ಮದುರೈ : ಗಾಜಾದ ಮೇಲೆ ಇಸ್ರೇಲ್ ನರಮೇಧದ ದಾಳಿಯನ್ನು ನಡೆಸುತ್ತಿದೆ ಎಂದು ಮಹಾಧಿವೇಶನ ಖಂಡಿಸಿದೆ. ಈ ಕುರಿತು ಅದು ಒಂದು ನಿರ್ಣಯವನ್ನು ಅಂಗೀಕರಿಸಿದೆ. ಅದರಲ್ಲಿ ತಕ್ಷಣದ ಮತ್ತು ಶಾಶ್ವತ ಕದನ ವಿರಾಮಕ್ಕೆ ಅದು ಒತ್ತಾಯ ಮಾಡಿದೆ.
ಅಕ್ಟೋಬರ್ 7, 2023 ರಂದು ಹಮಾಸ್ ದಾಳಿಯ ನಂತರ ಇಸ್ರೇಲ್ ಪ್ಯಾಲೆಸ್ಟೈನ್‌ನ ಗಾಜಾದ ಮೇಲೆ ನರಮೇಧದ ಯುದ್ಧವನ್ನು ಪ್ರಾರಂಭಿಸಿತು. ಈ ಬರ್ಬರ ದಾಳಿಯಲ್ಲಿ 50,021 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ಗಾಯಗೊಂಡಿದ್ದಾರೆ.
ಮೊದಲ ಹಂತದ ಕದನ ವಿರಾಮ ಮುಗಿದ ತಕ್ಷಣ ಇಸ್ರೇಲ್ ಗಾಜಾದ ಮೇಲೆ ತನ್ನ ದಾಳಿಯನ್ನು ಪುನರಾರಂಭಿಸಿದೆ. ಅಂದಿನಿಂದ, ಅದು ಗಾಜಾಗೆ ಆಹಾರ, ನೀರು, ಇಂಧನ, ನೆರವು ಮತ್ತು ಇತರ ಎಲ್ಲಾ ಅಗತ್ಯ ವಸ್ತುಗಳ ಸರಬರಾಜನ್ನು ಕಡಿತಗೊಳಿಸಿದೆ. ಇಸ್ರೇಲ್ ಗಾಜಾವನ್ನು ಕತ್ತು ಹಿಸುಕಿ ಹಸಿವಿನತ್ತ ತಳ್ಳಲು ಉದ್ದೇಶಿಸಿದೆ. ಅದು ಆಸ್ಪತ್ರೆಗಳು, ನೆರವು ದಳಗಳು, ವಿಶ್ವಸಂಸ್ಥೆಯನಿರಾಶ್ರಿತರ ತಾಣಗಳು, ಶಾಲೆಗಳು, ಮಸೀದಿಗಳು ಮತ್ತು ಚರ್ಚ್‌ಗಳ ಮೇಲೆ ದಾಳಿಗಳನ್ನು ನಡೆಸಿತು, ಗಾಜಾದಲ್ಲಿ ಯಾವುದೇ ಸುರಕ್ಷಿತ ಸ್ಥಳವನ್ನು ಬಿಡಲಿಲ್ಲ. ಇಸ್ರೇಲ್ ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಶೇಕಡ 60 ರಷ್ಟು ಮಂದಿ ಮಹಿಳೆಯರು ಮತ್ತು ಮಕ್ಕಳು. ಪತ್ರಕರ್ತರು ಮತ್ತು ವಿಶ್ವಸಂಸ್ಥೆಯ ನೆರವು ಕಾರ್ಯಕರ್ತರನ್ನು ಸಹ ಗುರಿಯಾಗಿಸಿಕೊಂಡು ಕೊಲ್ಲಲಾಯಿತು. ಬೆಳೆಗಳನ್ನು ನಾಶಪಡಿಸಲಾಯಿತು. ಈ ಎಲ್ಲಾ ದಾಳಿಗಳು ಇಸ್ರೇಲ್ ಪ್ರಭುತ್ವದ ನರಮೇಧದ ಸ್ವರೂಪವನ್ನು ಪ್ರದರ್ಶಿಸುತ್ತವೆ. ಇದನ್ನು ಗಮನದಲ್ಲಿಟ್ಟುಕೊಂಡು ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಮತ್ತು ಇತರ ಇಸ್ರೇಲಿ ನಾಯಕರ ಮೇಲೆ ಬಂಧನ ವಾರಂಟ್‌ಗಳನ್ನು ಹೊರಡಿಸಿತು.
