ಮಂಡ್ಯ : ಕೆಲವು ದಿನಗಳ ಹಿಂದೆಯಷ್ಟೇ ಪುನೀತ್ ಕೆರೆಹಳ್ಳಿ ಎಂಬುವವರಿಂ ಹತ್ಯೆಗೀಡಾದ ಎನ್ನಲಾದ ಗೋ ವ್ಯಾಪಾರಿ ಇದ್ರಿಶ್ ಪಾಷಾ ಅವರು ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಹಾಗೂ ಅವರ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಮಂಡ್ಯ ಜಿಲ್ಲಾ ಸಮಿತಿಯು ಒತ್ತಾಯಿಸಿದೆ.
ಗೋ ವ್ಯಾಪಾರಿ ಇದ್ರಿಶ್ ಪಾಷಾ ಹತ್ಯೆಗೆ ಬಗ್ಗೆ ಬೇಸರ ಹೊರಹಾಕಿರುವ ಪಕ್ಷವು ರೆಸ್ಸೆಸ್ ಸಂಘ ಪರಿವಾರದ ಹಿನ್ನೆಲೆಯ ಗೂಂಡಾ ಪಡೆ ಗೋರಕ್ಷಣೆ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ, ಬಡ ಮುಸಲ್ಮಾನರ ಮೇಲೆ ಹಲ್ಲೆ ನಡೆಸುವ, ಕೊಲ್ಲುವ ಕ್ರಿಮಿನಲ್ ಕೃತ್ಯದಲ್ಲಿ ನಿರತವಾಗಿದೆ. ರಾಜ್ಯದ ಬಿಜೆಪಿ ಸರ್ಕಾರ ಇಂತಹ ಗೂಂಡಾಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳದೆ ಸಮಾಜ ಘಾತುಕರಿಗೆ ಮುಕ್ತ ಸ್ವಾತಂತ್ರ್ಯ ನೀಡಿದೆ. ಇದರಿಂದ ಅಮಾಯಕ ಜನತೆ ಪ್ರಾಣ ಕಳೆದುಕೊಂಡು ಅವರ ಕುಟುಂಬಗಳು ಬೀದಿ ಪಾಲಾಗುತ್ತಿವೆ. ಇಂತಹ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಂಡು ಈ ರೀತಿಯ ದುಷ್ಕೃತ್ಯಗಳು ಮರುಕಳಿಸದಂತೆ ಎಚ್ಚರ ವಹಿಸಬೇಕೆಂದು ಎಂದು ತಿಳಿಸಿದೆ.
ಈ ಕುರಿತು ಮಂಡ್ಯ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್. ಕೃಷ್ಣೇಗೌಡ ಪತ್ರಿಕಾ ಹೇಳಿಕೆ ನೀಡಿದ್ದು, ಕನಕಪುರ ತಾಲೂಕಿನ ಸಾತನೂರು ಬಳಿ ಪುನೀತ್ ಕೆರೆಹಳ್ಳಿ ನೇತೃತ್ವದ ಗೋರಕ್ಷಣೆಯ ಮುಸುಕಿನ ಕೊಲೆಗಡುಕ ಗೂಂಡಾ ಪಡೆ ಇದ್ರಿಶ್ ಪಾಷಾ ಎಂಬ ಬಡ ಕಾರ್ಮಿಕನನ್ನು ಬಲವಂತವಾಗಿ ಕಾಂಪೌಂಡ್ ಒಳಗೆ ಎಳೆದೊಯ್ದು ವಿದ್ಯುತ್ ಶಾಕ್ ಮೂಲಕ ಚಿತ್ರಹಿಂಸೆ ನೀಡಿ ಕಗ್ಗೊಲೆಗೈದಿದೆ. ಈ ಹಿಂದುತ್ವವಾದಿ ಮತಾಂಧರ ಕೊಲೆಗಡುಕತನವನ್ನು ಸಿಪಿಐಎಂ ಬಲವಾಗಿ ಖಂಡಿಸುತ್ತದೆ. ಕೊಲೆಗಡುಕರನ್ನು ಈಗಾಗಲೇ ಬಂಧಿಸಲಾಗಿದೆ. ಆದರೆ ಇವರಿಗೆ ಬೆಂಬಲವಾಗಿರುವ ವ್ಯಕ್ತಿಗಳು ಮತ್ತು ಶಕ್ತಿಗಳನ್ನು ಬಂಧಿಸಿ ಕಾನೂನಿನ ಕ್ರಮಕ್ಕೆ ಒಳಪಡಿಸಬೇಕೆಂದು ರಾಜ್ಯ ಸರಕಾರ ಮತ್ತು ಉನ್ನತ ಪೋಲೀಸ್ ಅಧಿಕಾರಿಗಳನ್ನು ಒತ್ತಾಯಿಸಿದೆ.
