ಬೆಂಗಳೂರು: ಶಿವಾನಂದ ಸರ್ಕಲ್‌ನಲ್ಲಿ ನಿರ್ಮಿಸಿರುವ ಬೆಂಗಳೂರಿನ ಚೊಚ್ಚಲ ಸ್ಟೀಲ್ ಫ್ಲೈ ಓವರ್ ಬ್ರಿಡ್ಜ್‌ನ ಜಾಯಿಂಟ್‌ನಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಬಿಬಿಎಂಪಿಯ ಕಳಪೆ ಕಾಮಗಾರಿ ಕಂಡುಬಂದಿದೆ.
ಸ್ಟೀಲ್ ಬ್ರಿಡ್ಜ್ ಲೋಕಾರ್ಪಣೆಗೊಂಡ ಎರಡೇ ವರ್ಷಗಲಲ್ಲಿ ಬಿರುಕು ಬಿಟ್ಟಿದ್ದು, ಮೇಲೆ ನಿಂತರೆ ನೆಲ ಕಾಣುವಷ್ಟರ ಮಟ್ಟಿಗೆ ಕಂದಕ ಮೇಲ್ಸೇತುವೆಯಲ್ಲಿ ಕಾಣಿಸಿಕೊಂಡಿದೆ. ಶಿವಾನಂದ ಸರ್ಕಲ್‌ನ ಬೆಂಗಳೂರು ಕೆಫೆ ಬಳಿ ಇರುವ ಪಿಲ್ಲರ್ ಮೇಲಿನ ಜಾಯಿಂಟ್ ಕ್ರ್ಯಾಕ್ ಆಗಿದ್ದು, ಇದೀಗ ಈ ಸೇತುವೆಯ ಮೇಲಿನ ಪ್ರಯಾಣ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಉದ್ಘಾಟನೆಯಾದ ಎರಡನೇ ವರ್ಷದ ಒಳಗೆ ಮೇಲ್ಸೇತುವೆ ಜಾಯಿಂಟ್ ಬಿರುಕು ಬಿಟ್ಟಿದೆ. ಬಿಹಾರದಲ್ಲಿ ಕಂಡುಬರುತ್ತಿರುವ ಸಾಲು ಸಾಲು ಸೇತುವೆಗಳ ಕುಸಿತದ ನಡುವೆ ಈ ಸೇತುವೆಯ ಬಿರುಕು ಆತಂಕ ಮೂಡಿಸಿದೆ. ಪಾಲಿಕೆ ಅಧಿಕಾರಿಗಳ ಕಳಪೆ ಕಾಮಗಾರಿ ಹಾಗೂ ಕಳಪೆ ನಿರ್ವಹಣೆಗೆ ವಾಹನ ಸವಾರರು ಕೆರಳಿ ಕೆಂಡವಾಗಿದ್ದಾರೆ.
ಇದನ್ನು ಓದಿ : SCSP/TSP ಹಣವನ್ನು ಗ್ಯಾರಂಟಿಗೆ ಬಳಸಬೇಡಿ – ದಲಿತ ಹಕ್ಕುಗಳ ಸಮಿತಿ ಆಗ್ರಹ
500 ಮೀಟರ್ ಉದ್ದದ ಮೇಲ್ಸೇತುವೆ 40 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿದೆ. 2022ರಲ್ಲಿ ಇದು ಲೋಕಾರ್ಪಣೆಗೊಂಡಿತ್ತು. ಅರ್ಧ ಕಿಲೋಮೀಟರ್ ಉದ್ದದ ಮೇಲ್ಸೇತುವೆಯನ್ನು, ಶಿವಾನಂದ ಸರ್ಕಲ್‌ನ ವಾಹನಗಳ ದಟ್ಟಣೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ನಿರ್ಮಿಸಲಾಗಿದೆ. ಈ ಪ್ರದೇಶದಲ್ಲಿ ಸಿಎಂ ಅಧಿಕೃತ ನಿವಾಸ, ಸಚಿವರ ಮನೆಗಳು ಸೇರಿದಂತೆ ವಿವಿಐಪಿಗಳ ಸಂಚಾರವೂ ಸಾಕಷ್ಟಿದೆ.
ಸೇತುವೆಯು ಪ್ರಯಾಣದ ಸಮಯವನ್ನು ಕಡಿತಗೊಳಿಸುತ್ತದೆ. ಜನನಿಬಿಡ ರೇಸ್ ಕೋರ್ಸ್ ರಸ್ತೆಯಿಂದ ಶೇಷಾದ್ರಿಪುರಂ ರೈಲ್ವೆ ಕೆಳಸೇತುವೆಯನ್ನು ತಲುಪಲು ಮೊದಲಿನ ಇಪ್ಪತ್ತು ನಿಮಿಷಗಳಿಗೆ ಹೋಲಿಸಿದರೆ ಈಗ ಐದು ನಿಮಿಷಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಈ ಯೋಜನೆಗೆ 2017ರಲ್ಲಿ ಅಡಿಪಾಯ ಹಾಕಲಾಗಿತ್ತು. ಈ ಉಕ್ಕಿನ ಸೇತುವೆಯ ನಿರ್ಮಾಣವನ್ನು ಪೂರ್ಣಗೊಳಿಸಲು ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಐದು ವರ್ಷಗಳನ್ನು ತೆಗೆದುಕೊಂಡಿತು.
ಇದನ್ನು ನೋಡಿ : ಮಡಿಕೇರಿ : ಅಬ್ಬಿ ಜಲಪಾತ ವೀಕ್ಷಣೆಯ ಕಬ್ಬಿಣದ ವಾಚ್ ಟವರ್ ನಲ್ಲಿ ಬಿರುಕುJanashakthi Media