ವಿಡಿಯೋ | ರಾಮ, ಸೀತೆ, ಲಕ್ಷಣ & ಹನುಮಂತನ ವೇಷ ಧರಿಸಿದ ಇಂಡಿಗೋ ವಿಮಾನದ ಕ್ಯಾಬಿನ್ ಸಿಬ್ಬಂದಿ!

ಅಹಮದಾಬಾದ್‌: ಗುಜರಾತ್‌ನ ಅಹಮದಾಬಾದ್‌ನಿಂದ ಅಯೋಧ್ಯೆಗೆ ಪ್ರಾರಂಭವಾದ ಇಂಡಿಗೋದ ವಿಮಾನದ ಉದ್ಘಾಟನಾ ಪ್ರಯಾಣದ ವೇಳೆ ಕ್ಯಾಬಿನ್ ಸಿಬ್ಬಂದಿಗಳು ಹಿಂದೂ ದೇವರುಗಳಾದ ರಾಮ, ಲಕ್ಷ್ಮಣ, ಹನುಮಂತ ಮತ್ತು ಸೀತೆಯಂತೆ ವೇಷ ಧರಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ವ್ಯಾಪಕ ವ್ಯಂಗ್ಯಕ್ಕೆ ಒಳಗಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಅಧಿಕೃತ ನಿವಾಸದಲ್ಲಿ ನಡೆದ ವರ್ಚುವಲ್ ಕಾರ್ಯಕ್ರಮದ ಮೂಲಕ ಈ ವಿಮಾನ ಸೇವೆಯನ್ನು ಗುರುವಾರ ಪ್ರಾರಂಭಿಸಿದ್ದರು.

ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ದಾಖಲು ಮಾಡಲಾಗಿದೆ ಎಂದು ವರದಿಯಾಗಿರುವ ಈ ವೀಡಿಯೊದಲ್ಲಿ ರಾಮನಂತೆ ವೇಷ ಧರಿಸಿರುವ ಪ್ರಯಾಣಿಕರನ್ನು ಉದ್ದೇಶಿಸಿ ಮಾತನಾಡುತ್ತಾನೆ. ಈತ ಕಿರೀಟದ ಜೊತೆಗೆ ಚಿನ್ನದ ಬಣ್ಣದ ಬಟ್ಟೆಗಳನ್ನು ಧರಿಸಿದ್ದು ಮತ್ತು ಆಭರಣಗಳನ್ನು ಧರಿಸಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಮತ್ತೊಂದು ವೀಡಿಯೊದಲ್ಲಿ, ಕ್ಯಾಬಿನ್ ಸಿಬ್ಬಂದಿ ರಾಮ, ಲಕ್ಷ್ಮಣ, ಸೀತೆ ಮತ್ತು ಹನುಮಂತನ ವೇಷ ಧರಿಸಿ ಬಂದಾಗ, ಇಂಡಿಗೋ ಸಿಬ್ಬಂದಿ ಮತ್ತು ಇತರರು ‘ಜೈ ಶ್ರೀ ರಾಮ್’ ಎಂದು ಘೋಷಣೆಗಳನ್ನು ಕೂಗುತ್ತಾರೆ.

ಇದನ್ನೂ ಓದಿ: ಮತ್ತೆ ಕೇರಳದತ್ತ – ನಟ ಸುರೇಶ್ ಗೋಪಿ ಮಗಳ ಮದುವೆಯಲ್ಲಿ ಭಾಗವಹಿಸಲಿರುವ ಮೋದಿ!

