a Reply

Your email address will not be published. Required fields are marked *