ರಾಜ್ಯದಲ್ಲಿ ಹೆಚ್ಚುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ದಂಧೆಗೆ ಕಡಿವಾಣ ಹಾಕಿ: ಆಮ್ ಆದ್ಮಿ ಪಾರ್ಟಿ ಒತ್ತಾಯ

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಶಿಕ್ಷಣ ವ್ಯವಸ್ಥೆ ಹದಗೆಟ್ಟಿದೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳ ಅವ್ಯವಸ್ಥೆಯಿಂದಾಗಿಯೇ ಖಾಸಗಿ ಶಾಲೆಗಳ ಮೊರೆಹೋಗುತ್ತಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ದಂಧೆ ಮಿತಿಮೀರುತ್ತಿದ್ದು, ಇದಕ್ಕೆ ಕಡಿವಾಣ ಬೀಳಬೇಕು ಎಂದು ಆಮ್ ಆದ್ಮಿ ಪಾರ್ಟಿಯ  ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಒತ್ತಾಯಿಸಿದರು.

ನಗರದಲ್ಲಿ ನಡೆದ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ಖಾಸಗಿ ಶಾಲೆಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರಿದೆ. ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರತಿವರ್ಷ ಶೇ 15 ರಷ್ಟು ಶುಲ್ಕ ಹೆಚ್ಚಳ ಮಾಡುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಆದರೆ, ರಾಜ್ಯದಲ್ಲಿ ಶುಲ್ಕ ನಿಯಂತ್ರಣ ಪ್ರಾಧಿಕಾರ ಇದೆಯಾ ಎನ್ನುವ ಪ್ರಶ್ನೆ ಮೂಡುತ್ತಿದೆ. ಖಾಸಗಿ ಶಾಲೆಗಳಿಗೆ ಶುಲ್ಕ ನಿಗದಿ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ ಹೈಕೋರ್ಟ್ ಮುಂದೆ ಸಮರ್ಪಕ ವಾದ ಮಂಡಿಸದಿರುವುದೇ ಇದಕ್ಕೆ ಕಾರಣ ಎಂದು ಹೇಳಿದರು.

ಇದನ್ನೂ ಓದಿ: ರಾಜಧಾನಿಯಲ್ಲಿ ಅಕ್ರಮ ಕೊಳವೆ ಬಾವಿಗಳ ಕೊರೆತ; ದೂರು ದಾಖಲು

ರಾಜ್ಯ ಸರ್ಕಾರವು ಸಹ ಖಾಸಗಿ ಶಾಲೆಗಳೊಂದಿಗೆ ಕೈಜೋಡಿಸಿದೆ. ಈ ಶೈಕ್ಷಣಿಕ ವರ್ಷದಲ್ಲಾದರೂ ಖಾಸಗಿ ಶಾಲೆಗಳ ಶುಲ್ಕ ದಂಧೆಯಿಂದ ಪೋಷಕರನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು. ಖಾಸಗಿ ಶಾಲೆಗಳ ವಸೂಲಿಗೆ ಶುಲ್ಕ ನಿಯಂತ್ರಣ ಪ್ರಾಧಿಕಾರವು ತಡೆ ನೀಡಬೇಕು. ಇದೀಗ ಚುನಾವಣೆಯು ಮುಗಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತ ಗಮನಹರಿಸಬೇಕಿದೆ. ಕೂಡಲೇ ಸಭೆ ಕರೆದು, ನ್ಯಾಯಾಲಯದ ಆದೇಶದ ಕುರಿತು ಕಾನೂನು ತಜ್ಞರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಗದೀಶ್ ಸದಂ ಒತ್ತಾಯಿಸಿದರು.

