ಕೆಲವು ಕೊರತೆಗಳಿದ್ದರೂ, ಒಟ್ಟಾರೆ ಸ್ವಾಗತಾರ್ಹ: ರಾಜ್ಯ ಬಜೆಟ್‌ಗೆ ಸಿಪಿಐ(ಎಂ) ಪ್ರತಿಕ್ರಿಯೆ

ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಒದಗಿಸಲಾದ ಮೊತ್ತವು ಸಮರ್ಪಕವಾಗಿಲ್ಲ ಎಂದು ಸಿಪಿಐ(ಎಂ) ಅಸಮಾಧಾನ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ ಮಂಡಿಸಿದ 2023-24 ರ ಸಾಲಿನ ರಾಜ್ಯ ಬಜೆಟ್ 3.27. ಲಕ್ಷ ಕೋಟಿ ರೂಗಳ ಬಜೆಟ್ ಕೆಲವು ಕೊರತೆಗಳನ್ನು ಹೊಂದಿದ್ದರೂ ಒಟ್ಟಾರೆ ಸ್ವಾಗತಾರ್ಹವಾಗಿದೆ ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಪ್ರತಿಕ್ರಿಯಿಸಿದೆ. ಆದರೆ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಒದಗಿಸಲಾದ ಮೊತ್ತವು ಸಮರ್ಪಕವಾಗಿಲ್ಲ ಎಂದು ಪಕ್ಷ ಹೇಳಿದ್ದು, ಮುಖ್ಯಮಂತ್ರಿಗಳು ಈ ಕುರಿತಂತೆ ಬಜೆಟ್‌ನಲ್ಲಿ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದೆ.

ಬಜೆಟ್ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಿಪಿಐ(ಎಂ), “ಐದು ಗ್ಯಾರಂಟಿಗಳನ್ನು ಈಡೇರಿಸುವುದಕ್ಕೆ ಮುಖ್ಯಮಂತ್ರಿ ಒತ್ತುಕೊಟ್ಟಿದ್ದಾರೆ. ಅದೇ ರೀತಿ, ಹಿಂದಿನ‌ ಬಿಜೆಪಿ ನೇತೃತ್ವದ ಜನಾದೇಶವಿಲ್ಲದ ಸರಕಾರ ರಾಜ್ಯದ ಎಲ್ಲ ಬಡವರಿಗೆ ಹಾಗೂ ಮಹಿಳೆಯರಿಗೆ ಶಿಕ್ಷಣವನ್ನು ನಿರಾಕರಿಸುವ ದುರುದ್ದೇಶದಿಂದ ಜಾರಿಗೊಳಿಸಿದ್ದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಯನ್ನು ಮತ್ತು ರೈತ ವಿರೋದಿ ಏಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ವಾಪಾಸು ಪಡೆದಿರುವುದು ಸ್ವಾಗತಾರ್ಹ” ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ್ ಹೇಳಿದ್ದಾರೆ.

ಇದನ್ನೂ ಓದಿ: Karnataka Budget 2023-24 | ರಾಜ್ಯವನ್ನು ಹಿಂದಕ್ಕೆ ತಳ್ಳುವ ರಿವರ್ಸ್‌ ಗೇರ್‌ ಬಜೆಟ್: ಮಾಜಿ ಸಿಎಂ ಬೊಮ್ಮಾಯಿ

“ಗೃಹ ಜ್ಯೋತಿ ಯೋಜನೆಯು ಮುಖ್ಯವಾಗಿ ಭಾಗ್ಯಜ್ಯೋತಿ, ಕುಠೀರ ಜ್ಯೋತಿ ಮುಂತಾದ ಜ್ಯೋತಿಗಳ ಫಲಾನುಭವಿಗಳಿಗೆ ಪ್ರಯೋಜನಕಾರಿಯಾಗಿಲ್ಲ. ಮುಖ್ಯವಾಗಿ ಹಳೆಯ ಬಾಕಿ ಮನ್ನಾ ಮಾಡದೇ ಮತ್ತು ಅವರ ಯುನಿಟ್ ಬಳಕೆಯ ಮಿತಿಯನ್ನು ರದ್ದು ಮಾಡದೇ ಹೆಚ್ಚಿನ ಪ್ರಯೋಜನವಿಲ್ಲ. ರಾಜ್ಯದ ಅಭಿವೃದ್ಧಿಗೆ ಮಾರಕವಾದ ವಿದ್ಯುತ್ ಬೆಲೆ ನಿಯಂತ್ರಣದ ಕುರಿತು ಬಜೆಟ್ ಮೌನ ವಹಿಸಿದೆ” ಎಂದು ಸಿಪಿಐ(ಎಂ) ಹೇಳಿದೆ.

“ಕೃಷಿ ಹಾಗೂ ರಾಜ್ಯದ ಅಭಿವೃದ್ಧಿ ವಿರೋಧಿಯಾದ, ಕಾರ್ಪೋರೇಟ್ ಲೂಟಿಗೆ ಪೂರಕವಾಗಿದ್ದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ – 2020, ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ – 2020 ಮತ್ತು ರಾಜ್ಯದ ಕಾರ್ಮಿಕ ವಿರೋಧಿ ಕಾರ್ಖಾನೆಗಳ ತಿದ್ದುಪಡಿ ಕಾಯ್ದೆಗಳ ಕುರಿತು ಸರಕಾರ ಜಾಣ ಮೌನ ಅನುಸರಿಸಿದೆ” ಎಂದು ಸಿಪಿಐ(ಎಂ) ಅಸಮಾಧಾನ ವ್ಯಕ್ತಪಡಿಸಿದೆ,

“ರೈತರ ಸಾಲ ಮನ್ನಾ ಕುರಿತಂತೆ ಮತ್ತು ಕೃಷಿರಂಗದ ಕನಿಷ್ಠ ವೇತನ 424 ರೂಗಳನ್ನು ಉದ್ಯೋಗ ಖಾತ್ರಿಗೆ ವಿಸ್ಥರಿಸುವ ಕುರಿತು ಸರ್ಕಾರ ಮೌನವಾಗಿದೆ” ಎಂದು ಸಿಪಿಐ(ಎಂ) ಹೇಳಿದ್ದು, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಒದಗಿಸಲಾದ ಮೊತ್ತವು ಸಮರ್ಪಕವಾಗಿಲ್ಲದ ಕೊರತೆಗಳನ್ನು ಬಜೆಟ್ ಹೊಂದಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ  ಯು. ಬಸವರಾಜ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Karnataka Budget 2023 Live Updates | ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ ಸಂಕ್ಷಿಪ್ತ ಮಾಹಿತಿ

Donate Janashakthi Media

Leave a Reply

Your email address will not be published. Required fields are marked *