ನವದೆಹಲಿ: ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆ (ಡಿಎಸ್‌ಐಆರ್) ಅಡಿಯಲ್ಲಿ ಸಾರ್ವಜನಿಕ ವಲಯದ ಉದ್ಯಮವಾಗಿರುವ ಸೆಂಟ್ರಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಸಿಇಎಲ್) ಅನ್ನು “ಫರ್ನಿಚರ್” ಕಂಪನಿಗೆ ಮಾರಾಟ ಮಾಡುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರದ ಕ್ರಮವನ್ನು ಸಿಪಿಐ(ಎಂ) ಸಂಸದರು ಖಂಡಿದ್ದಾರೆ.
ಸೆಂಟ್ರಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಸಿಇಎಲ್)ನ ಅಂದಾಜು ಮೌಲ್ಯ ₹440 ಕೋಟಿ, ಆದರೆ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಯಾವುದೇ ಪರಿಣಿತಿ ಇಲ್ಲದ ವ್ಯಾಪಾರ ಕಂಪನಿಗೆ ಕೇವಲ ₹210 ಕೋಟಿಗೆ ಮಾರಾಟ ಮಾಡಲಾಗುತ್ತಿದೆ ಎಂದು ರಾಜ್ಯಸಭಾ ಸದಸ್ಯ ವಿ.ಶಿವದಾಸನ್ ಹೇಳಿದ್ದಾರೆ. ದೇಶದ ರಾಷ್ಟ್ರೀಯ ಪ್ರಯೋಗಾಲಯಗಳು ಅಭಿವೃದ್ಧಿಪಡಿಸಿದ ಸ್ಥಳೀಯ ತಂತ್ರಜ್ಞಾನಗಳನ್ನು ವಾಣಿಜ್ಯಿಕವಾಗಿ ಬಳಸಿಕೊಳ್ಳಲು ಸಿಇಎಲ್ ಅನ್ನು 1974 ರಲ್ಲಿ ಸ್ಥಾಪಿಸಲಾಯಿತು.
ಸಿಪಿಐ(ಎಂ) ರಾಜ್ಯಸಭಾ ಸದಸ್ಯ ವಿ.ಶಿವದಾಸನ್ ಅವರು ಹೇಳಿಕೆ ಬಿಡುಗಡೆ ಮಾಡಿದ್ದು, ಪ್ರಸಕ್ತ ಸಾಂಕ್ರಾಮಿಕತೆ ಗಂಭೀರ ಪರಿಣಾಮದ ಕಾಲದಲ್ಲಿಯೂ ಸಹ ಕಂಪನಿಯು ₹337 ಕೋಟಿ ವಹಿವಾಟು ನಡೆಸಿತು ಮತ್ತು ಲಾಭದಾಯಕವಾಗಿದೆ ಎಂದು ಗಮನಸೆಳೆದರು. ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಸಿಇಎಲ್ ಸ್ವಾಧೀನದಲ್ಲಿರುವ 2.02 ಲಕ್ಷ ಚದರ ಮೀಟರ್ ಭೂಮಿಯನ್ನು ಅಲ್ಲಿನ ಮಾರುಕಟ್ಟೆ ದರ ₹440 ಕೋಟಿ ಎಂದು ಅಂದಾಜಿಸಲಾಗಿದೆ. ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಯಾವುದೇ ಪರಿಣಿತಿ ಇಲ್ಲದ ಕಂಪನಿಗೆ ಇಂತಹ ಸಿಇಎಲ್ ಸಂಸ್ಥೆಯನ್ನು ಕೇವಲ ₹210 ಕೋಟಿಗೆ ಮಾರಾಟ ಮಾಡುತ್ತಿರುವುದು ದಿಗ್ಭ್ರಮೆ ಮೂಡಿಸಿದೆ ಎಂದರು.