ಇದನ್ನೂ ಓದಿ : ಸಿಪಿಐ(ಎಂ) 24 ನೇ ಮಹಾಧಿವೇಶನ: ರಾಜಕೀಯ ನಿರ್ಣಯದ ಮೇಲೆ ಚರ್ಚೆ ಆರಂಭ
ಜಿಯೋನಿಸ್ಟ್ ವಸಾಹತುಗಾರರನ್ನು ಪಶ್ಚಿಮ ದಂಡೆಯಲ್ಲಿರುವ ಪ್ಯಾಲೆಸ್ಟೀನಿಯನ್ ಭೂಮಿಯನ್ನು ಆಕ್ರಮಿಸಿಕೊಳ್ಳಲು ಮತ್ತು ಯಹೂದಿ ವಸಾಹತುಗಳನ್ನು ಸ್ಥಾಪಿಸಲು ಇಸ್ರೇಲ್ ಸಕ್ರಿಯವಾಗಿ ಪ್ರೋತ್ಸಾಹಿಸುತ್ತಿದೆ. ಈ ರೀತಿಯಾಗಿ, ಅದು ಪಶ್ಚಿಮ ದಂಡೆಯಲ್ಲಿರುವ ಪ್ಯಾಲೆಸ್ಟೀನಿಯನ್ ಪ್ರದೇಶವನ್ನು ನಿಧಾನವಾಗಿ ಸ್ವಾಧೀನಪಡಿಸಿಕೊಳ್ಳುತ್ತಿದೆ. ಈ ಎಲ್ಲಾ ಕೃತ್ಯಗಳು ಪ್ಯಾಲೆಸ್ಟೀನಿಯನ್ನರನ್ನು ಅವರ ತಾಯ್ನಾಡಿನಿಂದ ಓಡಿಸಲು ಮತ್ತು ಪ್ಯಾಲೆಸ್ಟೀನ್ ಅನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿವೆ, ಇದು ಗ್ರೇಟರ್ ಇಸ್ರೇಲ್ ಅನ್ನು ಸ್ಥಾಪಿಸುವ ಅದರ ಕಾರ್ಯಸೂಚಿಯನ್ನು ಈಡೇರಿಸಿಕೊಳ್ಳುವುದರ ಭಾಗವಾಗಿದೆ.
ಅಮೆರಿಕ ಮತ್ತು ಪಶ್ಚಿಮ ಯುರೋಪಿನ ಇತರ ಸಾಮ್ರಾಜ್ಯಶಾಹಿ ರಾಷ್ಟ್ರಗಳು ಪ್ಯಾಲೆಸ್ಟೈನ್ ಮೇಲಿನ ದಾಳಿಯಲ್ಲಿ ಇಸ್ರೇಲ್ ಅನ್ನು ಶಸ್ತ್ರಸಜ್ಜಿತಗೊಳಿಸುವ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಬೆಂಬಲಿಸುವ ಮೂಲಕ ಸಕ್ರಿಯವಾಗಿ ಬೆಂಬಲಿಸುತ್ತಿವೆ. ಅಲ್ಲಿ ವಾಸಿಸುವ ಎಲ್ಲಾ ಪ್ಯಾಲೆಸ್ಟೀನಿಯನ್ನರನ್ನು ಹೊರಹಾಕಿ, ಗಾಜಾವನ್ನು ಪ್ರವಾಸಿ ಸ್ವರ್ಗವನ್ನಾಗಿ ಪರಿವರ್ತಿಸುವ ಟ್ರಂಪ್ ಘೋಷಣೆಯು ಒಂದು ಖಂಡನೀಯ ಯೋಜನೆ ಎಂದಿರುವ ಮಹಾಧಿವೇಶನ ಟ್ರಂಫ್ ಘೋಷಣೆ ಇಸ್ರೇಲ್‌ನ ಹಿತಾಸಕ್ತಿಗಳಿಗೆ ಸರಿಹೊಂದುತ್ತದೆ ಎಂದು ಹೇಳಿದೆ.
ಬಿಜೆಪಿ ಕೇಂದ್ರ ಸರ್ಕಾರವು ಪ್ಯಾಲೆಸ್ಟೈನ್ ಕುರಿತಂತೆ ಭಾರತವು ದೀರ್ಘಕಾಲದಿಂದ ತಳೆದಿದ್ದ ಅಧಿಕೃತ ನಿಲುವನ್ನು ದುರ್ಬಲಗೊಳಿಸಿದೆ. ಪ್ಯಾಲೆಸ್ಟೈನ್ ಜನರೊಂದಿಗೆ ದೃಢವಾಗಿ ನಿಂತು ಇಸ್ರೇಲ್ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುವ ಬದಲು, ಬಿಜೆಪಿ ಸರ್ಕಾರ ಈಗ ಇಸ್ರೇಲ್ ಪರವಾಗಿ ನಿಂತಿದೆ. ಇದರ ಪರಿಣಾಮವಾಗಿ, ಭಾರತ ಮೊದಲ ಬಾರಿಗೆ ಯುದ್ಧ ವಿರಾಮವನ್ನು ಕೋರುವ ಮತ್ತು ಇಸ್ರೇಲ್ ಅನ್ನು ಖಂಡಿಸುವ ವಿಶ್ವಸಂಸ್ಥೆಯ ನಿರ್ಣಯಗಳ ವಿರುದ್ಧ ಮತ ಚಲಾಯಿಸಿತು ಅಥವಾ ಗೈರುಹಾಜರಾಯಿತು. ಇಂತಹ ನಿಲುವುಗಳು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಭಾರತದ ವಿಶ್ವಾಸಾರ್ಹತೆಯನ್ನು ಕುಗ್ಗಿಸಿವೆ ಮತ್ತು ಈಗ ಭಾರತವನ್ನು ಇಸ್ರೇಲ್ ಮತ್ತು ಅಮೆರಿಕದ ಮಿತ್ರನೆಂದು ನೋಡಲಾಗುತ್ತಿದೆ.
