ಪ್ಯಾಲೆಸ್ಟೈನ್ ಮತ್ತು ಇಸ್ರೇಲ್‌ನಲ್ಲಿ ರಕ್ತಪಾತದ ಚಕ್ರ ತಿರುಗುತ್ತಿದೆ ಎಂದು ಅಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ವಿಶ್ವ ಶಾಂತಿ ಮಂಡಳಿ( ಡಬ್ಲ್ಯುಪಿಸಿ)ಯ ಕಾರ್ಯದರ್ಶಿಮಂಡಳಿ ತನ್ನ ಆಳವಾದ ಕಳವಳವನ್ನು ವ್ಯಕ್ತಪಡಿಸಿದೆ.
ಇದು ಈಗಾಗಲೇ ಎರಡೂ ಕಡೆಯ ನೂರಾರು ನಾಗರಿಕರ ಪ್ರಾಣಹಾನಿಗೆ ಮತ್ತು ಸಾವಿರಾರು ಮಂದಿ ಗಾಯಾಳುಗಳಾಗಲು ಕಾರಣವಾಗಿದೆ. “ಇದು ಹೀಗೆ ಉಲ್ಬಣಗೊಳ್ಳಲು ಮೂಲ ಕಾರಣವೆಂದರೆ ಪ್ಯಾಲೇಸ್ಟಿನಿಯನ್ ನೆಲವನ್ನು ದಶಕಗಳ ಕಾಲ ಇಸ್ರೇಲ್ ಆಕ್ರಮಿಸಿಕೊಂಡಿರುವುದು, ವಸಾಹತುಗಳನ್ನು ನಿರ್ಮಿಸುವ ಧೋರಣೆಗಳು, ಭೂಮಿಯ ದರೋಡೆ, ಪಶ್ಚಿಮ ದಂಡೆಯಲ್ಲಿ ಪ್ರತ್ಯೇಕಿಸುವ ಗೋಡೆ ಮತ್ತು ಆಕ್ರಮಿಸಿಕೊಂಡಿರುವ ಆಡಳಿತದಿಂದ ಪ್ಯಾಲೆಸ್ತೇನಿಯನ್ನರಿಗೆ ಆಗುತ್ತಿರುವ ದೈನಂದಿನ ಅವಮಾನ, ಕಿರುಕುಳ ಮತ್ತು ಹತ್ಯೆಗಳು, ಸಾವಿರಾರು ಪ್ಯಾಲೇಸ್ಟಿನಿಯನ್ನರು ಕೈದಿಗಳಾಗಿರುವುದು, ರಸ್ತೆ ಅಡ್ಡಗಟ್ಟುಗಳು, ತಾರತಮ್ಯ ಮತ್ತು ತಮ್ಮದೇ ಪ್ರಭುತ್ವವನ್ನು ಹೊಂದುವ ಪ್ಯಾಲೇಸ್ಟಿನಿಯನ್ ಜನರ ಅವಿಭಾಜ್ಯ ಹಕ್ಕಿನ ವಂಚನೆ ಎಂದು ವಿಶ್ವ ಶಾಂತಿ ಮಂಡಳಿಯಾಗಿ ನಾವು ಸ್ಪಷ್ಟವಾಗಿ ಹೇಳಬೇಕಾಗುತ್ತದೆ” ಎಂದು ಅದು ಹೇಳಿದೆ.
