“ಆದೇಶ ಹಿಂಪಡೆಯದಿದ್ದರೆ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ” ಎಚ್ಚರಿಕೆ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹಸ್ತಾಂತರಿಸುವ ಆರೋಗ್ಯ ಇಲಾಖೆಯ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿ ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮಂಗಳೂರಿನಲ್ಲಿ ಬೃಹತ್ ಮೆರವಣಿಗೆ ಹಾಗೂ ಪ್ರತಿಭಟನಾ ಸಭೆ ನಡೆಸಿತು. ಸರಕಾರಿ
ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಆರಂಭವಾದ ಮೆರವಣಿಗೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು. ಮೆರವಣಿಗೆಯುದ್ದಕ್ಕೂ ಆರೋಗ್ಯ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಘೋಷಣೆಗಳು ಮೊಳಗಿದವು. ಬಳಿಕ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನಾ ಸಭೆ ನಡೆಯಿತು.
ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ. ಯಾದವ ಶೆಟ್ಟಿ ವಹಿಸಿದ್ದರು. ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, “ದಕ್ಷಿಣ ಕನ್ನಡ ಜಿಲ್ಲೆ ಖಾಸಗಿ ಮೆಡಿಕಲ್ ಕಾಲೇಜುಗಳು ಮತ್ತು ಕಾರ್ಪೊರೇಟ್ ಆಸ್ಪತ್ರೆಗಳ ಹಿಡಿತಕ್ಕೆ ಸಿಲುಕಿದೆ. ಮಂಗಳೂರನ್ನು ಅತ್ಯುತ್ತಮ ಚಿಕಿತ್ಸೆಯ ನಗರ ಎಂದು ಪ್ರಚಾರ ಮಾಡಲಾಗುತ್ತಿದೆ. ಆದರೆ ವಾಸ್ತವದಲ್ಲಿ ಖಾಸಗಿ ಕಾರ್ಪೊರೇಟ್ ಆಸ್ಪತ್ರೆಗಳು ಸಾಮಾನ್ಯ ಜನರಿಗೆ ಸುಲಿಗೆ ಕೇಂದ್ರಗಳಾಗಿ ಪರಿಣಮಿಸಿವೆ” ಎಂದು ಆರೋಪಿಸಿದರು. ಸರಕಾರಿ
ಇದನ್ನೂ ಓದಿ :
“ಖಾಸಗಿ ಆಸ್ಪತ್ರೆಗಳ ದುಬಾರಿ ಚಿಕಿತ್ಸಾ ವೆಚ್ಚ ಭರಿಸಲಾಗದೆ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಚಿಕಿತ್ಸೆಗೆ ದೇಣಿಗೆ ಸಂಗ್ರಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹಸ್ತಾಂತರಿಸುವುದು ಬಡಜನರ ಆರೋಗ್ಯ ಹಕ್ಕಿನ ಮೇಲಿನ ದಾಳಿ” ಎಂದು ಅವರು ಹೇಳಿದರು.
“ಈ ತೀರ್ಮಾನ ಸಾರ್ವಜನಿಕ ಆರೋಗ್ಯ ಸೇವೆಯ ಸಂಪೂರ್ಣ ಖಾಸಗೀಕರಣಕ್ಕೆ ದಾರಿ ಮಾಡಿಕೊಡಲಿದೆ. ಬಡ ರೋಗಿಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳ ವೈದ್ಯ ವಿದ್ಯಾರ್ಥಿಗಳ ಕಲಿಕಾ ಸಾಧನವಾಗಿ ಬಳಸುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಸರಕಾರ ಈ ಪ್ರತಿಗಾಮಿ ಆದೇಶವನ್ನು ಹಿಂಪಡೆಯದಿದ್ದರೆ ಜಿಲ್ಲೆಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ರಸ್ತೆಗಳಲ್ಲಿ ತಡೆದು ಕಪ್ಪು ಬಾವುಟ ಪ್ರದರ್ಶಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು. ಸರಕಾರಿ
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, “ಆರೋಗ್ಯ ಕ್ಷೇತ್ರದ ಖಾಸಗೀಕರಣವನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು. ಕಾಂಗ್ರೆಸ್ ಸರಕಾರದ ಈ ತೀರ್ಮಾನವನ್ನು ವಿರೋಧ ಪಕ್ಷ ಬಿಜೆಪಿ ಪ್ರಶ್ನಿಸದಿರುವುದು, ಈ ಒಪ್ಪಂದದಲ್ಲಿ ಬಿಜೆಪಿಯೂ ಶಾಮೀಲಾಗಿರುವುದನ್ನು ತೋರಿಸುತ್ತದೆ” ಎಂದು ಆರೋಪಿಸಿದರು.
“ಖಾಸಗಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳ ಮಾಲೀಕರ ಪರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಕೆಲಸ ಮಾಡುತ್ತಿವೆ. ಸರಕಾರಿ ಆಸ್ಪತ್ರೆಗಳ ಖಾಸಗೀಕರಣದ ಕುರಿತು ಬಿಜೆಪಿಯ ಮೌನವೇ ಇದಕ್ಕೆ ಸಾಕ್ಷಿ. ಆದೇಶ ಹಿಂಪಡೆಯುವವರೆಗೂ ಸಿಪಿಐಎಂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ” ಎಂದು ಅವರು ಹೇಳಿದರು.
ಪ್ರತಿಭಟನಾ ಸಭೆಯಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಡಾ. ಕೃಷ್ಣಪ್ಪ ಕೊಂಚಾಡಿ, ಬಿ.ಎಂ. ಭಟ್, ವಸಂತ ಆಚಾರಿ, ಜಯಂತಿ ಶೆಟ್ಟಿ ಹಾಗೂ ಸುಕುಮಾರ್ ತೊಕ್ಕೊಟ್ಟು ಉಪಸ್ಥಿತರಿದ್ದರು. ಜಿಲ್ಲಾ ಸಮಿತಿ ಸದಸ್ಯ ಮನೋಜ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು. ಸದಾಶಿವ ದಾಸ್ ವಂದಿಸಿದರು. ಸರಕಾರಿ
ಇದನ್ನೂ ನೋಡಿ : ನೀಟ್ ಪ್ರಶ್ನೆಪತ್ರಿಕೆ ಸೋರಿಕೆ | ಚೀನಾ ಮಾದರಿ ಭಾರತದಲ್ಲಿ ಸಾಧ್ಯವೇ? Janashakthi Media