ತನ್ನ ನಿಲುವುಗಳನ್ನು ಸಮರ್ಥಿಸಿಕೊಳ್ಳುವ ಸಲುವಾಗಿ, ಬಿಜೆಪಿ, ಸಂಘ ಪರಿವಾರದ ಜೊತೆಗೆ ಗಾಜಾದ ಮೇಲಿನ ಇಸ್ರೇಲ್ ದಾಳಿಯನ್ನು ಧಾರ್ಮಿಕ ಯುದ್ಧವೆಂದು ಬಿಂಬಿಸುತ್ತಿದೆ. ರಾಷ್ಟ್ರೀಯತೆಯನ್ನು ಧರ್ಮದೊಂದಿಗೆ ಗುರುತಿಸುವಲ್ಲಿ ಮತ್ತು ಮುಸ್ಲಿಮರ ಮೇಲಿನ ದ್ವೇಷದಲ್ಲಿ ಆರ್‌ಎಸ್‌ಎಸ್ ಮತ್ತು ಝಿಯೋನಿಸ್ಟರ ನಡುವೆ ನಿಕಟ ಸೈದ್ಧಾಂತಿಕ ಬಾಂಧವ್ಯವಿದೆ. ಬಿಜೆಪಿ ಸರ್ಕಾರವು ಇಸ್ರೇಲ್‌ಗೆ ಬೆಂಬಲ ನೀಡುವುದರ ಹಿಂದೆ ಇರುವುದು ಈ ಸೈದ್ಧಾಂತಿಕ ಬಾಂಧವ್ಯವೇ.
ಗಾಜಾದಲ್ಲಿ ತಕ್ಷಣದ ಕದನ ವಿರಾಮ ಉಂಟಾಗಬೇಕು ಎಂದು ಮಹಾಧಿವೇಶನ ಆಗ್ರಹಿಸಿದೆ. ಇಸ್ರೇಲ್ ಅನ್ನು ಜನಾಂಗ ದ್ವೇಷ ನೀತಿಯ ರಾಷ್ಟ್ರವೆಂದು ಘೋಷಿಸಬೇಕು ಮತ್ತು ಅದಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು. ಬಿಜೆಪಿ ಸರ್ಕಾರವು ಇಸ್ರೇಲ್‌ಗೆ ಬೆಂಬಲ ನೀಡುವುದನ್ನು ನಿಲ್ಲಿಸಿ ಪ್ಯಾಲೆಸ್ಟೈನ್ ಅನ್ನು ಬೆಂಬಲಿಸುವ ಬಹುವರ್ಷಗಳಿಂದ ಸ್ಥಾಪಿತಗೊಂಡಿರುವ ಭಾರತದ ನೀತಿಗೆ ಮರಳಬೇಕೆಂದು ಅದು ಒತ್ತಾಯಿಸಿದೆ. ಪೂರ್ವ ಜೆರುಸಲೆಮ್ ಅನ್ನು ರಾಜಧಾನಿಯಾಗಿ ಮತ್ತು 1967 ರ ಹಿಂದಿನ ಗಡಿಗಳನ್ನು ಹೊಂದಿರುವ ಪ್ಯಾಲೆಸ್ಟೈನ್ ಪ್ರಭುತ್ವವನ್ನು ಸ್ಥಾಪಿಸುವುದರಿಂದ ಮಾತ್ರ ಈ ಪ್ರದೇಶದಲ್ಲಿ ಶಾಶ್ವತ ಶಾಂತಿ ಸಾಧ್ಯ ಎಂದು ಮಹಾಧಿವೇಶನ ಅಭಿಪ್ರಾಯ ಪಟ್ಟಿದೆ.
ಪ್ಯಾಲೆಸ್ಟೈನ್ ಜನರೊಂದಿಗೆ ತನ್ನ ಸೌಹಾರ್ದವನ್ನು ವ್ಯಕ್ತಪಡಿಸುತ್ತ ಮಹಾಧಿವೇಶನ ತಮ್ಮ ತಾಯ್ನಾಡಿಗಾಗಿ ಪ್ಯಾಲೆಸ್ಟೈನ್ ಜನತೆಯ ಜೊತೆಗೆ ನ್ಯಾಯಯುತ ಹೋರಾಟದಲ್ಲಿ ದೃಢವಾಗಿ ನಿಲ್ಲಬೇಕು ಎಂದು ಭಾರತೀಯ ಜನತೆಗೆ ಕರೆ ನೀಡಿದೆ.