ರಾಜ್ಯದ 28 ಕ್ಷೇತ್ರಗಳಲ್ಲಿ ಸಿ.ಪಿ.ಐ. ಕಾಂಗ್ರೆಸ್‌ಗೆ ಬೆಂಬಲ

ಬೆಂಗಳೂರು: ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಪ್ರಜಾತಂತ್ರದ ಮೌಲ್ಯಗಳನ್ನು ಗಾಳಿಗೆ ತೂರಿ ಸರ್ವಾಧಿಕಾರಿ ಆಡಳಿತ ನಡೆಸಲು ಮುಂದಾಗಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲೇಬೇಕಾದ ರಾಜಕೀಯ ಆನಿವಾರ್ಯತೆ ಎದುರಾಗಿರುವುದರಿಂದ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕೆಂದು ಮನವಿ ಮಾಡಿರುವ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಕರ್ನಾಟಕ ರಾಜ್ಯ ಮಂಡಳಿ,ಕರ್ನಾಟಕ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ತಿಳಿಸಿದ್ದಾರೆ‌.

ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿರುವ ಸಿಪಿಐ, ಕಳೆದ ಒಂದು ದಶಕದ ಎರಡು ಬಾರಿಯ ಆಡಳಿತಾವಧಿಯಲ್ಲಿ ದೇಶದ ಜನತೆಯ ಪರವಾದ ಆಡಳಿತ ನಡೆಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ನರೇಂದ್ರ ಮೋದಿ ಸರ್ಕಾರ ರೈತ ವಿರೋಧಿ ಧೋರಣೆಯನ್ನು ಅನುಸರಿಸಿ ಅವರ ಮೇಲೆ ವ್ಯಾಪಕವಾದ ದೌರ್ಜನ್ಯ ಎಸಗಿದೆ. ರೈತರ ಆದಾಯ ದ್ವಿಗುಣ ಮಾಡುವ, ಬೆಲೆ ಏರಿಕೆ ತಡೆಗಟ್ಟುವ, ಭ್ರಷ್ಟಾಚಾರ ನಿಯಂತ್ರಿಸುವ, ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವ ಭರವಸೆಗಳು ಕೇವಲ ಜನರನ್ನು ವಂಚಿಸಿ ಅಧಿಕಾರ ಹಿಡಿಯಲು ಹೇಳಿದ ಮಹಾ ಸುಳ್ಳು ಎಂಬುದು ಈಗ ಸಾಬೀತಾಗಿದೆ ಎಂದು ಕಿಡಿಕಾರಿದೆ.

ಇದನ್ನೂ ಓದಿ: ದೇವೇಗೌಡರನ್ನು ಕಾಂಗ್ರೆಸ್ ಪ್ರಧಾನಿ ಮಾಡಿದೆ, ಆದ್ರೂ ಕಣ್ಣೀರು ಯಾಕೆ ಹಾಕುತ್ತಿದ್ದಾರೋ ಗೊತ್ತಿಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್

ಪ್ರಧಾನಿ ಸ್ಥಾನದ ಘನತೆಗೆ ಮೋದಿ ಕಪ್ಪುಚುಕ್ಕೆ ಎಂದಿರುವ ಸಾತಿ ಸುಂದರೇಶ್,ಪ್ರಸಕ್ತ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಹತಾಶಗೊಂಡಿರುವ ನರೇಂದ್ರ ಮೋದಿ ತಮ್ಮ ಚುನಾವಣಾ ಪ್ರಚಾರ ಸಭೆಗಳಲ್ಲಿ ಮತೀಯ ದ್ವೇಷ ಹರಡುವ ಭಾಷಣಗಳನ್ನು ಮಾಡುವ ಮೂಲಕ ಪ್ರಧಾನಿ ಸ್ಥಾನದ ಘನತೆ ಗೌರವಗಳನ್ನು ಮಣ್ಣು ಪಾಲು ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಮ್ಮ ತಾಳಿಯನ್ನು, ಅಸ್ತಿಯನ್ನು ಕಸಿದುಕೊಂಡು ಮತ್ತೊಬ್ಬರಿಗೆ ಮರು ಹಂಚಿಕೆ ಮಾಡುತ್ತಾರೆ ಎಂದು ಒಂದು ಸಮುದಾಯದ ಜನತೆಯನ್ನು ಗುರಿಯಾಗಿಸಿ ಮಾತನಾಡಿರುವುದು ದೇಶದ 140 ಕೋಟಿ ಜನತೆಯ ಪ್ರಧಾನಿಯಾಗಿ ನೀಡಿರುವ ಹೇಳಿಕೆ ಅಲ್ಲ ಎಂಬುದು ಸಾಬೀತಾಗುತ್ತದೆ ಎಂದಿದ್ದಾರೆ.

ಸಂವಿಧಾನದ ಧರ್ಮ ನಿರಪೇಕ್ಷತಾ ತತ್ವಾದರ್ಶಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವ ಪ್ರಧಾನಿ ನರೇಂದ್ರ ಮೋದಿ ಒಂದು ಧರ್ಮವನ್ನು ಮತ್ತೊಂದು ಧರ್ಮದ ಜನ ಸಮುದಾಯದ ಮೇಲೆ ಎತ್ತಿ ಕಟ್ಟಿ ಧರ್ಮದ ಆಧಾರದಲ್ಲಿ ವೋಟುಗಳನ್ನು ಕಸಿಯುವ ಸಂವಿಧಾನ ವಿರೋಧಿ ಹೇಳಿಕೆಯು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯು ಆಗಿದೆ. ಅಲ್ಪಸಂಖ್ಯಾತ ಮತ್ತು ದಲಿತ ಸಮುದಾಯವನ್ನು ಗುರಿಯಾಗಿಸಿ ಚುನಾವಣಾ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಸಿಪಿಐ ಬಲವಾಗಿ ಖಂಡಿಸುವುದಾಗಿ ಹೇಳಿದೆ.

ಧರ್ಮದ ಆಧಾರದಲ್ಲಿ ಜನರನ್ನು ವಿಂಗಡಿಸಿ ಪರಸ್ಪರ ದ್ವೇಷ ಹರಡಲು ನಿರಂತರ ಪ್ರಯತ್ನಿಸುತ್ತಿರುವ ಬಿಜೆಪಿಯನ್ನು ಈ ಚುನಾವಣೆಯಲ್ಲಿ ಸೋಲಿಸುವ ಮೂಲಕ ದೇಶದ ಸಂವಿಧಾನ ಮತ್ತು ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸಲು ಪ್ರಜಾಪ್ರಭುತ್ವದ ಮಾಲೀಕರಾಗಿರುವ ಈ ದೇಶದ ಜನರೇ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕೆಂದು ಸಿಪಿಐ ಕರೆ ನೀಡಿದೆ.

ಇದನ್ನೂ ನೋಡಿ: ‘ಮೋದಿ ಗ್ಯಾರಂಟಿಗಳ’ ಮರೆಮೋಸದ ವಿವರಗಳು ಗೊತ್ತೇ? Janashakthi Media

Donate Janashakthi Media

Leave a Reply

Your email address will not be published. Required fields are marked *