ಲಖನೌ : ಇಬ್ಬರು ದಲಿತ ಸಹೋದರಿಯರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಮ್ಮ ಮಕ್ಕಳ ಮೇಲೆ ಅತ್ಯಾಚಾರ ನಡೆದಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಲಖಿಂಪುರದಲ್ಲಿ 18 ವರ್ಷದೊಳಗಿನ ಇಬ್ಬರು ಸಹೋದರಿಯರ ಶವ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ದೊರೆತಿದೆ. ಇವರ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಅಪ್ರಾಪ್ತೆಯರು ದಲಿತ ಕುಟುಂಬಕ್ಕೆ ಸೇರಿದವರು. ನಿನ್ನೆ ಮಧ್ಯಾಹ್ನ ಕೆಲವರು ಮೋಟಾರ್ ಸೈಕಲ್‌ನಲ್ಲಿ ನನ್ನ ಮಕ್ಕಳನ್ನು ಹೊರಗಡೆ ಕರೆದುಕೊಂಡು ಹೋಗಿದ್ದರು ಎಂದು ತಾಯಿ ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಡುಗಿಯರು ತಮ್ಮ ದುಪಟ್ಟಾಗಳಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ ಎಂದು ಪೊಲೀಸ್ ಇನ್ಸ್ಪೆಕ್ಟರ್ ಲಕ್ಷ್ಮಿ ಸಿಂಗ್ ತಿಳಿಸಿದರು. ಮರಣೋತ್ತರ ಪರೀಕ್ಷೆಯ ವರದಿಗೋಸ್ಕರ ಕಾಯಲಾಗ್ತಿದೆ. ಕುಟುಂಬ ಸದಸ್ಯರು ನೀಡಿರುವ ಮಾಹಿತಿಯಂತೆ ಎಫ್ಐಆರ್ ದಾಖಲಿಸಿರುವುದಾಗಿ ಅವರು ಮಾಹಿತಿ ನೀಡಿದರು.
ಉತ್ತರ ಪ್ರದೇಶದಲ್ಲಿ ಅಮಾನವೀಯ ಕೃತ್ಯಗಳು ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ದಿನದಲ್ಲಿ ಮೂರ್ನಾಲ್ಕು ಅತ್ಯಾಚಾರದ ಪ್ರಕರಣಗಳು ವರದಿಯಾಗುತ್ತಿವೆ. ಯೋಗಿ ಸರಕಾರದ ವಿರುದ್ಧ ವ್ಯಾಪಕ ಜನಾಕ್ರೋಶ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಜನರಿಗೆ ಭದ್ರತೆ ಇಲ್ಲ ಎಂದು ವಿಪಕ್ಷಗಳು ಆರೋಪಿಸಿವೆ.
ಘಟನೆಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಅವರು, “ಉತ್ತರ ಪ್ರದೇಶ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯದಲ್ಲಿ ಮಹಿಳೆಯರಿಗೆ ಯಾವುದೇ ಸುರಕ್ಷತೆ ಇಲ್ಲ. ಯೋಗಿ ಸರ್ಕಾರದಲ್ಲಿ ಗೂಂಡಾಗಳು ಪ್ರತಿದಿನ ತಾಯಂದಿರು, ಸಹೋದರಿಯರಿಗೆ ಕಿರುಕುಳ ನೀಡ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ” ಎಂದು ಟೀಕಿಸಿದ್ದಾರೆ. ಘಟನಾ ಸ್ಥಳದಲ್ಲಿ ಜನರು ಪ್ರತಿಭಟನೆ ನಡೆಸುತ್ತಿರುವ ವಿಡಿಯೋಗಳನ್ನು ಅವರು ಟ್ವೀಟ್ ಮಾಡಿದ್ದಾರೆ.
ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿ, “ಅಷ್ಟಕ್ಕೂ, ಯುಪಿಯಲ್ಲಿ ಮಹಿಳೆಯರ ಮೇಲಿನ ಘೋರ ಅಪರಾಧಗಳು ಹೆಚ್ಚುತ್ತಿರುವುದೇಕೆ?” ಎಂದು ಕೇಳಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ 14 ರಂದು ಹತ್ರಾಸ್ನಲ್ಲಿ 19ರ ದಲಿತ ಯುವತಿ ಮೇಲೆ ನಾಲ್ವರು ಅತ್ಯಾಚಾರವೆಸಗಿರುವ ಘಟನೆ ನಡೆದಿತ್ತು. ಯುವತಿ ದೆಹಲಿಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಕಳೆದ ಕೆಲ ದಿನಗಳ ಹಿಂದೆ ಅಪ್ರಾಪ್ತ ಬಾಲಕಿಯ ಮೇಲೆ ಸಹ ದುಷ್ಕೃತ್ಯ ನಡೆದಿತ್ತು. ಮತ್ತೆ ಈಗ ಅದೇ ದಿನಾಂಕದಂದು ದಲಿತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.