ಸಿಪಿಐ(ಎಂ) ರಾಜ್ಯಸಭಾ ಸದಸ್ಯ ಜಾನ್ ಬ್ರಿಟಾಸ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು, ಸಿಇಎಲ್ ಸಂಸ್ಥೆಯನ್ನು ಮಾರಾಟ ಮಾಡುವ ನಿರ್ಧಾರವನ್ನು ಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ. ವಿದ್ಯುನ್ಮಾನ ತಂತ್ರಜ್ಞಾನದಲ್ಲಿ ಯಾವುದೇ ಅನುಭವವಿಲ್ಲದ ಸಂಸ್ಥೆಗೆ ಮಾರಾಟ ಮಾಡಲಾಗುತ್ತಿದೆ. ಸಿಇಎಲ್ ಅನ್ನು ನಂದಲ್ ಫೈನಾನ್ಸ್ ಮತ್ತು ಲೀಸಿಂಗ್ ಪ್ರೈವೇಟ್ ಲಿಮಿಟೆಡ್‌ಗೆ ಮಾರಾಟ ಮಾಡಲಾಗುತ್ತಿದೆ. 2019-2020ರಲ್ಲಿ ಸಂಸ್ಥೆಯು ಸಲ್ಲಿಸಿದ ಹಣಕಾಸು ಹೇಳಿಕೆಗಳ ಪ್ರಕಾರ, ಅದರ 99.96% ಈಕ್ವಿಟಿಯನ್ನು ಪ್ರೀಮಿಯರ್ ಫರ್ನಿಚರ್ಸ್ ಮತ್ತು ಇಂಟೀರಿಯರ್ಸ್ ಪ್ರೈವೇಟ್ ಲಿಮಿಟೆಡ್ ಹೊಂದಿದೆ ಎಂದು ಹೇಳಲಾಗಿದೆ. ಇದು ನಿಜವಾಗಿದ್ದಲ್ಲಿ, ರಕ್ಷಣಾ ವಲಯದಲ್ಲಿ ಪ್ರಭಾವ ಬೀರುವ ಆಯಕಟ್ಟಿನ ಪ್ರಮುಖ ಘಟಕಗಳನ್ನು ತಯಾರಿಸುವ ಕಾರ್ಯತಂತ್ರದ ಪಿಎಸ್‌ಯು ಅನ್ನು ಪರೋಕ್ಷವಾಗಿ ಫರ್ನಿಚರ್ ಕಂಪನಿಗೆ ಮಾರಾಟ ಮಾಡಲು ಸರ್ಕಾರವು ಪ್ರಸ್ತಾಪಿಸುತ್ತಿದೆ ಎಂಬ ಆರೋಪವನ್ನು ನಾವು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಉದ್ದೇಶಿತ ಕ್ರಮದ ಬಗ್ಗೆ ಕಡಿಮೆ ಮೌಲ್ಯೀಕರಿಸುವುದು ಮಾತ್ರವಲ್ಲ, ಸಾರ್ವಜನಿಕ ಸ್ವತ್ತುಗಳನ್ನು ಖರೀದಿಸುವ ಖಾಸಗಿ ಸಂಸ್ಥೆಗಳು ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಂದ ಅಗತ್ಯವಿರುವ ಹೆಚ್ಚಿನ ಸಂಪನ್ಮೂಲಗಳನ್ನು ಸಂಗ್ರಹಿಸುತ್ತವೆ. ಸರ್ಕಾರವು ಹೆಚ್ಚುವರಿ ಹಣಕಾಸಿನ ಸಂಪನ್ಮೂಲಗಳನ್ನು ಸಂಗ್ರಹಿಸಲು ಬಯಸಿದರೆ, ಅದನ್ನು ಮಾಡಲು ಹೆಚ್ಚು ಸೌಮ್ಯವಾದ ಮತ್ತು ಪರಿಣಾಮಕಾರಿ ಮಾರ್ಗಗಳಿವೆ ಎಂದು ಅವರು ಹೇಳಿದರು.