ಜಮ್ಮು ಮತ್ತು ಕಾಶ್ಮೀರದಲ್ಲಿ ಎಸ್.ಐ.ಎ. ರಚನೆ-ದಮನಯಂತ್ರವನ್ನು ಗಟ್ಟಿಗೊಳಿಸುತ್ತದಷ್ಟೇ: ತರಿಗಾಮಿ

ಜಮ್ಮು ಮತ್ತು ಕಾಶ್ಮೀರ ಆಡಳಿತ ಒಂದು ರಾಜ್ಯ ತನಿಖಾ ಏಜೆನ್ಸಿ(ಎಸ್.ಐ.ಎ.)ಯನ್ನು ರಚಿಸಲು ನಿರ್ಧರಿಸಿದೆ. ಯಾವುದೇ ದೃಷ್ಟಿಯಿಂದ ನೋಡಿದರೂ ಈ ನಿರ್ಧಾರ ಜಮ್ಮು ಮತ್ತು ಕಾಶ್ಮೀರದಲ್ಲಿ ದಮನಯಂತ್ರವನ್ನು ಇನ್ನಷ್ಟು ಗಟ್ಟಿಗೊಳಿಸಲಿಕ್ಕಾಗಿಯೇ ಎಂದು ‘ಗುಪ್ಕರ್ ಘೋಷಣೆಯ ಜನತಾ ಮೈತ್ರಿಕೂಟ’(ಪಿ.ಎ.ಜಿ.ಡಿ.)ದ ವಕ್ತಾರ ಹಾಗೂ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ)ನ ಹಿರಿಯ ಮುಖಂಡ ಮಹಮ್ಮದ್ ಯುಸುಫ್ ತರಿಗಾಮಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನು ಓದಿ: ಜಮ್ಮು-ಕಾಶ್ಮೀರದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥರು

ಲಂಗುಲಗಾಮಿಲ್ಲದ ಅಧಿಕಾರ ಪಡೆದಿರುವ ಇನ್ನೊಂದು ಏಜೆನ್ಸಿ ರಚನೆ ನಾಗರಿಕರ ಪ್ರಜಾಪ್ರಭುತ್ವ ಮತ್ತು ನಾಗರಿಕ ಸ್ವಾತಂತ್ರ್ಯದ ಹಕ್ಕುಗಳ ಮೇಲೆ ಇನ್ನೊಂದು ಪ್ರಹಾರ. ಭಯೋತ್ಪಾದನೆಯ ವಿರುದ್ಧ ಹೋರಾಡುವ ಹೆಸರಿನಲ್ಲಿ ಈ ಏಜೆನ್ಸಿಗಳನ್ನು ಮತ್ತು ಕಾನೂನುಗಳನ್ನು ಸರಕಾರದಿಂದ ಭಿನ್ನವಾದ ಕಣ್ಣೋಟವನ್ನು ಹೊಂದಿರುವವರ ವಿರುದ್ಧ ಆಯುಧಗಳನ್ನಾಗಿ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಎನ್‌ಐಎ ಮತ್ತು ಯುಎಪಿಎಯಂತಹ ಕರಾಳ ಕ್ರಮಗಳು ಈಗಾಗಲೇ ಜನಗಳ ನಡುವೆ ದೊಡ್ಡ ಹಾವಳಿಯನ್ನೇ ನಡೆಸಿರುವಾಗ ಇನ್ನೊಂದು ಇಂತಹ ಏಜೆನ್ಸಿಯ ಅಗತ್ಯವಾದರೂ ಏನಿತ್ತು? ಜಮ್ಮು ಮತ್ತು ಕಾಶ್ಮೀರ ಒಂದು ರಾಜಕೀಯ ಪ್ರಶ್ನೆ, ಅದಕ್ಕೆ ಒಂದು ರಾಜಕೀಯ ಕ್ರಮವೇ ಬೇಕಾಗುತ್ತದೆ. ಈಗ ಆಗಬೇಕಾಗಿರುವುದು ಪರಿಹಾರ ಒದಗಿಸುವುದು, ಇಂತಹ ಕಠಿಣ ಕ್ರಮಗಳನ್ನು ಸೇರಿಸುವುದಲ್ಲ, ಇವು ಅವರ ಪರಕೀಯಭಾವವನ್ನು ಇನ್ನಷ್ಟು ಆಳಗೊಳಿಸುವುದು ಖಂಡಿತ ಎಂದು ತರಿಗಾಮಿ ಹೇಳಿದ್ದಾರೆ.

ಇದನ್ನು ಓದಿ: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದಾಗಿ ಎರಡು ವರ್ಷ: ಕೇಂದ್ರ ಸರ್ಕಾರವೇ ಉತ್ತರದಾಯಿ

ಪಿ.ಎ.ಜಿ.ಡಿ. ಈ ಹಿಂದೆ ಇಂತಹ ಎಲ್ಲ ಕಾನೂನುಗಳನ್ನು ವಿರೋಧಿಸಿದೆ, ಮುಂದೆಯೂ ಹಾಗೆಯೇ ಮಾಡುತ್ತದೆ. ದೇಶದಲ್ಲಿನ ಪ್ರತಿಷ್ಠಿತ ನ್ಯಾಯವಿದರೂ ಕೂಡ ಸರಕಾರಗಳು ಭಯೋತ್ಪಾದನೆಯ ವಿರುದ್ಧ ಹೋರಾಡುವ ಹೆಸರಲ್ಲಿ ಕರಾಳ ಕಾಯ್ದೆಗಳನ್ನು ರಚಿಸುವುದರ ಬಗ್ಗೆ ಕ್ರೋಧ ವ್ಯಕ್ತಪಡಿಸಿದ್ದಾರೆ. ಈ ಕಾಯ್ದೆಗಳನ್ನು ವಿರೋಧಿಗಳ ವಿರುದ್ಧ ಅಸ್ತ್ರಗಳಾಗಿ ಬಳಸಬಹುದು. ಪ್ರಜಾಪ್ರಭುತ್ವದ ರಕ್ಷಣೆಯ ಹೋರಾಟ ಈ ಕರಾಳ ಕಾಯ್ದೆಗಳನ್ನು ತೊಡೆದು ಹಾಕುವುದನ್ನೂ ಒಳಗೊಂಡಿರಬೇಕು ಎಂದು ತರಿಗಾಮಿ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *