ನವದೆಹಲಿ: ಉತ್ತರ ಭಾರತದಲ್ಲಿ ಪ್ರವಾಹ ಮತ್ತು ಭೂಕುಸಿತದ ಅಸಾಧಾರಣ ಪರಿಸ್ಥಿತಿ ಉಂಟಾಗಿರುವ ಬಗ್ಗ ಸಿಪಿಐ(ಎಂ) ಪೊಲಿಟ್‍ಬ್ಯುರೊ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಬೃಹತ್ ವಿಪತ್ತನ್ನು ನಿಭಾಯಿಸುವಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿಫಲವಾಗಿದೆ. ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು, ಪರಿಹಾರ ಮತ್ತು ಪುನರ್ವಸತಿ ಕ್ರಮಗಳನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳಬೇಕು ಎಂದು ಅದು ಆಗ್ರಹಿಸಿದೆ.
ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ರಾಜಸ್ಥಾನ ಮತ್ತು ದೆಹಲಿಗಳು ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ತತ್ತರಿಸಿವೆ. ಈ ಅಭೂತಪೂರ್ವ ವಿಪತ್ತಿನಲ್ಲಿ ಆಗಿರುವ ಜೀವಹಾನಿಗೆ ಸಿಪಿಐ(ಎಂ) ಸಂತಾಪ ಸೂಚಿಸಿದೆ. ರಾಷ್ಟ್ರೀಯ
ಸಿಪಿಐ(ಎಂ) ತಂಡಗಳು ಎಲ್ಲಾ ಪೀಡಿತ ರಾಜ್ಯಗಳಲ್ಲಿ ಸಕ್ರಿಯವಾಗಿದ್ದು, ಸಂತ್ರಸ್ತರಿಗೆ ಪರಿಹಾರ ಒದಗಿಸುತ್ತಿವೆ. ಸಿಪಿಐ(ಎಂ) ತನ್ನ ಎಲ್ಲಾ ಕಾರ್ಯಕರ್ತರಿಗೆ ಆಯಾ ರಾಜ್ಯಗಳಲ್ಲಿ ಪರಿಹಾರ ಕಾರ್ಯದಲ್ಲಿ ಸೇರಲು ಕರೆ ನೀಡಿದೆ. ಪೀಡಿತ ಜನರಿಗೆ ಪರಿಹಾರ ಒದಗಿಸಲು ನಿಧಿ ಸಂಗ್ರಹಿಸಲು ಪಕ್ಷವು ಕರೆ ನೀಡಿದೆ. ರಾಷ್ಟ್ರೀಯ
ಇದನ್ನೂ ಓದಿ: “ಜಾಗತಿಕ ಗಾಜಾ ರಕ್ಷಣೆಯ ನೌಕಾಪಡೆ”ಗೆ ಬೆಂಬಲ : ‘ಶೀತಲ ಸಮರ ಬೇಡ’
ಪಂಜಾಬ್ ಅತ್ಯಂತ ಹೆಚ್ಚು ಹಾನಿಗೊಳಗಾಗಿದ್ದು, ರಾಜ್ಯದ ಎಲ್ಲಾ 23 ಜಿಲ್ಲೆಗಳನ್ನು ಪ್ರವಾಹ ಪೀಡಿತವೆಂದು ಘೋಷಿಸಲಾಗಿದೆ. ವರದಿಗಳ ಪ್ರಕಾರ, ರಾಜ್ಯದ 1655 ಹಳ್ಳಿಗಳಲ್ಲಿ ಸುಮಾರು 3 ಲಕ್ಷ ಎಕರೆ ಬೆಳೆದ ಬೆಳೆಗಳು ಭಾಗಶಃ ಅಥವಾ ಸಂಪೂರ್ಣವಾಗಿ ಮುಳುಗಿವೆ ಮತ್ತು 4 ಲಕ್ಷಕ್ಕೂ ಹೆಚ್ಚು ಜನರನ್ನು ಇದು ನೇರವಾಗಿ ಬಾಧಿಸಿದೆ ಎಂದು ವರದಿಯಾಗಿದೆ. ಹಲವಾರು ಅಣೆಕಟ್ಟುಗಳಿಂದ ಬಿಡುಗಡೆಯಾದ ಹೆಚ್ಚುವರಿ ನೀರಿನೊಂದಿಗೆ ಭಾರೀ ಮಳೆಯಿಂದಾಗಿ ಬಿಯಾಸ್, ಸಟ್ಲೆಜ್, ರಾವಿ ಮತ್ತು ಘಗ್ಗರ್ ನದಿಗಳು ಉಕ್ಕಿ ಹರಿಯುತ್ತಿವೆ ಮತ್ತು ಇದರ ಪರಿಣಾಮವಾಗಿ ಉಂಟಾದ ಪ್ರವಾಹವು ಪಂಜಾಬ್ ಮತ್ತು ಹರಿಯಾಣದಲ್ಲಿ ಬೆಳೆದು ನಿಂತ ಪೈರುಗಳಿಗೆ ವ್ಯಾಪಕ ಹಾನಿಯನ್ನುಂಟುಮಾಡಿದೆ.