ರಾಜ್ಯದಲ್ಲಿ ಮುಸ್ಲಿಂ ಸಮುದಾಯ ರಂಜಾನ್ ಹಬ್ಬದಲ್ಲಿ ತೊಡಗಿರುವಾಗ ಅವರಿಗೆ ನೆರವಾಗುವಂತಹ ಉಡುಗೊರೆ ನೀಡುವ ಬದಲು, ರಾಜ್ಯ ಸರಕಾರ ಒಂದೆಡೆ ಬಡ ಮುಸ್ಲಿಂ ಸಮುದಾಯಕ್ಕೆ ನೀಡಲಾಗಿದ್ದ ಶೇ. 4ರಷ್ಟು ಮೀಸಲಾತಿಯನ್ನು ಕಿತ್ತುಕೊಂಡು ತಾರತಮ್ಯ ಮೆರೆದಿದೆ. ಇನ್ನೊಂದೆಡೆ ಹಿಂದೂ ಕೊಲೆಗಡುಕ ಮತಾಂದರು ಕಾನೂನನ್ನು ಕೈಗೆತ್ತಿಕೊಂಡು ಅಮಾಯಕ ಬಡ ಮುಸ್ಲಿಂ ವ್ಯಕ್ತಿಯ ಕಗ್ಗೊಲೆಗೆ ಮುಂದಾಗಿದ್ದಾರೆ. ಈಚೆಗಿನ ಈ ಎರಡು ಘಟನೆಗಳು ಜಗತ್ತಿನ ಮುಂದೆ ನಾಗರೀಕ ಸಮಾಜ ತೀವ್ರ ನಾಚಿಕೆಯಿಂದ ತಲೆ ತಗ್ಗಿಸುವಂಹ ಹೇಯ ದುಷ್ಕೃತ್ಯಗಳಾಗಿವೆ. ಈ ಮತಾಂಧ ಕೊಲೆಗಳು ಹಾಗೂ ರಾಜಕಾರಣವನ್ನು ತಕ್ಷಣವೇ ನಿಲ್ಲಿಸಬೇಕು, ಇದಲ್ಲದೆ ಮುಸ್ಲಿಂ ಅಲ್ಪ ಸಂಖ್ಯಾತರ ಮೇಲಿನ ಇಂತಹ ಕೊಲೆಗಡುಕ ದಾಳಿಗಳಿಗೆ ಬಿಜೆಪಿ ಹಾಗೂ ಆರೆಸ್ಸೆಸ್ಗಳ ಮುಸ್ಲಿಂ ದ್ವೇಷದ ರಾಜಕಾರಣವೇ ಪ್ರೇರಣೆಯಾಗಿದೆ. ರಾಜ್ಯ ಸರಕಾರ ತನ್ನ ಅಧಿಕಾರವನ್ನು ಬಳಸಿ ಭಾರತದ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ವಿರೋಧಿಯಾಗಿ, ದಲಿತರು ಹಾಗೂ ರಾಜ್ಯದ ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ಆಹಾರದ ಹಕ್ಕು ಹಾಗೂ ರಾಜ್ಯದ ಹೈನುಗಾರರೂ ಸೇರಿದಂತೆ ಈ ಎಲ್ಲರ ಉದ್ಯೋಗದ ಹಕ್ಕಿನ ಮೇಲೆ ದಾಳಿ ಮಾಡುವ ಮತ್ತು ಹೈನೋದ್ಯಮ, ಚರ್ಮೋದ್ಯಮ ಹಾಗೂ ಮಾಂಸೋದ್ಯಮಗಳನ್ನು ಕಾರ್ಪೋರೇಟ್ ಕಂಪನಿಗಳ ಲೂಟಿಗೆ ತೆರೆಯುವ ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ – 2020ನ್ನು ಅಂಗೀಕರಿಸಿ ಜಾರಿಯಲ್ಲಿಟ್ಟಿರುವುದು ಮತ್ತು ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆಯ ಕಾಯ್ದೆಗೆ ಕ್ರಮವಹಿಸುತ್ತಿರುವುದು ಕೂಡಾ ಇಂತಹ ಬಡವರ ಮೇಲಿನ ದಾಳಿಗಳಿಗೆ ಕುಮ್ಮಕ್ಕು ನೀಡುತ್ತದೆ ಎಂದು ಆರೋಪಿಸಿದೆ.
ಇದನ್ನೂ ಓದಿ : ಜಾನುವಾರು ವ್ಯಾಪಾರಿ ಹತ್ಯೆ ಪ್ರಕರಣ : ಪುನೀತ್ ಕೆರೆಹಳ್ಳಿ ಸೇರಿ ಐವರ ಬಂಧನ!
ಜಿಲ್ಲಾಡಳಿತದ ದಿವ್ಯ ನಿರ್ಲಕ್ಷ್ಯ : ಮಂಡ್ಯ ಜಿಲ್ಲೆಯ ನಾಗರೀಕನೊಬ್ಬ ತನ್ನದಲ್ಲದ ತಪ್ಪಿಗೆ ದಾರುಣವಾಗಿ ಕೊಲ್ಲಲ್ಪಟ್ಟು ಆತನ ಹೆಂಡತಿ ಮತ್ತು ಸಣ್ಣ ಮಕ್ಕಳು ಬೀದಿ ಪಾಲಾಗಿದ್ದರೂ ಜಿಲ್ಲಾಡಳಿತದ ಯಾವೊಬ್ಬ ಅಧಿಕಾರಿಯೂ ಇದುವರೆಗೂ ಸಂತ್ರಸ್ತರನ್ನು ಬೇಟಿಯಾಗಿ ಸಾಂತ್ವನ ಹೇಳುವ ಮತ್ತು ಬೀದಿಗೆ ಬಿದ್ದ ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಾಡುವ ಭರವಸೆ ನೀಡುವ ಮಾನವೀಯತೆ ಮೆರೆದಿಲ್ಲ. ಅಧಿಕಾರಿಗಳ ಈ ನಡೆಯು ಮುಸ್ಲಿಂ ಧಾರ್ಮಿಕ ಅಲ್ಪಸಂಖ್ಯಾತರ ಬಗೆಗಿನ ರಾಜ್ಯ ಸರ್ಕಾರದ ಧೋರಣೆಯ ಪ್ರತಿಬಿಂಬವಾಗಿದೆ. ಇದಕ್ಕೆ ನಮ್ಮ ವಿರೋಧವಿದೆ ತಕ್ಷಣ ಜಿಲ್ಲಾಡಳಿತ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯ ಪ್ರವೃತ್ತರಾಗಿ ನೊಂದವರ ಜೊತೆ ನಿಲ್ಲಬೇಕೆಂದು ಎಂದು ತಿಳಿಸಿದೆ.
