ಕೆ.ಆರ್. ಗೌರಿ ಅಮ್ಮ ಅವರ ನಿಧನದ ಸುದ್ದಿ ನೋವು ಮತ್ತು ದುಃಖ ಉಂಟುಮಾಡಿದೆ, ಅವರು ಕೇರಳದ ಜನತೆಯ ಅಂದೋಲನದ ಅಪ್ರತಿಮ ನೇತಾರರಾಗಿದ್ದರು ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಶ್ರದ್ಧಾಂಜಲಿ ಅರ್ಪಿಸುತ್ತ ಹೇಳಿದ್ದಾರೆ.
ಗೌರಿ ಅಮ್ಮ ಕೇರಳದ 1957ರ ಇಎಂಎಸ್ ನಂಬೂದಿರಿಪಾಡ್ ನೇತೃತ್ವದ ಮೊದಲ ಕಮ್ಯುನಿಸ್ಟ್ ಮಂತ್ರಿಮಂಡಲದಲ್ಲಿ ರೆವಿನ್ಯೂ, ಅಬಕಾರಿ ಮತ್ತು ದೇವಸ್ವಂ ಮಂತ್ರಿಯಾಗಿದ್ದರು. ಅವರು ಕೇರಳದ ಭೂಸುಧಾರಣೆಗಳ ಶಿಲ್ಪಿಗಳಲ್ಲಿ ಒಬ್ಬರು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಇದನ್ನು ಓದಿ: ಗೌರಿ ಅಮ್ಮ ನಿಧನಕ್ಕೆ ವಿಜಯರಾಘವನ್ ಸಂದೇಶ
ಈಗಿನ ಕೇರಳ ರಚನೆಯಾಗುವ ಮೊದಲೇ ಅವರು ತಿರುವಾಂಕೂರು-ಕೊಚ್ಚಿ ಶಾಸನ ಸಭೆಗೆ ಎರಡು ಬಾರಿ ಚುನಾಯಿತರಾಗಿದ್ದರು. ಅವರು ರಾಜ್ಯದ ವಿವಿಧ ಸಂಪುಟಗಳಲ್ಲಿ ಮಂತ್ರಿಯಾಗಿದ್ದರು, 1994 ರಲ್ಲಿ ಪಕ್ಷದಿಂದ ಉಚ್ಛಾಟನೆಗೊಂಡ ಮೇಲೆ ಯುಡಿಎಫ್ ಮಂತ್ರಿಮಂಡಲದಲ್ಲೂ ಸ್ವಲ್ಪ ಕಾಲ ಅವರು ಮಂತ್ರಿಯಾಗಿದ್ದರು. ಆದರೆ ಯುಡಿಎಫ್‌ನಿಂದ ಭ್ರಮನಿರಸನಗೊಂಡು ಅವರು ಕಳೆದ ಕೆಲವು ವರ್ಷಗಳಿಂದ ಎಲ್‌ಡಿಎಫ್ ಜತೆಗೆ ಸಹಕರಿಸುತ್ತಿದ್ದರು ಎಂದು ಯೆಚುರಿ ನೆನಪಿಸಿಕೊಂಡಿದ್ದಾರೆ.
ಕೇರಳದ ಕಮ್ಯುನಿಸ್ಟ್ ಆಂದೋಲನದ ಇನ್ನೊಬ್ಬ ಹಿರಿಯ ನೇತಾರ ಟಿ.ವಿ. ಥಾಮಸ್‌ರವರನ್ನು ಮದುವೆಯಾಗಿದ್ದ ಗೌರಿ ಅಮ್ಮ, 1964ರಲ್ಲಿ ಪಕ್ಷದ ವಿಭಜನೆಯಾದಾಗ ಥಾಮಸ್ ಅವರು ಸಿಪಿಐ ನಲ್ಲೇ ಉಳಿದರೂ, ಇವರು ಸಿಪಿಐ(ಎಂ) ಜತೆಗೆ ನಿಂತರು.
ಇದನ್ನು ಓದಿ: ಎಡ ಚಿಂತಕಿ ಗೌರಿ ಅಮ್ಮ ಬೀದಿ ಬೀದಿಯಲ್ಲಿ ಇಂಕ್ವಿಲಾಬ್ ಜಿಂದಾಬಾದ್ ಮೊಳಗಿಸಿದವರು
ಅವರ ನಿರ್ಗಮನದೊಂದಿಗೆ, 1957ರ ಇಎಂಎಸ್ ನಂಬೂದಿರಿಪಾಡ್ ನೇತೃತ್ವದ ಕಮ್ಯುನಿಸ್ಟ್ ಮಂತ್ರಿಮಂಡಲದ ಕೊನೆಯ ಸದಸ್ಯರನ್ನೂ ಕೇರಳ ಕಳೆದುಕೊಂಡಿದೆ ಎಂದಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಗಳು “ಕೇರಳ ತನ್ನ ಖ್ಯಾತಿವೆತ್ತ ಮತ್ತು ವ್ಯಾಪಕ ಗೌರವ, ಪ್ರಶಂಸೆಗೆ ಪಾತ್ರವಾಗಿದ್ದ ಪುತ್ರಿಯೊಬ್ಬರನ್ನು ಕಳಕೊಂಡಿದೆ” ಎನ್ನುತ್ತ ಗೌರಿ ಅಮ್ಮನ ನೆನಪಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.