ಬೆಂಗಳೂರು: ನಗರದ ಕೋಗಿಲು ಬಡಾವಣೆಯ ಅಕ್ರಮ ಮನೆಗಳ ತೆರವು ಹೆಸರಿನಲ್ಲಿ ನಡೆದ ಘಟನೆಯನ್ನು ಕೋಮುವಾದೀಕರಣಗೊಳಿಸುತ್ತಿರುವ ಬಿ.ಜೆ.ಪಿ.ಯ ಕುಟಿಲ ರಾಜಕೀಯವನ್ನು ಸಿಪಿಐ(ಎಂ) ಖಂಡಿಸುತ್ತದೆ ಎಂದು ರಾಜ್ಯ ಕಾರ್ಯದರ್ಶಿ ಡಾ. ಪ್ರಕಾಶ್ ಕೆ ಹೇಳಿದ್ದಾರೆ.
ಹಲವು ವರ್ಷಗಳಿಂದ ಅಲ್ಲಿ ಬದುಕುತ್ತಿದ್ದು ಆಧಾರ್ ಕಾರ್ಡ್, ಮತದಾರರ ಚೀಟಿ, ರೇಷನ್ ಕಾರ್ಡ್ ಗಳಂತಹ ಸರಕಾರದ ಅಧಿಕೃತ ದಾಖಲೆಗಳನ್ನು ಹೊಂದಿದವರನ್ನು ಬಾಂಗ್ಲಾದೇಶ ದವರೆಂದು ಬಿ.ಜೆ.ಪಿ. ಗುಲ್ಲೆಬ್ಬಿಸುತ್ತಿದೆ. ಬೆಂಗಳೂರೂ ಸೇರಿದಂತೆ ರಾಜ್ಯದ ಹಲವು ಕಡೆ ಇರುವ ವಸತಿಹೀನರಿಗೆ ವಸತಿ ಸೌಕರ್ಯ ಒದಗಿಸುವುದು ಯಾವುದೇ ಸರಕಾರದ ಜವಾಬ್ದಾರಿಯಾಗಿದ್ದು ದುಡಿಯುವ ಬಡ ಜನರ ಪರವಾಗಿ ಸಿಪಿಐ(ಎಂ) ಸದಾ ಧ್ವನಿ ಎತ್ತುತ್ತದೆ. ಬಿ.ಜೆ.ಪಿ. ಇದನ್ನು ಕೋಮುವಾದೀಕರಣಗೊಳಿಸುತ್ತಿರುವುದು ಖಂಡನೀಯ ಎಂದು ಸಿಪಿಐ(ಎಂ) ಹೇಳಿದೆ.
ದೇಶದ ಸಂವಿಧಾನವು ದೇಶದ ಯಾವುದೇ ಭಾಗದಲ್ಲಿ ವಾಸಿಸುವ, ಉದ್ಯೋಗ, ಶಿಕ್ಷಣ, ವ್ಯಾಪಾರ, ಮಾಡುವ ಹಕ್ಕನ್ನು ಧರ್ಮಾತೀತವಾಗಿ ನೀಡಿದೆ. ಅದನ್ನು ನಿರೋಧಿಸುವ ಭಾರತೀಯ ಜನತಾ ಪಕ್ಷದ ನಡೆ ಸಂವಿಧಾನ ವಿರೋಧಿಯಾಗಿದೆ ಎಂದರು.
ಇದನ್ನೂ ಓದಿ: ಕೋಗಿಲು ತೆರವು ಕಾರ್ಯಾಚರಣೆ: ಸಂತ್ರಸ್ತರಿಗೆ ತಾತ್ಕಾಲಿಕ ವಸತಿ ನೀಡಲು ಮಾನವ ಹಕ್ಕುಗಳ ಆಯೋಗದ ಸೂಚನೆ
ಧರ್ಮ ದ್ವೇಷವನ್ನು ಹುಟ್ಟಿಸುವ ಅವರ ನಡೆಯನ್ನು ಸಿಪಿಐ(ಎಂ) ಬಲವಾಗಿ ವಿರೋಧಿಸುತ್ತದೆ. ಹೊಟ್ಟೆಪಾಡಿಗಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ನಿರುಪಾಯರಾಗಿ ವಲಸೆ ಹೋಗುವ ಸ್ಥಿತಿಗೆ ಅಧಿಕಾರದಲ್ಲಿ ಇರುವವರ ಜನವಿರೋಧೀ ನೀತಿಗಳೇ ಕಾರಣವಾಗಿದೆ.
ಕಾರ್ಪೊರೇಟ್ ಉದ್ಯಮಿಗಳಿಗೆ ಲೂಟಿ ಹೊಡೆಯಲು ವಿಫುಲ ಅವಕಾಶ ಕೊಡುವಾಗ ಅಡ್ಡ ಬರದ ಸಂಗತಿಗಳನ್ನು ಬಡ ಅಸಹಾಯಕ ದುಡಿಯುವ ಜನರ ಮೇಲೆ ಹೇರುತ್ತಿರುವುದು ಭಾಜಪ ಯಾರ ಪರ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ ಎಂದು ಹೇಳಿದರು.
