- ಮಕ್ಕಳಿಲ್ಲ ಎನ್ನುವ ಕೊರಗೇ ಇವರ ಬಂಡವಾಳ
- ಗಂಡು ಮಗುವಾದರೆ 1.5 ಲಕ್ಷ, ಹೆಣ್ಣು ಮಗುವಾದರೆ 80 ಸಾವಿರ!
- ಮಾರಾಟ ದಂಧೆಗೆ ಗರ್ಭಿಣಿಯರ ಕಾರ್ಡ್ ದುರ್ಬಳಕೆ!
ಬೆಂಗಳೂರು: ಅಸಹಾಯಕ ಪೋಷಕರಿಂದ ನವಜಾತ ಶಿಶುಗಳನ್ನು ಪಡೆದು ಲಕ್ಷಾಂತರ ರೂ.ಗಳಿಗೆ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವನ್ನು ಪಶ್ಚಿಮ ವಲಯದ ಮಾನವ ಕಳ್ಳ ಸಾಗಾಣಿಕೆ ನಿಗ್ರಹ ಘಟಕ ಪತ್ತೆ ಹಚ್ಚಿ ಮೂವರು ಮಹಿಳೆಯರು ಸೇರಿದಂತೆ 5 ಮಂದಿ ರಾಜ್ಯ ಮತ್ತು ಅಂತರರಾಜ್ಯ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗಂಡು ಮಗುವಿಗೆ ಒಂದೂವರೆ ಲಕ್ಷ ರೂ. ಹೆಣ್ಣು ಮಗು ಕೊಟ್ಟರೆ 80 ಸಾವಿರ ರೂಪಾಯಿ ಫಿಕ್ಸ್ ! ಮುಂಬೈನಿಂದ ಕಡಿಮೆ ಹಣಕ್ಕೆ ಮಕ್ಕಳನ್ನು ಖರೀದಿಸಿ ತಂದು ಬೆಂಗಳೂರಿನಲ್ಲಿ ಮಕ್ಕಳಿಲ್ಲದ ಪೋಷಕರಿಗೆ ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡಲಾಗಿದೆ. ಈ ಮಕ್ಕಳ ಮಾರಾಟ ದಂಧೆಗೆ ಗರ್ಭಿಣಿ ಮಹಿಳೆಯರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊಡುವ ತಾಯಿ ಕಾರ್ಡ್ ನ್ನೇ ನಕಲು ಮಾಡಿ ದುರ್ಬಳಕೆ ಮಾಡಿಕೊಂಡಿರುವ ಆಘಾತಕಾರಿ ಸಂಗತಿ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ರಂಜನಾ ದೇವಿದಾಸ್ ಖಂಡಗಳೆ (32), ಬೆಂಗಳೂರಿನ ವಿದ್ಯಾರಣ್ಯ ಪುರದ ದೇವಿ (26), ಜಾಲಹಳ್ಳಿಯ ಮಲ್ಲಸಂದ್ರ ನಿವಾಸಿ ಧನಲಕ್ಷ್ಮೀ (30), ಕತ್ರಿಗುಪ್ಪೆಯ ರಂಗಪ್ಪ ಲೇಔಟ್ ನಿವಾಸಿ ಮಹೇಶ್‍ಕುಮಾರ್ (50)ಮತ್ತು ತಮಿಳುನಾಡಿನ ಜನಾರ್ಧನ್ (33) ಬಂಧಿತ ಆರೋಪಿಗಳು. ಆರೋಪಿಗಳ ಜಾಲದಲ್ಲಿ ಸಿಲುಕಿದ್ದ 12 ಮಕ್ಕಳನ್ನು ರಕ್ಷಣೆ ಮಾಡಲಾಗಿದ್ದು, ಪೋಷಕರನ್ನು ಪತ್ತೆ ಮಾಡಿ ಮುಂದಿನ ಕ್ರಮಕ್ಕಾಗಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರ ಮುಂದೆ ಹಾಜರುಪಡಿಸಲಾಗಿರುತ್ತದೆ.
ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆ ಕಾರ್ಯ ಹಾಗೂ ಈ ಜಾಲದಲ್ಲಿ ಸಿಲುಕಿರುವ ಇತರೆ ಮಕ್ಕಳನ್ನು ಪತ್ತೆ ಮಾಡಿ ಸಂರಕ್ಷಿಸುವ ಕಾರ್ಯ ಮುಂದುವರೆದಿದೆ. ವಿಲ್ಸನ್‍ಗಾರ್ಡನ್ ನಿವಾಸಿ ದೇವಿ ಎಂಬುವವರು ಬಾಂಬೆಯಿಂದ ಮಕ್ಕಳನ್ನು ತರಿಸಿ ಹಣಕ್ಕಾಗಿ ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಮಾನವ ಕಳ್ಳ ಸಾಗಾಣಿಕೆ ನಿಗ್ರಹ ದಳಕ್ಕೆ ಲಭಿಸಿದೆ.
ಪತ್ತೆಗಾಗಿ ಮಾರುವೇಷ : ಸಿಲಿಕಾನ್ ಸಿಟಿಯಲ್ಲಿ ಮಕ್ಕಳ ಮಾರಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮಾರು ವೇಷದಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡು ನಿನ್ನೆ ರಾತ್ರಿ 8 ಗಂಟೆಯಲ್ಲಿ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಮಗು ಮಾರಾಟ ಮಾಡಲು ಬಂದಿದ್ದ ಆರೋಪಿತೆ ರಂಜನಾ ದೇವಿದಾಸ್ ಖಂಡಗಳೆ ಹಾಗೂ ಖರೀದಿ ಮಾಡಲು ಬಂದಿದ್ದ ದೇವಿ ಎಂಬಾಕೆಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಯಿತು.
ಆರೋಪಿ ರಂಜನಾ ವಶದಲ್ಲಿದ್ದ ಒಂದು ತಿಂಗಳ ನವಜಾತ ಹೆಣ್ಣು ಶಿಶುವನ್ನು ರಕ್ಷಿಸಿ, ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿ ಈ ಇಬ್ಬರು ನೀಡಿದ ಹೇಳಿಕೆ ಮೇರೆಗೆ ಉಳಿದ ಮೂವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಇವರು ನೀಡಿದ ಸುಳಿವಿನ ಮೇರೆಗೆ ಈ ಜಾಲದಲ್ಲಿ ಸಿಲುಕಿದ 11 ಮಕ್ಕಳನ್ನು ಹಾಗೂ ಈ ಮಕ್ಕಳ ಪಾಲನೆ, ಪೋಷಣೆ ಮಾಡುತ್ತಿದ್ದ ಪೋಷಕರನ್ನು ಪತ್ತೆ ಮಾಡಿ ಮುಂದಿನ ಕ್ರಮಕ್ಕಾಗಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರ ಮುಂದೆ ಹಾಜರುಪಡಿಸಲಾಗಿದೆ.
