ನವದೆಹಲಿ: ದೇಶದ ರಾಜಧಾನಿ ದಿಲ್ಲಿಯ ‘ಹೈ ಸೆಕ್ಯುರಿಟಿ’ ಎಂದರೆ, ಅತ್ಯುನ್ನತ ಭದ್ರತೆ ಇರುವ ದಂಡು ಪ್ರದೇಶದಲ್ಲಿ 9 ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ, ಅಲ್ಲದೆ ಬಲವಂತದಿಂದ ಸುಟ್ಟು ಹಾಕಿರುವ ಭೀಷಣ ಸುದ್ದಿ ಬಂದಿದೆ. ಜತೆಗೆ ಇದರಲ್ಲಿ ದಿಲ್ಲಿ ಪೋಲೀಸ್ ಪಾತ್ರವೂ ಆಘಾತಕಾರಿಯಾಗಿದೆ ಎಂದೂ ತಿಳಿದು ಬಂದಿದೆ. ಆದರೂ, ಈ ದಿಲ್ಲಿ ಪೋಲೀಸ್ ನೇರವಾಗಿ ಭಾರತದ ಗೃಹಮಂತ್ರಿಗಳ ಅಡಿಯಲ್ಲಿ ಇದ್ದರೂ, ಅವರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿರುವ ಸುದ್ದಿ ಬಂದಿಲ್ಲ. ಇದು ನಿಜವಾಗಿಯೂ ಆಘಾತಕಾರಿ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ಗೃಹಮಂತ್ರಿಗಳಿಗೆ ಬರೆದ ಪತ್ರದಲ್ಲಿ ಖೇದ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದಲ್ಲಿ ನ್ಯಾಯ ಸಿಗುವಂತೆ ಖಾತ್ರಿಗೊಳಿಸಿ, ಆ ಮಗುವಿಗೆ ನ್ಯಾಯದ ಸಂದೇಶ ಗಟ್ಟಿಯಾಗಿ, ಬಲಯುತವಾಗಿ ಹೋಗಬೇಕಾಗಿದೆ ಎಂದು ಅವರು ತಮ್ಮ ಪತ್ರದಲ್ಲಿ ಗೃಹಮಂತ್ರಿಗಳನ್ನು ಕೋರಿದ್ದಾರೆ.
“ಅವಳು ಸ್ಮಶಾನಗ್ರಹದಲ್ಲಿದ್ದ ಕೂಲರ್ನಲ್ಲಿ ನೀರು ತರಲು ಹೋಗಿದ್ದಳು. ಬಹಳ ಸಮಯವಾದರೂ ಹಿಂದೆ ಬರದ್ದರಿಂದ ಹುಡುಕಿ ಹೋದೆ. ಮಗು ಸತ್ತು ಬಿದ್ದಿದ್ದಳು. ಅವಳ ತುಟಿ ಹರಿದಿತ್ತು. ನಾಲಿಗೆ ನೀಲಿಯಾಗಿತ್ತು. ಕಣ್ಣು ತೆರೆದುಕೊಂಡೇ ಇತ್ತು. ಕೂಲರ್ನಿಂದ ನೀರು ತಗೊಳ್ಳುವಾಗ ವಿದ್ಯುತ್ ಶಾಕ್ ತಗಲಿ ಸತ್ತಿದ್ದಾಳೆ ಎಂದು ಸ್ಮಶಾನಗೃಹದ ಪೂಜಾರಿ ಹೇಳಿದ”- ಇದು ಬಾಲಕಿಯ ತಾಯಿ ಬೃಂದಾ ಕಾರಟ್ ರವರ ನೇತೃತ್ವದ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ನಿಯೋಗ ಬಾಲಕಿಯ ಪರಿವಾರದವರನ್ನು ಆಗಸ್ಟ್ 4ರಂದು ಭೇಟಿ ಮಾಡಿದಾಗ ತಿಳಿಸಿದ ಸಂಗತಿ. ಪೋಲಿಸರನ್ನು ಕರೆಸಬೇಡ, ಅದರಿಂದ ತೊಂದರೆಯಾಗ್ತದೆ ಎಂದ ಪೂಜಾರಿ ಗೇಟಿಗೆ ಬೀಗ ಹಾಕಿದ್ದು ಮಾತ್ರವಲ್ಲ, ತಾಯಿ ಅತ್ತು-ಕರೆದು, ಕೂಗಿ-ಕೂಗಿ ಹೇಳುತ್ತಿದ್ದರೂ ಬಾಲಕಿಯ ಹೆಣವನ್ನು ಆ ಪೂಜಾರಿ ಮತ್ತು ಸಹಚರರು ಸುಟ್ಟು ಬಿಟ್ಟರು. ಬಾಲಕಿಯ ತಾಯಿ ಮತ್ತು ತಂದೆ ಕಸ ಸಂಗ್ರಹಿಸುವ ಕೆಲಸ ಮಾಡುತ್ತಿರುವವರು.
ಈ ಭೇಟಿಯ ನಂತರ ಗೃಹಮಂತ್ರಿ ಅಮಿತ್ ಷಾರವರಿಗೆ ಬೃಂದಾ ಕಾರಟ್ ಅವರು ಬರೆದಿರುವ ಪತ್ರದ ಪೂರ್ಣ ಪಾಟವನ್ನು ಈ ಮುಂದೆ ಕೊಡಲಾಗಿದೆ:
“ದಿಲ್ಲಿ ಕಂಟೋನ್ಮೆಂಟ್ ಪ್ರದೇಶದ ಪುರಾನಾ ನಂಗಲ್ಗಾಂವ್ನಲ್ಲಿ ಒಂಭತ್ತು ವರ್ಷದ ದಲಿತ ಬಾಲಕಿಯ ಶಂಕಿತ ಅತ್ಯಾಚಾರ ಮತ್ತು ಕೊಲೆಯ ವಿಷಯದತ್ತ ನಿಮ್ಮ ಗಮನವನ್ನು ಸೆಳೆಯಲು ಮತ್ತು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕೋರಿ ಈ ಪತ್ರ. ಇದು ನಡೆದದ್ದು ಭಾನುವಾದ ಆಗಸ್ಟ್ 1, 2021ರಂದು ಸುಮಾರು ಸಾಯಂಕಲ 5ರಿಂದ 5.30ರ ವೇಳೆಯಲ್ಲಿ. ನಾನು ಮತ್ತು ನನ್ನ ಸಹಯೋಗಿಗಳಾದ ನಾಥು ಪ್ರಶಾದ್, ಆಶಾ ಶರ್ಮ(ದಿಲ್ಲಿ ಸಿಪಿಐ(ಎಂ) ಕಾರ್ಯದರ್ಶಿ ಮಂಡಳಿ ಸದಸ್ಯರು) ಮತ್ತು ಇತರರೊಂದಿಗೆ ಇಂದು ಬಾಲಕಿಯ ತಾಯಿಯನ್ನು ಭೇಟಿಯಾದೆವು. ಕಾಲನಿಯ ನಿವಾಸಿಗಳನ್ನೂ ಭೇಟಿಯಾದೆವು. ಈ ಪ್ರಕರಣದಲ್ಲಿ ನಾಲ್ವರನ್ನು ¨ಬಂಧಿಸಲಾಗಿದೆಯಾದರೂ, ಸದರ್ ಥಾನಾ ಕಂಟೋನ್ಮೆಂಟ್ ಏರಿಯಾದ ಪೋಲಿಸರ ಪಾತ್ರ ಆಘಾತಕಾರಿ ಎಂದೇ ಹೇಳಬೇಕಾಗುತ್ತದೆ.
