ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ) ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ವಿರುದ್ಧ ಹೋರಾಟ ಮಾಡಲು ʻಭಾರತ್ ಜೋಡೋ ಯಾತ್ರೆʼ ಆಯೋಜನೆ ಮಾಡಿರೋದಾಗಿ ಕಾಂಗ್ರೆಸ್ ಪಕ್ಷ ಹೇಳುತ್ತಿದೆ. ಆದರೆ, ಈ ಯಾತ್ರೆ ಎಡಪಕ್ಷ ಆಡಳಿತದ ಕೇರಳದಲ್ಲಿ 18 ದಿನ ಹಾಗೂ ಬಿಜೆಪಿ ಆಡಳಿತದ ಉತ್ತರ ಪ್ರದೇಶದಲ್ಲಿ ಕೇವಲ 2 ದಿನ ನಡೆಯುತ್ತಿದೆ. ಇದೇಕೆ ಹೀಗೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷ ಪ್ರಶ್ನಿಸಿದೆ.
— CPI (M) (@cpimspeak) September 12, 2022
ಈ ಕುರಿತು ವ್ಯಂಗ್ಯ ಚಿತ್ರವೊಂದನ್ನು ಬಳಸಿ ಟ್ವೀಟ್ ಮಾಡಿರುವ ಸಿಪಿಐ(ಎಂ) ಪಕ್ಷವು ರಾಹುಲ್ ಗಾಂಧಿ ಅವರಿಗೆ ನೇರಾನೇರ ಸವಾಲೆಸೆದಿದೆ. ಕೇರಳ, ಉತ್ತರ ಪ್ರದೇಶ ರಾಜ್ಯಗಳಿಗೆ ಇರುವ ಗಾತ್ರ ವ್ಯತ್ಯಾಸವನ್ನೂ ಸಿಪಿಐ(ಎಂ) ಬಿಂಬಿಸಿದೆ.
ನಿಮ್ಮದು ಭಾರತ್ ಜೋಡೋ ಯಾತ್ರೆಯೋ? ಸೀಟ್ ಜೋಡೋ ಯಾತ್ರೆಯೋ? ಎಂದು ಪ್ರಶ್ನಿಸಲಾಗಿದ್ದು, ಕೇರಳದಲ್ಲಿ 18 ದಿನ, ಉತ್ತರ ಪ್ರದೇಶದಲ್ಲಿ ಮಾತ್ರ ಕೇವಲ 2 ದಿನ ಯಾತ್ರೆ ಮಾಡುವ ಮೂಲಕ ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ಹೇಗೆ ಹೋರಾಟ ಮಾಡುವಿರಿ ಎಂದು ಪ್ರಶ್ನೆ ಮಾಡಿದೆ.
6ನೇ ದಿನಕ್ಕೆ ಕಾಲಿಟ್ಟ ಭಾರತ್ ಜೋಡೋ ಯಾತ್ರೆ
2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಸಾರಥ್ಯದಲ್ಲಿ ಭಾರತ್ ಜೋಡೋ ಯಾತ್ರೆ, 6ನೇ ದಿನಕ್ಕೆ ಕಾಲಿಟ್ಟಿದೆ. ಕನ್ಯಾಕುಮಾರಿಯಿಂದ ಆರಂಭವಾದ ಯಾತ್ರೆ ಇದೀಗ ಕೇರಳಕ್ಕೆ ಕಾಲಿಟ್ಟಿದ್ದು, ಕಾಶ್ಮೀರದವರೆಗೆ ಸಾಗಲಿದೆ. ದೇಶಾದ್ಯಂತ ಒಟ್ಟು 3,500 ಕಿ. ಮೀ. ದೂರ ಯಾತ್ರೆ ಸಾಗಲಿದೆ. ಬರೋಬ್ಬರಿ 150 ದಿನಗಳ ಕಾಲ ನಡೆಯಲಿರುವ ಈ ಯಾತ್ರೆ, ದೇಶದ ಒಟ್ಟು 12 ರಾಜ್ಯಗಳಲ್ಲಿ ಸಂಚರಿಸಲಿದೆ.