ದಲಿತ ಬಾಲಕಿ ಶಿಕ್ಷಣಕ್ಕೆ ಅಡ್ಡಿ : 7 ಜನರ ಬಂಧನ

ಶಾಜಾಪುರ : ಹಳ್ಳಿಯ ಇತರ ಬಾಲಕಿಯರು ಶಾಲೆಗೆ ಹೋಗುತ್ತಿಲ್ಲ. ಹಾಗಾಗಿ, ನೀನೂ ಹೋಗಬೇಡ ಎಂದು ಬ್ಯಾಗ್ ಕಿತ್ತುಕೊಂಡು ದಲಿತ ಬಾಲಕಿಯ ಶಿಕ್ಷಣಕ್ಕೆ ಅಡ್ಡಿಪಡಿಸಿದ ಘಟನೆ ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯ ಬವಲಿಯಖೇಡಿ ಗ್ರಾಮದಲ್ಲಿ ನಡೆದಿದೆ.

ಬವಲಿಯಖೇಡಿ ಗ್ರಾಮದ ಸ್ಥಳೀಯ ನಿವಾಸಿಗಳ ಗುಂಪೊಂದು ಅಪ್ರಾಪ್ತ ದಲಿತ ಬಾಲಕಿಗೆ ಶಾಲೆಗೆ ಹೋಗಬೇಡ ಎಂದು ತಡೆ ಒಡ್ಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ.

ಘಟನೆಯ ಹಿನ್ನಲೆ : ಪರಿಶಿಷ್ಟ ಜಾತಿಗೆ ಸೇರಿದ 16 ವರ್ಷದ ಬಾಲಕಿ ಶನಿವಾರ ಮಧ್ಯಾಹ್ನ ಸ್ಥಳೀಯ ಶಾಲೆಯಿಂದ ಮನೆಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಗ್ರಾಮದ ಇತರ ಬಾಲಕಿಯರು ಶಾಲೆಗೆ ಹೋಗದ ಕಾರಣ ನೀನೂ ಹೋಗುವುದು ಬೇಡ ಎಂದು ಬಾಲಕಿಯನ್ನು ದಬಾಯಿಸಿದ ಕೆಲವು ವ್ಯಕ್ತಿಗಳು ಆಕೆಯ ಶಾಲಾ ಬ್ಯಾಗನ್ನು ಕಿತ್ತುಕೊಂಡಿದ್ದರು ಎಂದು ಕೊತ್ವಾಲಿ ಪೊಲೀಸ್ ಠಾಣೆ ಪ್ರಭಾರಿ ಅವಧೇಶ್ ಕುಮಾರ್ ಶೇಷಾ ತಿಳಿಸಿದ್ದಾರೆ.

ಈ ಸಂಬಂಧ ಬಾಲಕಿಯ ಸಂಬಂಧಿಕರು ಮತ್ತು ಬಂಧಿತ ಆರೋಪಿಗಳ ಸಂಬಂಧಿಕರ ನಡುವೆ ಘರ್ಷಣೆ ಭುಗಿಲೆದ್ದಿದ್ದು, ಕೆಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರಿನ ನಂತರ, ಪೊಲೀಸರು ಸೋಮವಾರ ಏಳು ಜನರನ್ನು ಭಾರತೀಯ ದಂಡ ಸಂಹಿತೆಯ ಸಂಬಂಧಿತ ವಿಧಿಗಳ ಅಡಿಯಲ್ಲಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಬಂಧಿಸಿಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಕಡೆಯಿಂದ ಪ್ರತಿ ದೂರು ದಾಖಲಾಗಿದ್ದು, ಬಾಲಕಿಯ ಸಹೋದರ ಮತ್ತು ಇತರ ಮೂವರ ವಿರುದ್ಧವೂ ಹಲ್ಲೆ ಆರೋಪ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಘರ್ಷಣೆಯಲ್ಲಿ ಗಾಯಗೊಂಡವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆರೋಪಿಗಳ ಪೈಕಿ ಒಬ್ಬ ತನ್ನ ಶಾಲಾ ಬ್ಯಾಗನ್ನು ಕಿತ್ತುಕೊಂಡಿದ್ದಾನೆ ಮತ್ತು ತರಗತಿಗಳಿಗೆ ಹಾಜರಾಗುವುದಕ್ಕೆ ಆಕ್ಷೇಪಿಸಿದ್ದಾನೆ ಎಂದು ಆರೋಪಿಸಿ ಬಾಲಕಿ ವಿಡಿಯೊ ಬಿಡುಗಡೆ ಮಾಡಿದ್ದಾಳೆ. ಇದಕ್ಕೆ ವಿರೋಧಿಸಿದಾಗ ಆರೋಪಿಯು ತನ್ನ ಸಹೋದರನ ಮೇಲೆ ಹಲ್ಲೆ ನಡೆಸಿದ್ದಾನೆ ಮತ್ತು ಇತರ ಕುಟುಂಬ ಸದಸ್ಯರನ್ನು ಸಹ ಥಳಿಸಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ.

Donate Janashakthi Media

Leave a Reply

Your email address will not be published. Required fields are marked *