ಅಂತರ್ರಾಷ್ಟ್ರೀಯ ಕಾನೂನಿನ ಪ್ರಕಾರ ಆಕ್ರಮಣವೇ ಆಗಿರುವುದನ್ನು ಪ್ರತಿರೋಧಿಸುವ ಹಕ್ಕು ಹೊಂದಿರುವ ಪ್ಯಾಲೇಸ್ಟಿನಿಯನ್ ಜನರಲ್ಲಿ ಸಂಚಯಗೊಂಡಿರುವ ಅನ್ಯಾಯ ಮತ್ತು ಆಕ್ರಮಣದ ಭಾವನೆ ಪ್ರತಿಕ್ರಿಯೆಗಳನ್ನು ಪ್ರಚೋದಿಸುವುದಿಲ್ಲ ಎಂದು ನಿರೀಕ್ಷಿಸುವುದು ಬುದ್ಧಿವಂತಿಕೆಯಲ್ಲ ಎಂದಿರುವ ವಿಶ್ವ ಶಾಂತಿ ಮಂಡಳಿ, ಪ್ರಸ್ತುತ ಇಸ್ರೇಲಿ ಸರ್ಕಾರವು, ಹಿಂದಿನ ಎಲ್ಲ ಸರಕಾರಗಳ ಧೋರಣೆಗಳನ್ನು ಮುಂದುವರಿಸುತ್ತ ಪಶ್ಚಿಮ ದಂಡೆಯಲ್ಲಿ, ಪೂರ್ವ ಜೆರುಸಲೆಮ್‌ನಲ್ಲಿ ಪ್ರಚೋದನೆಗಳನ್ನು ಮತ್ತಷ್ಟು ಹೆಚ್ಚಿಸಿದೆ ಮತ್ತು ಗಾಜಾ ಪಟ್ಟಿಯಲ್ಲಿರುವ ಲಕ್ಷಾಂತರ ಪ್ಯಾಲೆಸ್ಟೀನೀ ಜನರ ಬದುಕುಗಳನ್ನು “ಬಹಿರಂಗ ಸರೆಮನೆ”ಯಾಗಿ ಮಾಡಿದೆ ಎಂದು ಹೇಳಿದೆ.
ಪ್ರಸಕ್ತ ದಾಳಿ-ಪ್ರತಿದಾಳಿಗಳನ್ನು ಕೊನೆಗೊಳಿಸುವ ನಿರ್ಧಾರವನ್ನು ಕೈಗೊಳ್ಳಬೇಕಾಗಿರುವುದು ಇಸ್ರೇಲ್. ಬದಲಿಗೆ ಅದು ಸನ್ನಿವೇಶದ ಪ್ರಯೋಜನವನ್ನು ಪಡೆದು ಗಾಜಾ ಪಟ್ಟಿಯ ಮೇಲೆ ಭಾರಿ ಬಾಂಬ್ ದಾಳಿಯನ್ನು ನಡೆಸುತ್ತಿದೆ. ಅಮೆರಿಕ ಸಂಯುಕ್ರ ಸಂಸ್ಥಾನ, ಯುರೋಪಿಯನ್ ಒಕ್ಕೂಟ ಮತ್ತು ಅವರ ಮಿತ್ರರುಗಳ ಮೇಲೂ ಭಾರೀ ಜವಾಬ್ದಾರಿಯಿದೆ. ಏಕೆಂದರೆ ಅವರುಗಳು ಇಸ್ರೇಲಿನ ಆಕ್ರಮಣ ಮುಂದುವರೆಯುವುದಕ್ಕೆ ಬೆಂಬಲ ಮತ್ತು ಅನುಮೋದನೆ ನೀಡುತ್ತಿರುವುದಷ್ಟೇ ಅಲ್ಲ, ಈಗ “ಇಸ್ರೇಲಿಗೆ ಆತ್ಮರಕ್ಷಣೆಯ ಹಕ್ಕಿದೆ” ಎಂದು ಬೂಟಾಟಿಕೆಯ ಮಾತುಗಳನ್ನು ಆಡುತ್ತಿದ್ದಾರೆ, ಪ್ಯಾಲೆಸ್ತೇನಿಯನ್ನರಿಗೂ ಇಂತಹ ಹಕ್ಕು ಇದೆ ಎಂಬುದನ್ನು ನಿರ್ಲಕ್ಷಿಸಿ ಪ್ರಚೋದನಕಾರಿಯಾಗಿ ವರ್ತಿಸುತ್ತಿದ್ದಾರೆ ಎಂದು ವಿಶ್ವ ಶಾಂತಿ ಮಂಡಳಿ ಅಭಿಪ್ರಾಯ ಪಟ್ಟಿದೆ.