ಮಕ್ಕಳಿಲ್ಲದವರೆ ಇವರ ಟಾರ್ಗೇಟ್ : ಐವಿಎಫ್ ಕೇಂದ್ರಗಳಲ್ಲಿ ರಂಜನಾ ಹಾಗೂ ದೈವಿ ಸೇರಿದಂತೆ ಐವರು ಆರೋಪಿಗಳು ಬಾಡಿಗೆ ತಾಯಿ ಕಲ್ಪಿಸುವ ಏಜೆಂಟ್ ಗಳಾಗಿದ್ದರು. ಸಂತಾನ ಭಾಗ್ಯವಿಲ್ಲದ ಕೆಲ ದಂಪತಿ, ಐವಿಎಫಅ ಕೇಂದ್ರಗಳಲ್ಲಿ ಬಾಡಿಗೆ ತಾಯಿ ಮೂಲಕ ಮಕ್ಕಳ ಪಡೆಯಲು ಮುಂದಾಗುತ್ತಿದ್ದರು. ಐವಿಎಫ್ ಕೇಂದ್ರಗಳಿಗೆ ಬರುವ ಕೆಲ ದಂಪತಿಯನ್ನು ಸಂಪರ್ಕಿಸಿದ ಆರೋಪಿಗಳು, ನಿಮಗೆ ಒಳ್ಳೆಯ ಆರೋಗ್ಯವಂತ ಮಹಿಳೆಯನ್ನು ಬಾಡಿಗೆ ತಾಯಿಯಾಗಿ ಕೊಡಿಸುತ್ತೇವೆ ಎಂದು ಹೇಳಿತ್ತಿದ್ದರು. ಇದಕ್ಕೆ ಒಪ್ಪಿದ ದಂಪತಿಯಿಂದ ಲಕ್ಷಾಂತರ ಹಣ ಪಡೆಯುತ್ತಿದ್ದರು. ಬಳಿಕ ಆರೋಪಿಗಳು, ಬಾಡಿಗೆ ತಾಯಿ ಮೂಲಕ ದಂಪತಿಗೆ ಮಕ್ಕಳನ್ನು ನೀಡುತ್ತಿರಲಿಲ್ಲ. ಬದಲಿಗೆ ಮುಂಬೈ, ತಮಿಳುನಾಡು ಹಾಗೂ ಕರ್ನಾಟಕ ಸೇರಿ ಇತರೆಗೆ ಬಡವರಿಗೆ ಹಣ ನೀಡಿ ನಜವಾತ ಶಿಶುಗಳನ್ನು ಖರೀದಿಸಿ, ದಂಪತಿಗೆ ನಿಮ್ಮ ವೀರ್ಯದಿಂದಲೇ ಜನಿಸಿದ ಮಗುವೆಂದು ಹೇಳಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಶಿಶು ಕಳವು ಪ್ರಕರಣದಿಂದ ಹೊರಬಿತ್ತು ಮಾಹಿತಿ : ಚಾಮರಾಜಪೇಟೆಯ ಸಿರ್ಸಿ ವೃತ್ತದಲ್ಲಿರುವ ಹೆರಿಗೆ ಆಸ್ಪತ್ರೆಯಲ್ಲಿ ಕಳ್ಳತನವಾಗಿದ್ದ ಮಗುವಿನ ಜಾಡು ಹಿಡಿದು ತನಿಖೆ ನಡೆಸಿದ ಪೊಲಿಸ್ ಸಬ್‌ಇನ್‌ಸ್ಪೆಕ್ಟರ್ ಶ್ರೀನಿವಾಸ್ ಬಾಂಬೆಯಿಂದ ಬೆಂಗಳೂರು ವರೆಗೂ ಹಬ್ಬಿರುವ ಮಕ್ಕಳ ಮಾರಾಟ ಜಾಲವನ್ನೇ ಪತ್ತೆ ಮಾಡಿದ್ದಾರೆ. ಈ ಹಿಂದೆ ತಲಘಟ್ಟಪುರ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ದಂಧೆಯ ಕಿಂಗ್ ಪಿನ್ ಮನೆಯಲ್ಲಿ ಶೋಧ ನಡೆಸಿದಾಗ 20 ಕ್ಕೂ ಹೆಚ್ಚು ತಾಯಿಕಾರ್ಡ್ ನಕಲು ಮಾಡಲಾಗಿದೆ. ಕೆಂಗೇರಿಯ ಖಾಸಗಿ ಆಸ್ಪತ್ರೆಯಲ್ಲಿ ತಾಯಿ ಕಾರ್ಡ್ ನಕಲು ಮಾಡಿರುವ ಆಘಾತಕಾರಿ ಸಂಗತಿಯನ್ನು ಬಯಲಿಗೆ ಎಳೆದಿದ್ದಾರೆ.
ಚಾಮರಾಜಪೇಟೆಯ ಸಿರ್ಸಿ ವೃತ್ತದ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಲ್ಲಿ ಮಗು ಕಳ್ಳತನವಾಗಿತ್ತು. ಈ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದಾಗ ಬಾಡಿಗೆ ತಾಯಂದಿರ ಮೂಲಕ ಮಕ್ಕಳಿಲ್ಲದ ದಂಪತಿಗೆ ಮಕ್ಕಳನ್ನು ಕೊಡುವ ಸುಳಿವು ಸಿಕ್ಕಿತ್ತು. ಇದರ ಮಾಹಿತಿ ಆಧರಿಸಿ ವಿಶೇಷ ತನಿಖಾ ತಂಡ ನಡೆಸಿದಾಗ ಐವಿಎಫ್ ಕೇಂದ್ರಗಳಲ್ಲಿ ಬಡ ಮಹಿಳೆಯರಿಗೆ ಆಶ್ರಯ ನೀಡಿ ಮಕ್ಕಳಿಗೆ ಜನ್ಮ ಕೊಡುವ ಜಾಲದ ಮಾಹಿತಿ ಸಿಕ್ಕಿದ್ದು, ಅದರ ಆಧಾರದ ಮೇಲೆ ತನಿಖೆ ನಡೆಸಿದಾಗ ಬಡ ಪೋಷಕರ ಬಳಿ ಮಕ್ಕಳನ್ನು ಖರೀದಿಸಿ ಅವನ್ನು ಬಾಡಿಗೆ ತಾಯಂದಿರ ಹೊಟ್ಟೆಯಲ್ಲಿ ಜನಿಸಿದ ಮಕ್ಕಳು ಎಂಬಂತೆ ಬಿಂಬಿಸಿ ಮಾರಾಟ ಮಾಡುತ್ತಿದ್ದರು. ಇದಕ್ಕಾಗಿ ತಾಯಿ ಕಾರ್ಡ್ ನ್ನು ನಕಲು ಮಾಡುತ್ತಿದ್ದರು ಎಂದು ದಕ್ಷಿಣ ವಿಭಾದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ಹದಿನಾಲ್ಕು ಮಕ್ಕಳು ಸಿಡಬ್ಲೂಸಿ ವಶಕ್ಕೆ: ಮುಂಬಯಿ ಸೇರಿದಂತೆ ನಾನಾ ಕಡೆ ಬಡವರಿಂದ ಕಡಿಮೆ ಬೆಲೆಗೆ ಮಕ್ಕಳನ್ನು ಖರೀದಿ ಮಾಡುತ್ತಿದ್ದರು. ಅದೇ ಮಕ್ಕಳನ್ನು ಬೆಂಗಳೂರಿನಲ್ಲಿ ಮಕ್ಕಳಿಲ್ಲದ ತಾಯಂದಿರನ್ನು ಹುಡುಕಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು. ಈವರೆಗೂ ಸುಮಾರು ಹನ್ನೊಂದು ಮಕ್ಕಳನ್ನು ಮಾರಾಟ ಮಾಡಿದ್ದರು. ಸದ್ಯ ನಾಲ್ವರು ಬಂಧನಕ್ಕೆ ಒಳಗಾಗಿದ್ದಾರೆ. ಪ್ರಮುಖ ಆರೋಪಿ ರತ್ನ ಮೃತಪಟ್ಟಿದ್ದಾರೆ. ಬಂಧಿತ ಆರೋಪಿಗಳು ಈವರೆಗೂ ಮಾರಾಟ ಮಾಡಿದ್ದ ಹನ್ನೊಂದು