ಡಬಲ್‍ ಇಂಜಿನ್‍ ಸರಕಾರಗಳ ಧ್ರುವೀಕರಣದ ಕೃತ್ಯಗಳು ಅಮಾಯಕರ  ಸಾವು-ನೋವಿಗೆ ಕಾರಣವಾಗುವ ಹಿಂಸಾಚಾರದತ್ತ ಒಯ್ಯುತ್ತವೆ- ಯೆಚುರಿ

ಮಣಿಪುರದಲ್ಲಿ ಶಾಂತಿ ಮರುಸ್ಥಾಪನೆಗೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು-ಸಿಪಿಐ(ಎಂ) ಪೊಲಿಟ್‍ಬ್ಯುರೊ

ದೊಡ್ಡ ಪ್ರಮಾಣದ ಹಿಂಸಾಚಾರ ಮತ್ತು ಜನಾಂಗೀಯ ಘರ್ಷಣೆಗಳನ್ನು ಕಾಣುತ್ತಿರುವ  ಮಣಿಪುರದ ಪರಿಸ್ಥಿತಿಯು ಆತಂಕಕಾರಿ ಪ್ರಮಾಣವನ್ನು ತಲುಪಿದೆ. ಐದು ಜಿಲ್ಲೆಗಳಾದ್ಯಂತ ಮನೆಗಳ ಧ್ವಂಸ, ಬೆಂಕಿ ಹಚ್ಚುವುದು ಮತ್ತು ಆಸ್ತಿಪಾಸ್ತಿಗಳು, ಚರ್ಚ್‌ಗಳು ಮತ್ತು ದೇವಾಲಯಗಳ ಮೇಲೆ ದಾಳಿಗಳು ನಡೆದಿವೆ. ಘರ್ಷಣೆಗಳು ಹಲವಾರು ಸಾವುಗಳಿಗೆ ಕಾರಣವಾಗಿವೆ.

ಸೇನೆ ಮತ್ತು ಕೇಂದ್ರ ಪೊಲೀಸ್ ಪಡೆಗಳ ನಿಯೋಜನೆಯೊಂದಿಗೆ, ಪರಿಸ್ಥಿತಿಯನ್ನು ಸ್ವಲ್ಪ ನಿಯಂತ್ರಣಕ್ಕೆ ತರಲಾಗಿದೆ, ಆದರೂ ಘಟನೆಗಳು ಇನ್ನೂ ಸಂಭವಿಸುತ್ತಿವೆ. ಇನ್ನೂ ಜನರು ತಮ್ಮ ಮನೆಗಳಲ್ಲಿ ಅಥವಾ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ ಮತ್ತು ಸಾವಿರಾರು ಜನರು ತಮ್ಮ ಮನೆಗಳಿಂದ ಸ್ಥಳಾಂತರಗೊಂಡಿದ್ದಾರೆ.

ಬಿಜೆಪಿ ರಾಜ್ಯ ಸರ್ಕಾರವು ರಾಜ್ಯದಲ್ಲಿ ಬೆಳೆದು ಬರುತ್ತಿದ್ದ ಪರಿಸ್ಥಿತಿಯನ್ನು ಮುಂಗಾಣುವಲ್ಲಿ ವಿಫಲವಾಗಿದೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಮಧ್ಯಪ್ರವೇಶಿಸುವ ಪ್ರಯತ್ನದಲ್ಲಿ ವಿಳಂಬ ಮಾಡಿದೆ. ಅರಣ್ಯ ರಕ್ಷಣೆಯ ಹೆಸರಿನಲ್ಲಿ ಗುಡ್ಡಗಾಡು ಪ್ರದೇಶದಲ್ಲಿರುವ ಜನರನ್ನು ದೊಡ್ಡ ಪ್ರಮಾಣದಲ್ಲಿ ಒಕ್ಕಲೆಬ್ಬಿಸಲು ಮತ್ತು `ಹೊರಗಿನವರು’ ಎಂದು ಹೇಳಲ್ಪಟ್ಟ ಜನಗಳನ್ನು ಹೊರಹಾಕಲು ಆದೇಶಿಸಿದ ರಾಜ್ಯ ಸರ್ಕಾರದ ನೀತಿಯು ಭಯದ ಉಲ್ಬಣಕ್ಕೆ ಕಾರಣವಾಯಿತು ಮತ್ತು ಕೆಲವು ಗುಡ್ಡಗಾಡು ಜಿಲ್ಲೆಗಳಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಯಿತು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಅಭಿಪ್ರಾಯ ಪಟ್ಟಿದೆ.

ಈ ತೀಕ್ಷ್ಣವಾದ ಮತ್ತು ಹಿಂಸಾತ್ಮಕ ಸಂಘರ್ಷಕ್ಕೆ ಕಾರಣವಾದ ಸಮಸ್ಯೆಗಳನ್ನು ಪರಿಹರಿಸುವ ಮೊದಲು ಶಾಂತಿ ಮತ್ತು ಸಹಜ ಸ್ಥಿತಿಯನ್ನು ಪುನಃಸ್ಥಾಪಿಸುವುದು ತಕ್ಷಣದ ಕಾರ್ಯವಾಗಿದೆ. ರಾಜ್ಯ ಸರ್ಕಾರ ಕೇಂದ್ರದ ನೆರವಿನೊಂದಿಗೆ ನಿರಾಶ್ರಿತರಿಗೆ ಅವರ ವಾಸ್ತವ್ಯದ ಸ್ಥಳಗಳಲ್ಲಿ ಪುನರ್ವಸತಿ ಕಲ್ಪಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದಿರುವ ಪೊಲಿಟ್‍ಬ್ಯುರೊ,ಸನ್ನಿವೇಶವನ್ನು ಒಗ್ಗಟ್ಟಿನಿಂದ ನಿಭಾಯಿಸಲು ಸಾಧ್ಯವಾಗುವಂತೆ ಒಂದು ಸರ್ವಪಕ್ಷ ಸಭೆ ಕರೆಯಬೇಕು ಎಂದು ರಾಜ್ಯ ಸರಕಾರಕ್ಕೆ ಹೇಳಿದೆ.

ಈ ಬಗ್ಗೆ ಟ್ವೀಟ್‍ ಮಾಡುತ್ತ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ “ಮುನ್ಸೂಚನೆಗಳನ್ನು ನೋಡಿ ಕ್ರಿಯೆಗಿಳಿಯದಿರುವುದು ಬಿಜೆಪಿಯ ಕ್ರಿಮಿನಲ್‍ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದಿದ್ದಾರೆ. ಧ್ರುವೀಕರಣವನ್ನು ತೀಕ್ಷ್ಣಗೊಳಿಸುವುದನ್ನೇ ಪ್ರಧಾನ ಕೆಲಸವೆಂದು ಅದರಲ್ಲೇ ಮುಳುಗಿರುವ ಈ ಡಬಲ್‍ ಇಂಜಿನ್‍ ಸರಕಾರಗಳು ರಾಜ್ಯಗಳನ್ನು ಇಂತಹ ಪರಸ್ಪರ ಕೊಳ್ಳಿಯಿಡುವ ಹಿಂಸಾಚಾರಕ್ಕೆ ತಳ್ಳುತ್ತವೆ, ಇದು ಮುಗ್ಧ ಜೀವಗಳನ್ನು ನುಂಗಿ ಹಾಕುತ್ತದೆ ಎಂದು ಅವರು ಖೇದ ವ್ಯಕ್ತಪಡಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *