ಬೆಂಗಳೂರು: ಕಮ್ಯೂನಿಸ್ಟ್ ವಿಚಾರಧಾರೆಗಳಿಗೆ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದ, ರಾಜ್ಯ ವಿಧಾನಸಭೆಯಲ್ಲಿ ವಿದ್ಯಾರ್ಥಿ-ಯುವಜನರ, ರೈತ-ಕಾರ್ಮಿಕರ ಜನಪರ ಧ್ವನಿಯಾಗಿದ್ದ ಬಾಗೇಪಲ್ಲಿಯ ಮಾಜಿ ಶಾಸಕ ಜಿ ವಿ ಶ್ರೀರಾಮರೆಡ್ಡಿಯವರು ಹೃದಯಾಘಾತದಿಂದ ನಮ್ಮನ್ನಗಲಿದ್ದಾರೆ. ಅವರ ನಿಧನಕ್ಕೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಸಂತಾಪ ಸೂಚಿಸಿದ್ದಾರೆ.
ಇದನ್ನು ಓದಿ: ಮಾಜಿ ಶಾಸಕ, ಜನಪರ ಹೋರಾಟಗಾರ ಜಿ.ವಿ.ಶ್ರೀರಾಮರೆಡ್ಡಿ ನಿಧನ
ರಾಜ್ಯದಲ್ಲಿ ಜಿವಿಎಸ್ ಎಂದೇ ಚಿರಪರಿಚಿತರಾದ ಅವರು ಜಾತ್ಯತೀತ ಶಕ್ತಿಗಳ ಒಗ್ಗೂಡಿಸುವಲ್ಲಿ, ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುತ್ತಿದ್ದ ರಾಜ್ಯದ ಕೊಂಡಿ ಕಳಚಿದಂತಾಗಿದೆ. ಧುರಿತ ಕಾಲದಲ್ಲಿ ಬದ್ಧತೆಯ ಹೋರಾಟಗಾರನನ್ನು ಈ ನೆಲ ಕಳೆದುಕೊಂಡಿದೆ. ಸಂಗಾತಿ ಶ್ರೀರಾಮರೆಡ್ಡಿಯವರ ಕುಟುಂಬ ಹಾಗೂ ಅಪಾರ ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಕೆಂಪು ನಮನಗಳು ಎಂದು ಸಂತಾಪ ಸೂಚಿಸಿದ್ದಾರೆ.
1999 ಹಾಗೂ 2004 ರಲ್ಲಿ ಬಾಗೇಪಲ್ಲಿ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದ ಅವರು ಅತ್ಯುತ್ತಮ ಸಂಸದೀಯ ಪಟುವಾಗಿದ್ದರು. ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಗಟ್ಟಿಧ್ವನಿಯಾಗಿ ಸೇವೆ ಸಲ್ಲಿಸಿದ್ದರು. ವಿದ್ಯಾರ್ಥಿ ದೆಸೆಯಿಂದಲೇ ಹೋರಾಟಗಳಲ್ಲಿ ಭಾಗವಹಿಸಿ, ನೂರಾರು ಬಾರಿ ಬಂಧನ, ಜೈಲುವಾಸ ಅನುಭವಿಸಿದ್ದಾರೆ. ವಿದ್ಯಾರ್ಥಿ-ಯುವಜನ,-ರೈತ-ಕೃಷಿ ಕಾರ್ಮಿಕರ ಸಂಗಾತಿಯನ್ನು ಈ ನೆಲ ಕಳೆದುಕೊಂಡು ಬಡವಾಗಿದೆ. ಶ್ರೀರಾಮರೆಡ್ಡಿಯವರಿಗೆ ನನ್ನ ಅಂತಿಮ ಸಂತಾಪ ಹಾಗೂ ಕೆಂಪು ನಮನಗಳು ಎಂದು ಬಿ ಕೆ ಹರಿಪ್ರಸಾದ್ ತಿಳಿಸಿದ್ದಾರೆ.