“ತಾಯಿ ಮಾನಸಿಕ ಆಘಾತದ ಸ್ಥಿತಿಯಲ್ಲಿದ್ದಾಗಲೇ ಕ್ರಿಮಿನಲ್ಗಳು ಮಗುವನ್ನು ಬಲವಂತದಿಂದ ದಹನ ಮಾಡಿದರು. ಬಾಲಕಿಯ ಸಮುದಾಯದವರೂ ಇದರಿಂದ ರೇಗಿ ಹೋಗಿದ್ದಾರೆ. ಏಕೆಂದರೆ ಸಂಪ್ರದಾಯದ ಪ್ರಕಾರ ಸಣ್ಣ ಹುಡುಗಿಯರ ಹೆಣವನ್ನು ಸುಡುವುದಿಲ್ಲ, ಹೂಳುತ್ತಾರೆ. ಆದ್ದರಿಂದ ತಾಯಿ ದಹನಕ್ಕೆ ಒಪ್ಪಿದ್ದಳು ಎಂಬ ಸುಳ್ಳನ್ನು ಹರಡಿಸುತ್ತಿರುವುದು ಕ್ರಿಮಿನಲ್ ಸಂಗತಿಯೇ ಆಗಿದೆ, ಇದು ಹಾಥ್ರಸ್ ಪ್ರಕರಣದಲ್ಲಿ ನಡೆದಿರುವುದನ್ನು ನೆನಪಿಸಿದೆ. ಅಲ್ಲಿ ಪೋಲೀಸರೇ ಬಲಿಯಾದವಳನ್ನು ದಹನ ಮಾಡಿದರು. ಇಲ್ಲಿ ಪೋಲೀಸರು ಸಮಯಕ್ಕೆ ಸರಿಯಾಗಿ ಕ್ರಿಯೆಗಿಳಿಯಲು ನಿರಾಕರಿಸಿದರು. ಎರಡನೆಯದಾಗಿ, ಆಘಾತದ ಸ್ಥಿತಿಯಲ್ಲಿದ್ದ ಕುಟುಂಬದವರಿಗೆ ನೆರವಾಗುವ ಬದಲು, ಪೋಲೀಸರು ಅವರನ್ನು ಕೆಲವು ಗಂಟೆಗಳ ಕಾಲ ಪೊಲೀಸ್ ಠಾಣೆಯಲ್ಲಿ ಬಂಧಿಸಿಟ್ಟರು. ಇದು ಅಮಾನವೀಯ ಮತ್ತು ಸಂಪೂರ್ಣವಾಗಿ ಕಾನೂನುಬಾಹಿರ. ಮೂರನೆಯದಾಗಿ, ಸಮುದಾಯದವರಿಂದ ಪ್ರತಿಭಟನೆಗಳು ಬರುವವರೆಗೂ ಕುಟುಂಬದವರಿಗೆ ಎಫ್ಐಆರ್ ಕೊಡಲಿಲ್ಲ. ಅಲ್ಲದೆ ಪೋಲಿಸರು ಎಫ್ಐಆರ್ನ್ನು ಸರಿಯಾದ ಸೆಕ್ಷನ್ಗಳ ಅಡಿಯಲ್ಲಿ, ಪೋಸ್ಕೋ, ಪರಿಶಿಷ್ಟ ಜಾತಿಗಳ/ಬುಡಕಟ್ಟುಗಳ ಜನಗಳ ಮೇಲೆ ಅತ್ಯಾಚಾರ ತಡೆ ಕಾಯ್ದೆ ಮುಂತಾದವುಗಳ ಅಡಿಯಲ್ಲಿ ಹಾಕಲಿಲ್ಲ.