ಬೆಂಗಳೂರಿನಲ್ಲಿ ಬಡ ಕುಟುಂಬವೊಂದು ತನ್ನ ಗಳಿಕೆಗಿಂತ ಶೇ 40ರಷ್ಟು ಹೆಚ್ಚುವರಿಯಾಗಿ ಮಗುವೊಂದರ ಶಿಕ್ಷಣಕ್ಕೆ ಖರ್ಚು ಮಾಡಬೇಕಿದೆ. ಖಾಸಗಿ ಶಾಲೆಗಳು ಶುಲ್ಕ ಏರಿಕೆ ಮಾಡಿದಾಗ, ಪೋಷಕರು ಮಕ್ಕಳ ಶಾಲೆ ಬದಲಿಸುವ ಅನಿವಾರ್ಯತೆ ಎದುರಾಗುತ್ತದೆ. ಸರ್ಕಾರ ಶುಲ್ಕ ದಂಧೆಗೆ ಕಡಿವಾಣ ಹಾಕಬೇಕಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರತಿ ಶಾಲೆಗೆ ಭೇಟಿ ನೀಡಿ ಎಷ್ಟು ಶುಲ್ಕ ಹೆಚ್ಚಿಸಲಾಗಿದೆ ಎಂಬುದರ ಮೇಲೆ ನಿಗಾ ಇಡಬೇಕು. ಹೆಚ್ಚು ಶುಲ್ಕ ಏರಿಕೆ ಕಂಡುಬಂದಲ್ಲಿ ಅಂತಹ ಶಾಲೆಗಳೊಂದಿಗೆ ಚರ್ಚಿಸಿ ಶುಲ್ಕ ಏರಿಕೆಯನ್ನು ಕಡಿಮೆ ಮಾಡಬೇಕು ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಖಜಾಂಚಿ ಪ್ರಕಾಶ್ ನೆಡುಂಗಡಿ ಹೇಳಿದರು.

ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷರಾದ ಲೋಹಿತ್ ಹನುಮಾಪುರ ಮಾತನಾಡಿ, ಶಿಕ್ಷಣದ ಹಕ್ಕು ಪ್ರತಿಯೊಬ್ಬರಿಗೂ ಇದೆ. ಹೀಗಿದ್ದರೂ, ಅಧಿಕ ಶುಲ್ಕ ನೀಡಬೇಕಾಗಿದೆ. ರಾಜ್ಯದ ರಾಜಕಾರಣಿಗಳ ಒಡೆತನದಲ್ಲಿಯೇ ಬಹುತೇಕ ಖಾಸಗಿ ಶಾಲೆಗಳು ಮತ್ತು ವೈದ್ಯಕೀಯ ಸಂಸ್ಥೆಗಳಿವೆ. ಹೀಗಾಗಿಯೇ ಶುಲ್ಕ ದಂಧೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಬಟ್ಟೆ, ಶೂಗಳನ್ನು ಎಲ್ಲಿಂದ ಕೊಂಡುಕೊಳ್ಳಬೇಕು ಎಂಬುದನ್ನು ಶಾಲೆಗಳೇ ನಿರ್ಧರಿಸುತ್ತಿವೆ. ಇದು ವ್ಯಾಪಾರವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಪೋಷಕರು ಎಚ್ಚೆತ್ತುಕೊಳ್ಳಬೇಕು. ಶುಲ್ಕವನ್ನಷ್ಟೇ ಅಲ್ಲೆದೆ ಶಾಲೆಗಳು ಬೇರೆ ಯಾವುದೆಲ್ಲಕ್ಕೆ ಹಣ ವಸೂಲಿ ಮಾಡುತ್ತಿವೆ ಎಂಬುದರತ್ತ ಗಮನಹರಿಸಬೇಕು ಎಂದು ತಿಳಿಸಿದರು.

ಇದನ್ನೂ ನೋಡಿ: ಬಳ್ಳಾರಿ ಲೋಕಸಭೆ : ಶ್ರೀರಾಮಲು ರಾಜಕೀಯ ಜೀವನ ಅಂತ್ಯವಾಗುತ್ತಾ?Janashakthi Media

Donate Janashakthi Media

Leave a Reply

Your email address will not be published. Required fields are marked *