ಚಿತ್ತೂರು : ನಟ ಸೂರ್ಯ ಅಭಿನಯದ ವಿಶ್ವ ಮನ್ನಣೆ ಪಡೆದ ಜೈ ಭೀಮ್ ಚಿತ್ರದ ಮಾದರಿಯಲ್ಲೇ ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ಘಟನೆಯೊಂದು ನಡೆದಿದೆ. ಜೈಭೀಮ್ ಚಿತ್ರದಲ್ಲಿ ಮಾಡದ ಕಳ್ಳತನವನ್ನು ದಲಿತ ವ್ಯಕ್ತಿಯ ಹಣೆಗೆ ಕಟ್ಟಿ ಪೊಲೀಸರು ಚಿತ್ರಹಿಂಸೆ ನೀಡಿದ್ದರು. ಅದೇ ರೀತಿಯ ಘಟನೆ ಚಿತ್ತೂರಿನಲ್ಲಿ ನಡೆದಿದೆ. ಇಲ್ಲಿ ವ್ಯತ್ಯಾಸವೇನೆಂದರೆ ಚಿತ್ರದಲ್ಲಿ ಹಿಂಸೆ ಅನುಭವಿಸುವುದು ಪುರುಷನಾದರೆ, ಇಲ್ಲಿ ಮಹಿಳೆಯೊಬ್ಬಳು ಪೊಲೀಸರಿಂದ ಚಿತ್ರ ಹಿಂಸೆ ಅನುಭವಿಸಿದ್ದಾಳೆ.
ಹೌದು, ಚಿತ್ತೂರ್ ನಗರ ಠಾಣಾ ವ್ಯಾಪ್ತಿಯ ಲಕ್ಷ್ಮೀ ನಗರ ನಿವಾಸಿ ಉಮಾ ಮಹೇಶ್ವರಿ ಎಂಬ ದಲಿತೆ ಮಹಿಳೆ, ಚಿತ್ತೂರು ಜಿಲ್ಲಾ ಜೈಲು ಮೇಲ್ವಿಚಾರಕ ವೇಣುಗೋಪಾಲ ರೆಡ್ಡಿಯವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಕೆಲ ದಿನಗಳ ಹಿಂದೆ ತನ್ನ ಮನೆಯಲ್ಲಿ 2 ಲಕ್ಷ ರೂಪಾಯಿ ಕಳ್ಳತನವಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದ ವೇಣುಗೋಪಾಲ ರೆಡ್ಡಿ, ಉಮಾ ಮಹೇಶ್ವರಿ ವಿರುದ್ಧ ಆರೋಪ ಹೊರಿಸಿದ್ದರು.
ಈ ಹಿನ್ನೆಲೆಯಲ್ಲಿ ಚಿತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಮಹೇಶ್ವರಿ ಅವರನ್ನು ವಿಚಾರಣೆ ನಡೆಸಲಾಗಿತ್ತು. ಆದರೆ ತನ್ನ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದ್ದು, ಕಳ್ಳತನ ಮಾಡಿದ್ದೇನೆ ಎಂದು ಒಪ್ಪಿಕೊಳ್ಳುವಂತೆ ತನ್ನ ಹಾಗೂ ಪತಿಯ ಮೇಲೆ ಹಲ್ಲೆ ಮಾಡುವುದರ ಜೊತೆಗೆ ಠಾಣೆಯಲ್ಲಿ ಚಿತ್ರಹಿಂಸೆ ನೀಡಲಾಗಿದೆ ಎಂದು ಉಮಾ ಮಹೇಶ್ವರಿ ಕಣ್ಣೀರಿಟ್ಟಿದ್ದಾರೆ.
ಜಾತಿಯ ಹೆಸರಿನಲ್ಲಿ ನನ್ನ ಮೇಲೆ ಪದೇಪದೆ ಆರೋಪ ಮಾಡಲಾಯಿತು. ಕೊನೆಗೆ ನನ್ನ ವಿರುದ್ಧ ಯಾವುದೇ ಸಾಕ್ಷಿಗಳು ಸಿಗದಿದ್ದಾಗ ಮತ್ತು ಕಳ್ಳತನ ಮಾಡಿಲ್ಲ ಎಂದು ಗೊತ್ತಾದಾಗ ನನ್ನನ್ನು ಬಿಟ್ಟರು. ಆದರೂ, ಅವರಲ್ಲಿ ಪಾಪ ಪ್ರಜ್ಞೆ ಇರಲಿಲ್ಲ. ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಯಿತು. ಆಸ್ಪತ್ರೆ ಖರ್ಚನ್ನು ಒದಗಿಸುತ್ತೇವೆ. ಇಲ್ಲಿ ನಡೆದಿದ್ದನ್ನು ಯಾರಿಗೂ ಹೇಳಬೇಡ. ಹೇಳಿದರೆ ಸುಳ್ಳು ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದರು ಎಂದು ಉಮಾ ಮಹೇಶ್ವರಿ ಆರೋಪಿಸಿದ್ದಾರೆ.
ಇದನ್ನೂ ಓದಿ : ಕಾನೂನು ವಿದ್ಯಾರ್ಥಿಯನ್ನು ಥಳಿಸಿದ ಪೊಲೀಸರು
ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಉಮಾ ಮಹೇಶ್ವರಿ ಸಿಎಂ ಜಗನ್ ಬಳಿ ಮನವಿ ಮಾಡಿದ್ದಾರೆ. ಇದೀಗ ಪ್ರಕರಣ ಮಾಧ್ಯಮ ಮೂಲಕ ಸಿಎಂ ಜಗನ್ ಗಮನಕ್ಕೂ ಬಂದಿದ್ದು, ಅವರು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಮತ್ತು ಸಂತ್ರಸ್ತೆಗೆ ಯಾವ ರೀತಿಯಲ್ಲಿ ನ್ಯಾಯ ಸಿಗುತ್ತದೆ ಎಂದು ಕಾದು ನೋಡಬೇಕಿದೆ.