ಲೂಟಿಕೋರ ಕಾರ್ಪೋರೇಟ್ ಪರ ನೀತಿಗಳೇ ಮುಸ್ಲಿಂ ಹಾಗೂ ನಾಗರೀಕರ ಮೇಲಿನ ದಾಳಿಗಳಿಗೆ ಮೂಲ ಕಾರಣ : ದೇಶ ಹಾಗೂ ರಾಜ್ಯದಲ್ಲಿ ಜನತೆಯ ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲಿನ ದಾಳಿಗಳಿಗೆ ಹಾಗೂ ಮುಸ್ಲಿಂ ದ್ವೇಷಕ್ಕೆ ಲೂಟಿಕೋರ ಕಾರ್ಪೋರೇಟ್ ಸಂಸ್ಥೆಗಳ ಪರ ನೀತಿಗಳೇ ಮುಖ್ಯ ಕಾರಣ ಎಂದು ಹೇಳಿದೆ.
ಇದರ ಭಾಗವಾಗಿಯೇ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯದ ಡಬಲ್ ಎಂಜಿನ್ ಸರಕಾರಗಳು ಒಂದೆಡೆ ಲೂಟಿಕೋರ ಆರ್ಥಿಕ ನೀತಿಗಳಿಗೆ ಕ್ರಮವಹಿಸುತ್ತಿರುವಾಗಲೇ, ಇನ್ನೊಂದೆಡೆ, ಇಂತಹ ಲೂಟಿಕೋರತನದ ಕಡೆ ಜನತೆ ಗಮನಹರಿಸದಂತೆ, ಅವರ ಗಮನವನ್ನು ಬೇರೆಡೆ ಸೆಳೆಯಲು ದೇಶದ ಹಾಗೂ ರಾಜ್ಯದ ಮತಾಂಧ ಮತ್ತು ಜಾತಿವಾದಿ ಶಕ್ತಿಗಳ ಬೆಳವಣಿಗೆಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿವೆ.
ಇಂತಹ ಲೂಟಿಕೋರ ಮತಾಂಧ, ಜಾತಿವಾದಿ ರಾಜಕಾರಣಕ್ಕೆ, ಬಿಜೆಪಿ, ಆರೆಸ್ಸೆಸ್ ಮುಂತಾದ ಹಿಂದುತ್ವವಾದಿ ಹಾಗೂ ಮುಸ್ಲಿಂ ಮತಾಂಧ ಗುಂಡಾ ಸಂಘಟನೆಗಳು ಲೂಟಿಕೋರ ಕಾರ್ಪೋರೇಟ್ ಸಂಸ್ಥೆಗಳ ಜೊತೆ ಕೈ ಜೋಡಿಸುತ್ತಾ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತವೆ. ಇವು ಜನತೆಯನ್ನು ಮತೀಯ ಹಾಗೂ ಜಾತೀಯ ದ್ವೇಷದ ಆಧಾರದಲ್ಲಿ ವಿಭಜಿಸಿ ಲೂಟಿಕೋರತನದ ವಿರುದ್ಧ ಜನತೆ ಒಗ್ಗೂಡದಂತೆ ತಡೆಯುವ, ಚಳುವಳಿಕಾರರನ್ನು ಪ್ರಗತಿಪರರನ್ನು ಬೆದರಿಸುವ ಮತ್ತು ದೇಶದ್ರೋಹಿಗಳೆಂದು ಹೀಗಳೆಯುವ ಮತ್ತು ಕೊಲೆಯಂತಹ ಹೀನ ಕೃತ್ಯಕ್ಕೂ ಕೈ ಹಾಕಿವೆ. ಹೀಗೆ ಲೂಟಿಕೋರರ ಪರವಾಗಿ ವಿಭಜಿಸಿ ಆಳಲು ಮತ್ತು ಕಾರ್ಪೋರೇಟ್ ಸಂಸ್ಥೆಗಳ ಲೂಟಿಕೋರತನವನ್ನು ಮರೆ ಮಾಚಲು ಇವು ನೆರವಾಗುತ್ತಿವೆ. ಆರೆಸ್ಸೆಸ್ ಮತ್ತಿತರೆ ಮತಾಂಧ ಗೂಂಡಾಪಡೆ ಗೋರಕ್ಷಣೆ, ನೈತಿಕ ಪೋಲೀಸ್ ಗಿರಿ, ಧರ್ಮ ರಕ್ಷಣೆಯ ಹೆಸರಿನಲ್ಲಿ, ಕಾನೂನನ್ನು ಕೈಗೆತ್ತಿಕೊಳ್ಳುವ ಮೂಲಕ, ಪ್ರಗತಿಪರರು, ದಲಿತರು ಹಾಗೂ ಮುಸಲ್ಮಾನರನ್ನು ಕೊಲ್ಲುವ ಕ್ರಿಮಿನಲ್ ದುಷ್ಕೃತ್ಯದಲ್ಲಿ ನಿರತವಾಗಿವೆ. ರಾಜ್ಯದ ಬಿಜೆಪಿ ಸರ್ಕಾರ ಇಂತಹ ಗೂಂಡಾಗಳನ್ನು ನಿಗ್ರಹಿಸಿ ದುಷ್ಕೃತ್ಯವನ್ನು ತಡೆಯುವ ಬದಲು, ಅಂತಹ ಕೆಲಸಗಳಿಗೆ ಕುಮ್ಮಕ್ಕು ದೊರೆಯುವಂತೆ ತಾರತಮ್ಯಕ್ಕೆ ಕ್ರಮವಹಿಸುವ ಮೂಲಕ ಮುಕ್ತ ಸ್ವಾತಂತ್ರ್ಯ ನೀಡಿದೆ. ಇದರಿಂದ ಅಮಾಯಕ ಜನತೆ ಪ್ರಾಣ ಕಳೆದುಕೊಂಡು ಅವರ ಕುಟುಂಬಗಳು ಬೀದಿ ಪಾಲಾಗುತ್ತಿವೆ. ನರಗುಂದ, ದಕ್ಷಿಣ ಕನ್ನಡ ಮುಂತಾದೆಡೆ ಕೊಲ್ಲಲ್ಪಟ್ಡ ಮುಸ್ಲಿಂ ಯುವಜನರ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ಒದಗಿಸಲಿಲ್ಲ ಮಾತ್ರವಲ್ಲಾ, ಕೊಲೆಗಡುಕರ ಮೇಲೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಿಲ್ಲ. ಇಂತಹ ಎಲ್ಲ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಂದಿದೆ.
ಇದನ್ನೂ ಓದಿ : ಜಾನುವಾರು ವ್ಯಾಪಾರಿ ಹತ್ಯೆ ಪ್ರಕರಣ : ಪುನೀತ್ ಕೆರೆಹಳ್ಳಿ ಬಂಧಿಸಲು ನಾಲ್ಕು ತಂಡಗಳ ರಚನೆ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಅದರಲ್ಲೂ ಗೋ ಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತಂದ ನಂತರ ದನದ ವ್ಯಾಪಾರಿಗಳ ಮೇಲೆ ದಾಳಿಗಳು ವಿಪರೀತ ಹೆಚ್ಚಾಗಿವೆ. ಗೋರಕ್ಷಕ ಮುಸುಕಿನ ಮತಾಂಧ ಗೂಂಡಾಗಳು ದಾಳಿ ಮಾಡಿ ಹಲ್ಲೆ ನಡೆಸುವಾಗ ರಾಜ್ಯ ಸರ್ಕಾರದ ಪೊಲೀಸರು ಒಂದೋ ಮೂಕ ಪ್ರೇಕ್ಷಕರಾಗುವುದು ಇಲ್ಲವೇ ದಾಳಿಕೋರರ ಜೊತೆ ಕೈಜೋಡಿಸುವುದು ನಡೆದಿದೆ. ಇದರಿಂದಾಗಿ ದಾಳಿ, ಹಲ್ಲೆ ನಡೆಸುವವರಿಗೆ ಹೆಚ್ಚಿನ ಬಲ ಬಂದಂತಾಗಿದೆ. ಇಂತಹ ವ್ಯಕ್ತಿಗಳು ಮತ್ತು ಶಕ್ತಿಗಳ ಮೇಲೆ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಮಂಡ್ಯ ಜಿಲ್ಲಾ ಸಮಿತಿ ಒತ್ತಾಯಿಸಿದೆ.