ಮಕ್ಕಳನ್ನು ಪತ್ತೆ ಮಾಡಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ ಎಂದು ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ಕಿಂಗ್ ಪಿನ್ ಸಾವು : ಮಕ್ಕಳ ಮಾರಾಟ ಜಾಲದ ಪ್ರಮುಖ ಕಿಂಗ್ ಪಿನ್ ರತ್ನ. ವಿಲ್ಸನ್ ಗಾರ್ಡನ್ ದೇವಿ ಷಣ್ಮುಗಮ್ಮ ಮತ್ತು ಹೊಂಗಸಂದ್ರದ ಧನಲಕ್ಷ್ಮೀ ಪ್ರಮುಖ ಆರೋಪಿಗಳು. ಮಕ್ಕಳ ಮಾರಾಟ ಜಾಲ ಪತ್ತೆ ಮಾಡುವ ವೇಳೆಗೆ ನೆಲಮಂಗಲ ಮೂಲದ ರತ್ನ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಇದಕ್ಕೂ ಮೊದಲು ದೇವಿ ಜತೆ ಸೇರಿ ಕೆಲ ಐವಿಎಫ್ ಸೆಂಟರ್ ಗಳ ಸಂಪರ್ಕದಿಂದ ಮಕ್ಕಳು ಇಲ್ಲದ ಪೋಷಕರ ಸಂಪರ್ಕ ಪಡೆಯುತ್ತಿದ್ದರು. ಅವರಿಗೆ ಉಚಿತವಾಗಿಯೇ ಮಗು ಕೊಡುವ ನೆಪದಲ್ಲಿ ಗಾಳ ಹಾಕಿ ಆ ಬಳಿಕ ಹಣವನ್ನು ಪಡೆಯುತ್ತಿದ್ದರು. ಕೆಲವು ಐವಿಎಫ್ ಸೆಂಟರ್ ಗಳಿಗೆ ಬಾಡಿಗೆ ತಾಯಂದಿರನ್ನು ಪೂರೈಸುತ್ತಿದ್ದ ಈ ಗ್ಯಾಂಗ್ ಆ ಬಳಿಕ ಮಕ್ಕಳನ್ನೇ ಮಾರಾಟ ಮಾಡುವ ದಂಧೆ ಆರಂಭಿಸಿತ್ತು. ವಿಲ್ಸನ್ ಗಾರ್ಡನ್ ದೇವಿ ಷಣ್ಮುಗಪ್ಪ ಕೆಲ ಪಿಜಿ ಇಟ್ಟುಕೊಂಡು ಬಾಡಿಗೆ ತಾಯಂದಿರನ್ನು ಐವಿಎಫ್ ಕೇಂದ್ರಗಳಿಗೆ ಪೂರೈಕೆ ಮಾಡುತ್ತಿದ್ದಳು ಎನ್ನಲಾಗಿದೆ. ಇದೀಗ ರತ್ನ ಹೊರತು ಪಡಿಸಿ ನಾಲ್ವರು ಬಂಧನಕ್ಕೆ ಒಳಗಾಗಿದ್ದಾರೆ.
ಒಂದು ಪ್ರಕರಣದ ಜಾಡು ಹಿಡಿದು ಮಕ್ಕಳ ಮಾರಾಟ ಮಾಡುವ ಕರಾಳ ದಂಧೆಯನ್ನೇ ಬಯಲಿಗೆ ಎಳೆಯುವಲ್ಲಿ ಪಿಎಸ್ ಐ ಶ್ರೀನಿವಾಸ್ ಯಶಸ್ವಿಯಾಗಿದ್ದಾರೆ. ಪಿಎಸ್‌ಐ ಶ್ರೀನಿವಾಸ್ ಮತ್ತು ತಂಡದ ಕಾರ್ಯ ಡಿಸಿಪಿ ಹರೀಶ್ ಪಾಂಡೆ ಶ್ಲಾಘಿಸಿದ್ದಾರೆ.