ಮರ್ಯಾದೆ ಗೇಡು ಹತ್ಯೆ ನಿಷೇಧ ಕಾಯ್ದೆಗೆ ಸ್ವಾಗತ
ಹುಬ್ಬಳ್ಳಿಯ ಮಾನ್ಯಾ ಪಾಟೀಲ್ ಹತ್ಯೆ ಯ ನಂತರ ಭುಗಿಲೆದ್ದ ಆಕ್ರೋಶ ಕ್ಕೆ ಪ್ರತಿಯಾಗಿ ಕರ್ನಾಟಕ ಸರಕಾರ ರಾಜ್ಯದಲ್ಲಿ ಮರ್ಯಾದೆಗೇಡು ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಮಾಡಲು ಮುಂದಾಗಿರುವುದನ್ನು ಸಿಪಿಐ(ಎಂ) ಸ್ವಾಗತಿಸಿದೆ.
ಯುವಜನರ ಆಯ್ಕೆ ಸ್ವಾತಂತ್ರ್ಯದ ಹಕ್ಕು ಮಹಿಳೆಯರ ಸ್ವತಂತ್ರವಾದ ಘನತೆಯ ಬದುಕಿನ ಹಕ್ಕಿನ ರಕ್ಷಣೆ ಸರಕಾರದ ಆದ್ಯ ಕರ್ತವ್ಯವಾಗಿದೆ. ಈ ಹಿಂದೆ ಬಿ.ಜೆ.ಪಿ. ಸರಕಾರವಿದ್ದಾಗ ತಂದ ಮತಾಂತರ ನಿಷೇಧ ಕಾಯ್ದೆಯನ್ನೆ ನಿಷೇಧವನ್ನು ಕಾಂಗ್ರೆಸ್ ಸರಕಾರ ಮಾಡಿದೆಯಾದರೂ ಸಮರ್ಪಕ ಜಾರಿಗೆ ಇನ್ನೂ ಬಂದಿಲ್ಲ.
ಹಾಗೇಯೇ ಮೌಢ್ಯಾಚರಣೆ ನಿಷೇಧ ಕಾಯ್ದೆಯೂ ಕಾಗದದ ಮೇಲಿನ ಅಕ್ಷರಗಳಾಗಿ ಉಳಿದಿದ್ದು ಅದರ ಜೊತೆ ಈ ಕಾಯ್ದೆ ಯೂ ಇನ್ನೊಂದಾಗದಂತೆ ಗಮನಿಸಿ ಸಮರ್ಪಕ ಜಾರಿಗೆ ಮುಂದಾಗಬೇಕು. ಆ ಮೂಲಕ ರಾಜ್ಯದಲ್ಲಿ ಜಾತಿ ಧರ್ಮ ಅಂತಸ್ತಿನ ಕಾರಣಕ್ಕಾಗಿ ಮರ್ಯಾದೆಗೇಡು ಹತ್ಯೆ ನಡೆಯದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ವಿಜಯಪುರದಲ್ಲಿ ಸರಕಾರ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಒತ್ತಾಯ; ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ಖಂಡನೆ
ವಿಜಯಪುರದಲ್ಲಿ ಸರಕಾರಿ ಮೆಡಿಕಲ್ ಕಾಲೇಜ್‌ಗಾಗಿ ಒತ್ತಾಯಿಸಿ ನಡೆಯುತ್ತಿರುವ ಹೋರಾಟಕ್ಕೆ 106 ದಿನಗಳು ಸಂದಿವೆ. ಸರಕಾರ ಜನಾಭಿಪ್ರಾಯಕ್ಕೆ ಮನ್ನಣೆ ನೀಡುವ ಬದಲು ಖಾಸಗಿಯವರಿಗೆ ಬಲ ತುಂಬುವ ತನ್ನ ಪ್ರಯತ್ನಗಳನ್ನು ಮುಂದುವರೆಸಿದೆ.
ಪ್ರತಿಭಟನಾಕಾರರನ್ನು ಎಳೆದು ಹಾಕಿ ಬಂಧಿಸಿದ ಘಟನೆಯನ್ನು ಸಿಪಿಐ(ಎಂ) ಖಂಡಿಸುತ್ತದೆ. ರಾಜ್ಯ ಸರಕಾರ ಜನರನ್ನು ಸುಲಿಗೆ ಮಾಡಲು ದಾರಿ ಮಾಡಿಕೊಡುವ ಖಾಸಗೀ ಸಹಭಾಗಿತ್ವ ವನ್ನು ಬಿಟ್ಟು ಸಂಪೂರ್ಣ ಸರಕಾರೀ ಸ್ವಾಮ್ಯದ ಸುಸಜ್ಜಿತ ಸಾರ್ವಜನಿಕ ಅಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜನ್ನು ತೆರೆಯಲು ಮುಂದಾಗಬೇಕೆಂದು ಸಿಪಿಐ(ಎಂ) ಒತ್ತಾಯಿಸಿದೆ.
ಇದನ್ನೂ ನೋಡಿ: ಮರ್ಯಾದೆಗೇಡು ಹತ್ಯೆ ನಿಷೇಧ ಕಾಯ್ದೆಗಾಗಿ ಪತ್ರ ಚಳವಳಿ Janashakthi Media
