ಭೋಪಾಲ್: ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. 38 ವರ್ಷದ ಬುಡಕಟ್ಟು ಮಹಿಳೆಯೊಬ್ಬರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ದುಷ್ಕೃತ್ಯ ಮೆರೆದಿದ್ದಾರೆ. ಇದರ ವಿಡಿಯೋ ಕೂಡ ಎಲ್ಲೆಡೆ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಿಳೆಯನ್ನು 38 ವರ್ಷದ ರಾಂಪ್ಯಾರಿ ಬಾಯಿ ಶಹಾರೀಯಾ ಎಂದು ಗುರುತಿಸಲಾಗಿದೆ. ಈಕೆ ಬುಡಕಟ್ಟು ಗುಂಪಿಗೆ ಸೇರಿದವರಾಗಿದ್ದಾರೆ. ರಾಂಪ್ಯಾರಿ ತನ್ನ ಜಮೀನಿಗೆ ಹೋದಾಗ ಈ ಘಟನೆ ನಡೆದಿದೆ. ಮೂವರು ಪುರುಷರು ಮಹಿಳೆಗೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದರಿಂದ ಆಕೆ ಕಿರುಚಾಟ ಆರಂಭಿಸಿದ್ದಾಳೆ. ಈ ವೇಳೆ ಅಲ್ಲೇ ಇದ್ದ ಗ್ರಾಮಸ್ಥರ ಗುಂಪೊಂದು ಕ್ಯಾಮರಾದಲ್ಲಿ ಘಟನೆಯನ್ನು ಚಿತ್ರೀಕರಿಸಿದ್ದು, ರಾಂಪ್ಯಾರಿಯನ್ನು ಸ್ಥಳೀಯರು ಕೂಡಲೇ ಆಸ್ಪತ್ರಗೆ ದಾಖಲಿಸಿದ್ದಾರೆ. ಮಹಿಳೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು 80 ಪ್ರತಿಶತದಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದೆ ಎಂದಿದ್ದಾರೆ.
ಇದನ್ನೂ ಓದಿ : ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ – ಅತ್ಯಾಚಾರ – ಕೊಲೆ ಶಂಕೆ?
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮೂವರು ಆರೋಪಿಗಳನ್ನು ಪ್ರತಾಪ್, ಹನುಮತ್ ಮತ್ತು ಶ್ಯಾಮ್ ಕಿರಾರ್ ಎಂದು ಗುರುತಿಸಲಾಗಿದೆ. ಸರ್ಕಾರದ ಕಲ್ಯಾಣ ಯೋಜನೆಯಡಿ ಮಹಿಳೆಯ ಕುಟುಂಬಕ್ಕೆ ಮಂಜೂರಾದ ಭೂಮಿಯನ್ನು ಉಳುಮೆ ಮಾಡಿದ್ದಕ್ಕಾಗಿ ಮೂವರು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.
ಈ ಮೂವರು ವ್ಯಕ್ತಿಗಳ ಕುಟುಂಬದಿಂದ ತನಗೆ ಜೀವ ಬೆದರಿಕೆ ಇದೆ ಎಂದು ರಂಪ್ಯಾರಿ ಬಾಯಿಯ ಪತಿ ಅರ್ಜುನ್ ಸಹಾರಿಯಾ ಸ್ಥಳೀಯ ಪೊಲೀಸರಿಗೆ ಈ ಹಿಂದೆ ದೂರು ನೀಡಿದ್ದರು. ಆದ್ರೆ, ಈ ದೂರಿನ ಬಗ್ಗೆ ಪೊಲೀಸರು ಯಾವುದೇ ಕ್ರಮಕೈಗೊಳ್ಳಲಿಲ್ಲ ಎಂದು ಆರೋಪಿಸಿದ್ದಾರೆ. ಆರೋಪಿಗಳು ಬಿಜೆಪಿ ನಾಯಕರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಕಾರಣ ದೂರನ್ನು ನಿರಾಕರಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.