ವಾಸ್ತವವಾಗಿ ಆಕ್ರಮಣವನ್ನು ಮುಂದುವರೆಸುವ ಮೂಲಕ ಇಸ್ರೇಲ್ ಸರಕಾರ ತನ್ನ ಸ್ವಂತ ಜನರಿಗೂ (ಯಹೂದಿಗಳು ಮತ್ತು ಅರಬ್ಬರು) ಪ್ರತಿಕೂಲವಾಗಿ ವರ್ತಿಸುತ್ತಿದೆ; ಪ್ಯಾಲೇಸ್ತೀನಿಯನ್ ಜನರ ಸ್ವಯಂ ನಿರ್ಧಾರದ ಹಕ್ಕನ್ನು ನಿರಾಕರಿಸುವುದು ಈ ಇಡೀ ಪ್ರದೇಶದಲ್ಲಿ ಮತ್ತು ವಿಶೇಷವಾಗಿ ಪ್ರಾದೇಶಿಕ ಯುದ್ಧದ ಅಪಾಯವಿರುವ ಈ ಸಮಯದಲ್ಲಿ ಶಾಂತಿ ಮತ್ತು ಸ್ಥಿರತೆ ಏರ್ಪಡಲು ಅವಕಶ ನೀಡುವುದಿಲ್ಲ ಎಂದು ಪ್ರಸ್ತುತ ಉಲ್ಬಣ ಪರಿಸ್ಥಿತಿ ಸಾಬೀತುಪಡಿಸುತ್ತದೆ.
ಇದನ್ನೂ ಓದಿ: ಹಮಾಸ್-ಇಸ್ರೇಲ್ ಯುದ್ಧದ ಹಿನ್ನೆಲೆ ಏನು?
ಇಸ್ರೇಲ್ ಎಲ್ಲಾ ಪ್ಯಾಲೇಸ್ಟಿನಿಯನ್ ನೆಲಗಳ ಆಕ್ರಮಣವನ್ನು ಕೊನೆಗೊಳಿಸಬೇಕು, ಜೂನ್ 4, 1967ರ ಪೂರ್ವದ ಗಡಿಗಳೊಳಗೆ ಪೂರ್ವ ಜೆರುಸಲೆಮನ್ನು ರಾಜಧಾನಿಯಾಗಿ ಹೊಂದಿರುವ ಒಂದು ಸ್ವತಂತ್ರ ಪ್ಯಾಲೆಸ್ಟೈನ್ ಪ್ರಭುತ್ವವನ್ನು ಸ್ಥಾಪಿಸಬೇಕು ಎಂಬ ಆಗ್ರಹವನ್ನು ಪುನರುಚ್ಚರಿಸುವುದಾಗಿ ಹೇಳಿರುವ ವಿಶ್ವ ಶಾಂತಿ ಮಂಡಳಿ, ವಿಶ್ವಸಂಸ್ಥೆಯ ನಿರ್ಣಯ ಸಂಖ್ಯೆ 194ರ ಪ್ರಕಾರ ಇಸ್ರೇಲಿ ಜೈಲುಗಳಿಂದ ಎಲ್ಲಾ ಪ್ಯಾಲೇಸ್ಟಿನಿಯನ್ ರಾಜಕೀಯ ಖೈದಿಗಳನ್ನು ಬಿಡುಗಡೆ ಮಾಡಬೇಕು, ಮತ್ತು ಎಲ್ಲಾ ಪ್ಯಾಲೇಸ್ಟಿನಿಯನ್ ನಿರಾಶ್ರಿತರು ಮರಳಿ ಬರುವ ಹಕ್ಕನ್ನು ಪಡೆಯಬೇಕು ಎಂದೂ ಆಗ್ರಹಿಸಿದೆ.
ಆಕ್ರಮಣ ಮತ್ತು ಅನ್ಯಾಯವು ಶಾಶ್ವತವಾಗಿ ಉಳಿಯಲು ಸಾಧ್ಯವಿಲ್ಲ ಎಂದು ಅದು ಹೇಳಿದೆ.
ವಿಡಿಯೋ ನೋಡಿ: ನಮಗೆ ಸೆಂಗೋಲ್ ಬೇಡ ನೇಗಿಲು ಬೇಕು – ಮಾವಳ್ಳಿ ಶಂಕರ್ Janashakthi Media