“ಆ ಮಗುವಿನ ಅಪರಾಧವೆಂದರೆ, ಆಕೆ ಒಂದು ಬಡ, ದಲಿತ, ವಸತಿಹೀನ ಕುಟುಂಬದಿಂದ ಬಂದಿರುವವಳು. ಅವಳು ಸ್ಮಶಾನದಲ್ಲಿನ ಕೂಲರ್ನಿಂದ ಕುಡಿಯುವ ನೀರು ತರಲು ಹೋಗಿದ್ದಳು. ಆಕೆಯ ಕುಟಂಬದವರಿಗೆ ತಲೆಯ ಮೇಲೆ ಸೂರಿಲ್ಲ, ನಿರುದ್ಯೋಗಿಗಳು, ಆಗಾಗ ಕಸಗುಡಿಸುವ ಅಥವ ಕಸಕಡ್ಡಿ ಸಂಗ್ರಹಿಸುವ ಕೆಲಸ ಸಿಗುತ್ತಿತ್ತು. ಅವಳು ಅವರಿಗೆ ಬಹಳ ತಡವಾಗಿ ಹುಟ್ಟಿದ ಏಕೈಕ ಮಗು. ಅದರಿಂದಾಗಿ ಆಕೆ ಇನ್ನೂ ಹೆಚ್ಚು ಅಮೂಲ್ಯ. ಆಕೆಯ ಕೊಲೆ ಹಲವು ಪಟ್ಟು ದೊಡ್ಡದಾದ ಅಪರಾಧ. ಸಾಲದೆಂಬಂತೆ ಆಕೆಯ ತಂದೆ-ತಾಯಿ ಬೆದರಿಕೆ, ಕಾನೂನುಬಾಹಿರ ಬಂಧನವನ್ನೂ ಅನುಭವಿಸಬೇಕಾಯಿತು. ಆ ಪ್ರದೇಶದ ಬಲಿಷ್ಟರು ಆ ಕ್ರಿಮಿನಲ್ಗಳನ್ನು ರಕ್ಷಿಸ ಬಯಸುತ್ತಿರುವುದರಿಂದಾಗಿ ಹೀಗಾಗಿದೆ ಎಂದು ಆ ಪ್ರದೇಶದ ಜನರು ಹೇಳುತ್ತಿದ್ದಾರೆ. ಇದೇ ಪ್ರದೇಶದಲ್ಲಿ ಈ ಮೊದಲೂ ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆದಿವೆ ಎಂಬುದನ್ನು ಗಮನಿಸಬೇಕಾಗಿದೆ.
“ದಿಲ್ಲಿ ಪೋಲೀಸರು ನೇರವಾಗಿ ತಮ್ಮ ಅಡಿಯಲ್ಲಿ ಇದ್ದರೂ, ತಾವು ಇದುವರೆಗೆ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸದಿರುವುದು ನಿಜವಾಗಿಯೂ ಖೇದಕರ. ದಯವಿಟ್ಟು ನೀವು ನ್ಯಾಯ ಸಿಗುವಂತೆ ಖಾತ್ರಿಪಡಿಸಬೇಕು ಎಂಬುದು ನನ್ನ ಕೋರಿಕೆ. ತಮ್ಮ ಪ್ರೀತಿಯ ಮಗಳನ್ನು ಕಳಕೊಂಡಿರುವ ತಂದೆ-ತಾಯಿಗೆ ಪರಿಹಾರ ಎಂದೂ ಸಾಧ್ಯವಿಲ್ಲ. ಆದರೆ ಸರಕಾರ ಅವರಿಗೆ ಹಣಕಾಸು ಬೆಂಬಲವನ್ನು ಖಾತ್ರಿಪಡಿಸಲು ಕರ್ತವ್ಯಬದ್ಧವಾಗಿದೆ. ಇದರಲ್ಲಿ ಶಾಮೀಲಾಗಿದ್ದ ಪೋಲೀಸ್ ಸಿಬ್ಬಂದಿಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದೂ ನಿಮ್ಮನ್ನು ಕೋರುತ್ತೇನೆ. ಈ ಮಗುವಿಗೆ ನ್ಯಾಯದ ಸಂದೇಶ ಗಟ್ಟಿಯಾಗಿ ಮತ್ತು ಬಲಯುತವಾಗಿ ಹೋಗಬೇಕಾಗಿದೆ”.