ಚೆನ್ನೈ: ಮಾಂಡೌಸ್ ಚಂಡಮಾರುತದ ಅಬ್ಬರಕ್ಕೆ ತಮಿಳುನಾಡು ರಾಜ್ಯದಲ್ಲಿ ಹಲವು ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಮಳೆ ಸಂಬಂಧಿಸಿದಂತೆ ಚೆನ್ನೈನಲ್ಲಿ ಇಬ್ಬರು ಹಾಗೂ ಕಾಂಚೀಪುರಂನಲ್ಲಿ ಇಬ್ಬರು ಸಾವೀಡಾಗಿದ್ದಾರೆ ಎಂದು ವರದಿಯಾಗಿದೆ.
ಭಾರೀ ಗಾಳಿ ಮಳೆಯಿಂದಾಗಿ ಚೆನ್ನೈನಲ್ಲಿ ಸುಮಾರು 400 ಮರಗಳು ಧರೆಗುರುಳಿವೆ. ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. 205 ಪರಿಹಾರ ಕೇಂದ್ರಗಳಲ್ಲಿ 9,000ಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದಾರೆ. 5 ಕಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಮೂರನ್ನು ತೆರವುಗೊಳಿಸಲಾಗಿದೆ.
ಚೆನ್ನೈನಲ್ಲಿ ಮಳೆಯಿಂದಾಗಿ ಉಂಟಾದ ಭೂಕುಸಿತದ ಸಮಯದಲ್ಲಿ ವಿದ್ಯುತ್ ತಂತಿಗೆ ಸಿಲುಕಿ ಲಕ್ಷ್ಮಿ (45) ಮತ್ತು ರಾಜೇಂದ್ರನ್ (25) ಎಂಬವರು ಮೃತಪಟ್ಟಿದ್ದಾರೆ.
ಎಗ್ಮೋರ್ ಪ್ರದೇಶದಲ್ಲಿ ಬೃಹತ್ ಮರವೊಂದು ಉರುಳಿ ಬಿದ್ದಿದ್ದು, ಇದರಿಂದಾಗಿ ಪಕ್ಕದಲ್ಲೇ ಇದ್ದ ಪೆಟ್ರೋಲ್ ಬಂಕ್ ವೊಂದು ಹಾನಿಯಾಗಿದೆ. ಚೆನ್ನೈ ಟಿ.ನಗರದಲ್ಲಿ ಗೋಡೆಯೊಂದು ಕುಸಿದು ಬಿದ್ದ ಪರಿಣಾಮ ಮೂರು ಕಾರುಗಳಿಗೆ ತೀವ್ರ ರೀತಿಯ ಹಾನಿಯಾಗಿವೆ.
ಚಂಡಮಾರುತದ ಪ್ರಭಾವದಿಂದಾಗಿ ತಿರುವಳ್ಳೂರು, ಚೆನ್ನೈ, ಕಾಂಚೀಪುರಂ, ಚೆಂಗಲ್ಪಟ್ಟು, ರಾಣಿಪೆಟ್ಟೈ, ವೆಲ್ಲೂರು, ತಿರುಪತ್ತೂರ್, ತಿರುವಣ್ಣಾಮಲೈ, ಕೃಷ್ಣಗಿರಿ ಮತ್ತು ಧರ್ಮಪುರಿ ಸೇರಿದಂತೆ ಹಲವೆಡೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ನೀಲಗಿರಿ, ಈರೋಡ್, ಸೇಲಂ, ಕಲ್ಲಕುರಿಚಿ ಮತ್ತು ವಿಲ್ಲುಪುರಂನಲ್ಲಿಯೂ ವ್ಯಾಪಕ ಮಳೆಯಾಗಲಿದೆ ಎಂದು ವರದಿಯಾಗಿದೆ.
ಚಂಡಮಾರುತದಿಂದ ಜನರ ರಕ್ಷಣೆಗಾಗಿ 476 ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸಿಬ್ಬಂದಿಗಳನ್ನು ಒಳಗೊಂಡ 14 ಗುಂಪುಗಳನ್ನು 10 ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ. ನಾಗಪಟ್ಟಣಂ, ತಂಜಾವೂರು, ತಿರುವರೂರ್, ಕಡಲೂರು, ಮೈಲಾದುರೈ, ಚನ್ನೈ, ಕಂಚೆಪಟ್ಟುಪುರಂ, ಚೆನ್ನೈ, ತಿರುವಳ್ಳೂರು ವಿಲ್ಲುಪುರಂ ಜಿಲ್ಲೆಗಳಲ್ಲಿ ರಕ್ಷಣಾ ಪಡೆ ಸಿದ್ಧವಾಗಿವೆ.
ಮಾಂಡೌಸ್ ಚಂಡಮಾರುತವು ಇಂದು ಪುದುಚೇರಿ ಮತ್ತು ಶ್ರೀಹರಿಕೋಟಾವನ್ನು ದಾಟುವ ನಿರೀಕ್ಷೆಯಿರುವುದರಿಂದ ನೆನ್ನೆ ಪುದುಚೇರಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ತಮಿಳುನಾಡಿನ ದಿಂಡುಗಲ್ ಜಿಲ್ಲಾಧಿಕಾರಿ ಸಿರುಮಲೈ ಮತ್ತು ಕೊಡೈಕೆನಾಲ್‌ನ ಶಾಲಾ-ಕಾಲೇಜುಗಳಿಗೆ ಇಂದು ಸಹ ರಜೆ ಘೋಷಣೆ ಮಾಡಿದ್ದಾರೆ. ಚೆನ್ನೈ ಸಂಚಾರ ಪೊಲೀಸರು ಅಕ್ಕರೈ ಮತ್ತು ಕೋವಲಂ ನಡುವಿನ ಪೂರ್ವ ಕರಾವಳಿ ರಸ್ತೆಯಲ್ಲಿ ಈ ಪ್ರದೇಶದಲ್ಲಿ ವಾಸಿಸುವ ನಿವಾಸಿಗಳು ಮತ್ತು ತುರ್ತು ಸೇವೆಗಳ ವಾಹನಗಳನ್ನು ಹೊರತುಪಡಿಸಿ ಮುಂದಿನ ಸೂಚನೆ ಬರುವವರೆಗೆ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಗಾಳಿಯ ವೇಗ ಗಂಟೆಗೆ ಸುಮಾರು 14 ಕಿಮೀ ರಷ್ಟು ದಾಖಲಾಗುತ್ತಿದೆ. ಚೆನ್ನೈ ಮತ್ತು ಹತ್ತಿರದ ಪ್ರದೇಶಗಳಲ್ಲಿ ಈಗಾಗಲೇ ಗಂಟೆಗೆ 50-60 ಕಿಮೀನಷ್ಟು ಗಾಳಿಯ ವೇಗ ಪಡೆದುಕೊಂಡಿದೆ. ಅಲ್ಲಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆಗಳು ದಟ್ಟವಾಗಿದೆ. ಮಳೆ ಮತ್ತು ಹೆಚ್ಚಿನ ವೇಗದ ಗಾಳಿಯು ಮುಂದುವರಿಯುತ್ತದೆ.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಮಾಂಡೌಸ್ ಚಂಡಮಾರುತ ಶುಕ್ರವಾರ ರಾತ್ರಿ 11.30ಕ್ಕೆ ವರದಿಯಂತೆ ಮಾಮಲ್ಲಪುರಂನ ಆಗ್ನೇಯಕ್ಕೆ ಸುಮಾರು 15 ಕಿಮೀ ದೂರದಲ್ಲಿ ಉಂಟಾಗಿದೆ. ಮಾಮಲ್ಲಪುರಂನಲ್ಲಿ ಭೂಕುಸಿತ ಉಂಡಾಗಿದ್ದು, ನಂತರದಲ್ಲಿ ಚೆನ್ನೈನ ಹಲವಾರು ಭಾಗಗಳಲ್ಲಿ ಭಾರೀ ಮಳೆ ಮತ್ತು ಬಿರುಗಾಳಿ ಶುರುವಾಗಿದೆ. ಚೆನ್ನೈನಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಪಟ್ನಂಪಕ್ಕಂ ಕೂಡ ಜಲಾವೃತವಾಗಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರಿಸ್ಥಿತಿ ಎಷ್ಟೇ ಕೆಟ್ಟದಾಗಿದ್ದರೂ ಜನರ ಸುರಕ್ಷತೆಗಾಗಿ ಸರ್ಕಾರ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಿದೆ. ಜಿಲ್ಲಾವಾರು ಚಂಡಮಾರುತದ ಮೇಲ್ವಿಚಾರಣೆ ಕೂಡ ನಡೆಸಲಾಗುತ್ತಿದೆ ಎಂದಿದ್ದಾರೆ.