ಹರಿಯಾಣದಲ್ಲಿ, 12 ಜಿಲ್ಲೆಗಳ 1,402 ಹಳ್ಳಿಗಳಲ್ಲಿ ಹರಡಿರುವ ಸುಮಾರು 2.5 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ.
ಜಮ್ಮು-ಕಾಶ್ಮೀರದಲ್ಲೂ ಸಹ, ಧಾರಾಕಾರ ಮಳೆ ಮತ್ತು ಪ್ರವಾಹದಲ್ಲಿ ಸಾವಿರಾರು ಎಕರೆ ಭತ್ತ ಕೊಚ್ಚಿಹೋಗಿದೆ. 170 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ರಾಜಸ್ಥಾನ ಮತ್ತು ದೆಹಲಿಯ ಕೆಲವು ಭಾಗಗಳಲ್ಲಿಯೂ ವ್ಯಾಪಕ ಹಾನಿಯಾಗಿದೆ.
ಹಿಮಾಚಲ ಪ್ರದೇಶವು 320 ಕ್ಕೂ ಹೆಚ್ಚು ಜನರ ಸಾವು ಸೇರಿದಂತೆ ಭಾರಿ ನಷ್ಟವನ್ನು ಅನುಭವಿಸಿದೆ ಮತ್ತು ಅನೇಕರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಸಾರ್ವಜನಿಕ ಮೂಲಸೌಕರ್ಯ, ಭೂಮಿ ಮತ್ತು ಮನೆಗಳು, ಜಾನುವಾರುಗಳು, ಹಣ್ಣಿನ ಮರಗಳು, ಬೆಳೆದು ನಿಂತಿದ್ದ ಪೈರುಗಳು, ವಾಹನಗಳು ಮತ್ತು ಗೋಶಾಲೆಗಳು ಅಪಾರ ಪ್ರಮಾಣದಲ್ಲಿ ನಾಶವಾಗಿವೆ. ಶಿಮ್ಲಾ ಮತ್ತು ಕುಲುದಲ್ಲಿನ ಸೇಬು ತೋಟಗಳು ನಾಶವಾಗಿವೆ, ಅಧಿಕಾರಿಗಳು ಸುಮಾರು 25,000 ಎಕರೆ ತೋಟಗಾರಿಕಾ ಭೂಮಿಗೆ ಹಾನಿಯುಂಟಾಗಿದೆ ಎಂದು ಅಂದಾಜಿಸಿದ್ದಾರೆ. ಉತ್ತರಾಖಂಡವು ಕೂಡ ಹಠಾತ್ ಪ್ರವಾಹ ಮತ್ತು ಭೂಕುಸಿತಕ್ಕೆ ತುತ್ತಾಗಿದ್ದು, ಹಲವರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ನೋಡಿ: ಪರಿಷ್ಕೃತ ಜಿಎಸ್ ಟಿ : ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ? Janashakthi Media
