ಬೆಂಗಳೂರು : ಕಲ್ಯಾಣಮಂಡಳಿ ಖರೀದಿಗಳಲ್ಲಿ ನಡೆದಿರುವ ವ್ಯಾಪಕ ಭ್ರಷ್ಟಾಚಾರ ತನಿಖೆಗೆ ಆಗ್ರಹಿಸಿ ರಾಜ್ಯಾದ್ಯಂತ ಕರ್ನಾಟಕ ರಾಜ್ಯಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ( ಸಿ ಐ ಟಿ ಯು) ನೇತೃತ್ವದಲ್ಲಿ ಸಾವಿರಾರು ಕಟ್ಟಡ ನಿರ್ಮಾಣ ಕಾರ್ಮಿಕರು ಸೋಮುವಾರ ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ಕಲ್ಯಾಣ ಮಂಡಳಿ ಹಾಗೂ ರಾಜ್ಯದ ಹಲವು ಜಿಲ್ಲೆ ತಾಲೂಕು ಕಾರ್ಮಿಕ ಇಲಾಖೆ ಮುಂದೆ ಪ್ರತಿಭಟನೆ ನಡೆಸಿದ ಪ್ರತಿಭಟನೆಕಾರರು ಬೇಡಿಕೆಗಳ ಈಡೇರಿಕೆ ಆಗ್ರಹಿಸಿದರು.
ವಿದ್ಯಾರ್ಥಿ ವೇತನ ಪಡೆಯಲು ರೇಷನ್ ಕಾರ್ಡ್ ಕಡ್ಡಾಯವನ್ನು ಮಾಡಿರುವುದು ವಿದ್ಯಾರ್ಥಿ ವಿರೋಧಿ ನೀತಿಯಾಗಿದೆ. ಮನೆ ನಿರ್ಮಾಣಕ್ಕೆ 5 ಲಕ್ಷ ನಗದು ಸಹಾಯಧನ ನಗದು ರಹಿತ ವೈದ್ಯಕೀಯ ಸೌಲಭ್ಯ ನೀಡಬೇಕು. ಇಲಾಖೆಯಲ್ಲಿ ಕಾರ್ಮಿಕರ ಸಲ್ಲಿಸಿರುವ ಅರ್ಜಿಗಳ ಶೀಘ್ರ ವಿಲೇವಾರಿ ಮಾಡಬೇಕು. ಕಲ್ಯಾಣ ಮಂಡಳಿಯಲ್ಲಿ ಸಂಘಕ್ಕೆ ಪ್ರಾತಿನಿಧ್ಯ ನೀಡಬೇಕು ಎಂಬುದು ಸೇರಿದಂತೆ ಮುಂತಾದ ಬೇಡಿಕೆಗಳಿಗೆ ಒತ್ತಾಯಿಸಿ ಪ್ರತಿಭಟನೆ ನಡೆಯಿತು
ಬೆಂಗಳೂರು : ಬೆಂಗಳೂರಿನ ಕಲ್ಯಾಣ ಮಂಡಳಿ ಮುಂದೆ ಬೆಂಗಳೂರು ದಕ್ಷಿಣ,ಉತ್ತರ,ಉಡುಪಿ,ಕುಂದಾಪುರ ಹಾಗೂ ಬೈಂದೂರು ತುಮಕೂರು, ಕೋಲಾರ ಹಾಗೂ ಮಂಡ್ಯ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಕಾರ್ಮಿಕರು ಬೆಳೆಗ್ಗೆಯಿಂದ ಮಧ್ಯಾನ್ಹದವರೆಗೂ ಮಂಡಳಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಸಂಘಟನೆಯ ರಾಜ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ಬೆಂಗಳೂರು ಜಿಲ್ಲೆ ಸಿಐಟಿಯು ಅಧ್ಯಕ್ಷ ಬಿ ಎನ್ ಮಂಜುನಾಥ್ ಮುಖಂಡರಾದ ಕೆ.ಎಸ್ . ಲಕ್ಷ್ಮೀ, ಲಿಂಗರಾಜ್, ಹರೀಶ್, ಹನುಮಂತರಾವ್ ಹವಾಲ್ದಾರ್, ಸುರೇಶ್ ಕಲ್ಲಾಗಾರ, ಶೇಖರ್ ಬಂಗೇರ ಮುಂತಾದವರು ಮಾತನಾಡಿದರು.
ಬೇಡಿಕೆ ಈಡೇರಿಸುವ ಭರವಸೆ : ಕಲ್ಯಾಣ ಮಂಡಳಿ ಸಿಇಓ ಹಾಗೂ ಕಾರ್ಯದರ್ಶಿ ಗುರುಪ್ರಸಾದ್, ಜಂಟಿ ಕಾರ್ಯದರ್ಶಿ ಶಿವಪುತ್ರ ಬಾಬುರಾವ್ ಮಾನವಿ ಸ್ವೀಕರಿಸಿ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.
ಶೈಕ್ಷಣಿಕ ಅರ್ಜಿ ಹಾಕುವಾಗ ಪಡಿತರ ಚೀಟಿ ಕಡ್ಡಾಯ ರದ್ದು ಮಾಡಲಾಗುವುದು. ಪಿಂಚಣಿ ವಯೋಮಿತಿ ಏರಿಕೆ, ಬಾಕಿ ಶೈಕ್ಷಣಿಕ ಅರ್ಜಿಗಳಿಗೆ ಹಣ ಪಾವತಿ ಶೀಘ್ರದಲ್ಲಿ ದೊರೆಕಿಸುವದಾಗಿ ಭರವಸೆ ನೀಡಿದರು.
ಇತರೆ ಪ್ರಮುಖ ಬೇಡಿಕೆಗಳ ಬಗೆಹರಿಸಲು ಏಪ್ರಿಲ್ ಮೊದಲವಾರ ಸಭೆ ಕರೆಯುವುದಾಗಿ ಭರವಸೆ ನೀಡಿದರು.
ದ.ಕನ್ನಡ ಜಿಲ್ಲೆಯ ಮಂಗಳೂರು, ಉತ್ತರ ಕನ್ನಡ ಜಿಲ್ಲೆಯ ಕಾರವಾರ,ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಗದಗ, ಕೊಪ್ಪಳ, ಕಲಬುರಗಿ ರಾಯಚೂರು ಜಿಲ್ಲೆಯ ಹಟ್ಟಿ, ಲಿಂಗಸುಗೂರು,ದೇವದುರ್ಗ, ಬೀದರ್ ಜಿಲ್ಲೆಯ ಹುಮ್ನಾಬಾದ್,ವಿಜಯನಗರ ಜಿಲ್ಲೆಯ ಹೊಸಪೇಟೆ, ಬಳ್ಳಾರಿ ಜಿಲ್ಲೆಯ ಕಂಪ್ಲಿ,ಮೈಸೂರು, ಕೊಡಗು,ಚಿತ್ರದುರ್ಗ ಹಾಗೂ ದಾವಣಗೆರೆಸೇರಿ ಇನ್ನೂ ಹಲವಾರು ಜಿಲ್ಲಾ ಹಾಗೂ ತಾಲೂಕು ಕಾರ್ಮಿಕ ಕಚೇರಿಗಳ ಮುಂಭಾಗದಲ್ಲಿ ಪ್ರತಿಭಟನೆ ನಡೆದ ಬಗ್ಗೆ ವರದಿಯಾಗಿದೆ.