ವಿಮಾನ ಸೇವೆಯನ್ನು ಉದ್ಘಾಟಿಸಿದ ಸಿಎಂ ಯೋಗಿ, “ಈ ನೇರ ವಿಮಾನದಿಂದ ಅಯೋಧ್ಯೆ-ಅಹಮದಾಬಾದ್‌ಗೆ ನೇರವಾಗಿ ಸಂಪರ್ಕ ಹೊಂದುತ್ತದೆ. ದೆಹಲಿ ನಂತರ ಅಯೋಧ್ಯೆಗೆ ವಿಮಾನ ಸೇವೆಯ ಮೂಲಕ ಸಂಪರ್ಕ ಕಲ್ಪಿಸುವ ಎರಡನೇ ನಗರ ಅಹಮದಾಬಾದ್‌ ಆಗಿದೆ. ಜನವರಿ 15 ರಿಂದ ಅಯೋಧ್ಯೆ ಮತ್ತು ಮುಂಬೈ ನಡುವೆ ಕೂಡಾ ವಿಮಾನ ಸೇವೆಗಳು ಇರಲಿವೆ. ಅಲ್ಲದೆ, ದೆಹಲಿ ಮತ್ತು ಅಯೋಧ್ಯೆ ನಡುವೆ ಮತ್ತೊಂದು ವಿಮಾನ ಸೇವೆ ಜನವರಿ 16 ರಂದು ಪ್ರಾರಂಭವಾಗಲಿದೆ” ಎಂದು ಅವರು ಹೇಳಿದ್ದಾರೆ. ಸುಧಾರಿತ ವಿಮಾನ ಸೇವೆಗಳು ಪ್ರವಾಸೋದ್ಯಮ ಮತ್ತು ವ್ಯಾಪಾರ ಚಟುವಟಿಕೆಗಳಿಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತವೆ ಎಂದು ಅವರು ಹೇಳಿದ್ದಾರೆ.

 

ಇದನ್ನೂ ಓದಿ: ಕೇಂದ್ರ ಕಾಂಗ್ರೆಸ್ v/s ಯುಪಿ ಕಾಂಗ್ರೆಸ್ | ಮಕರ ಸಂಕ್ರಾಂತಿಯಂದು ರಾಮಮಂದಿರಕ್ಕೆ ತೆರಳಲಿರುವ ರಾಜ್ಯ ಘಟಕ!

ಅಯೋಧ್ಯೆಯು ಈಗ ಪ್ರತಿಯೊಬ್ಬರಿಗೂ ಬೇಡಿಕೆಯ ತಾಣವಾಗಿದ್ದು, ಇಲ್ಲಿ ಸರ್ಕಾರವು ರಸ್ತೆ, ರೈಲು ಮತ್ತು ವಿಮಾನದ ಮೂಲಕ ಸಂಪರ್ಕವನ್ನು ಸುಧಾರಿಸಿದೆ ಎಂದು ಅವರು ಹೇಳಿದ್ದು, ಇದು ಪ್ರಧಾನ ಮಂತ್ರಿಯ ದೃಷ್ಟಿಕೋನಕ್ಕೆ ಅನುಗುಣವಾಗಿರುತ್ತದೆ ಎಂದು ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಇಂಡಿಗೋ ಏರ್‌ಲೈನ್ಸ್ ಇರುವಿಕೆಯ ಬಗ್ಗೆ ಮಾತನಾಡಿದ ಅವರು, ಇಂಡಿಗೋ ಉತ್ತರ ಪ್ರದೇಶದ ಲಕ್ನೋ, ಗೋರಖ್‌ಪುರ, ವಾರಣಾಸಿ, ಕಾನ್ಪುರ, ಆಗ್ರಾ, ಪ್ರಯಾಗ್‌ರಾಜ್, ಬರೇಲಿ ಮತ್ತು ಅಯೋಧ್ಯೆ ಸೇರಿದಂತೆ 8 ನಗರಗಳಿಂದ ವಿಮಾನ ಸೇವೆಗಳನ್ನು ಒದಗಿಸುತ್ತಿದೆ ಎಂದು ಪ್ರಸ್ತಾಪಿಸಿದ್ದಾರೆ. ಇಲ್ಲಿ ವಿಮಾನಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ.

ಈ ಮಧ್ಯೆ, ಜನವರಿ 12ರ ಶುಕ್ರವಾರದಂದು ಸ್ಪೈಸ್‌ಜೆಟ್ ಏರ್‌ಲೈನ್ಸ್, ರಾಮಮಂದಿರದಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಪ್ರಯಾಣಿಕರಿಗೆ ಜನವರಿ 21 ರಂದು ದೆಹಲಿಯಿಂದ ಅಯೋಧ್ಯೆಗೆ ವಿಶೇಷ ವಿಮಾನ ಕಾರ್ಯಾಚರಣೆಯನ್ನು ಘೋಷಿಸಿದೆ.

ವಿಡಿಯೊ ನೋಡಿ: ಬಹುತ್ವದ ಭಾರತದ ಉಳಿವಿಗಾಗಿ ಸಂವಿಧಾನವೇ ದಾರಿ – ಜಸ್ಟೀಸ್‌ ಎಚ್.ಎನ್. ನಾಗಮೋಹನ್ ದಾಸ್ Janashakthi Media

Donate Janashakthi Media

Leave a Reply

Your email address will not be published. Required fields are marked *