ಬೆಂಗಳೂರು : ಸಮಾಜದ ವಿವಿಧ ರಂಗಗಳಲ್ಲಿ ತಮ್ಮದೇ ಆದ ವಿಶಿಷ್ಟ ಸೇವೆ ಮತ್ತು ಕೊಡುಗೆಗಳನ್ನು ನೀಡಿರುವ ಸಾಧಕರಿಗೆ ಮಾಧ್ಯಮ ಸಂವಹನ ಕ್ಷೇತ್ರದ ಸಂಸ್ಥೆಯಾದ ‘ಭಾರತದ ಸಾರ್ವಜನಿಕ ಸಂಬಂಧಗಳ ಮಂಡಳಿ’- ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾ (ಪಿ.ಸಿ.ಆರ್.ಐ.) ಕೊಡುವ ಪ್ರತಿಷ್ಟಿತ ‘ಚಾಣಕ್ಯ ಪ್ರಶಸ್ತಿ’ಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ವೈದ್ಯ ಡಾ. ಎ.ಅನಿಲ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಸಂಸ್ಥೆಯು ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿ ವರ್ಷ ಪ್ರಶಸ್ತಿಗಳನ್ನು ನೀಡುತ್ತಿದ್ದು ಈ ವರ್ಷದಲ್ಲಿ ವಿಶೇಷವಾಗಿ ‘ಕೋವಿಡ್-19 ಪಬ್ಲಿಕ್ ಸರ್ವೀಸ್ ಹೀರೋ’ (‘ಸಾರ್ವಜನಿಕ ಸೇವಾ ನಾಯಕ’) ಎನ್ನುವ ಪ್ರಶಸ್ತಿಯನ್ನು ಪ್ರಜಾ ಯುವ ವೈದ್ಯ ಡಾ.ಅನಿಲ್ ಕುಮಾರ್ ಅವುಲಪ್ಪ ಅವರಿಗೆ ನೀಡಲು ಆಯ್ಕೆ ಮಂಡಳಿ ನಿರ್ಧರಿಸಿದೆ.
ಇದನ್ನು ಓದಿ: ಆದಿವಾಸಿ ಸಮುದಾಯದ ಜನತೆಗೆ ಕೊರೊನಾ ಬಗ್ಗೆ ಜಾಗೃತಿ ಮತ್ತು ತಪಾಸಣೆ
ಕೋವಿಡ್ ಸೋಂಕಿನ ಸಂಕಷ್ಟದ ಕಾಲದಲ್ಲಿ ಡಾ.ಅನಿಲ್ ಕುಮಾರ್ ಅವರು ಬಾಗೇಪಲ್ಲಿ ತಾಲೂಕಿನಲ್ಲಿ ಮುತುವರ್ಜಿ ವಹಿಸಿ ವಿಶೇಷ ಚಿಕಿತ್ಸಾ ವಿಧಾನದ ಮೂಲಕ ಜನ ಜಾಗೃತಿ ಮತ್ತು ಸುಮಾರು 160 ಹಳ್ಳಿಗಳಲ್ಲಿ ಸೋಂಕು ತಡೆ ಮತ್ತು ನಿರ್ಣಾಯಕ ಸ್ಥಿತಿಯಲ್ಲಿ ಚಿಕಿತ್ಸೆಯನ್ನು ನೀಡಿರುವುದನ್ನು ಸಂಸ್ಥೆಯು ಶ್ಲಾಘಿಸಿ ಸಾರ್ವಜನಿಕ ಆರೋಗ್ಯ ಸಂರಕ್ಷಣೆಯ ವಿಶಿಷ್ಠ ಸೇವೆಯನ್ನು ಗುರುತಿಸಿದೆ. ‘ಆರೋಗ್ಯ ವ್ಯವಸ್ಥೆಯತ್ತ ಜನ ಬರುವುದಕ್ಕೆ ಬದಲಾಗಿ ಜನರತ್ತ ಆರೋಗ್ಯ ವ್ಯವಸ್ಥೆ ತೆರಳಬೇಕು’ ಎನ್ನುವ ಮಹತ್ವದ ತಾತ್ವಿಕ ನಿಲುವನ್ನು ಆಧಾರವಾಗಿರಿಸಿಕೊಂಡು ಗ್ರಾಮಗಳಲ್ಲಿ ಸ್ವಯಂಸೇವಕರ ತಂಡಗಳನ್ನು ಕಟ್ಟಿ ಆ ಮೂಲಕ ಗುರುತರ ಸೇವೆ ಸಲ್ಲಿಸಿದ್ದಾರೆ. ಈ ಮಹತ್ವದ ಕಾರ್ಯಕ್ಕೆ ಅನೇಕ ಸಾರ್ವಜನಿಕ ಸೇವಾ ಸಂಸ್ಥೆಗಳು ಮತ್ತು ಜನಪರ ಸಂಘಟನೆಗಳು ಬೆನ್ನೆಲುಬಾಗಿ ನಿಂತಿವೆ. ಈ ಅನುಭವವನ್ನು ರಾಜ್ಯದ ಇತರೆಡೆಯೂ ವಿಸ್ತರಿಸಿದ ಅವರು ವಿಶೇಷವಾಗಿ ಪಶ್ಚಿಮಘಟ್ಟ ಘಟ್ಟದಲ್ಲಿರುವ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮುಂತಾದ ಜಿಲ್ಲೆಗಳ ಆದಿವಾಸಿ ಸಮುದಾಯಗಳ ನಡುವೆಯೂ ತಮ್ಮೀ ವೈದ್ಯಕೀಯ ಸೇವೆ ನೀಡಿದ್ದಾರೆ.
12 ನೇ ಸರಣಿಯ ಚಾಣಕ್ಯ ಪ್ರಶಸ್ತಿ -2021 ನ್ನು ಇದೇ 2021 ಸೆಪ್ಟೆಂಬರ್ 17 ಮತ್ತು 18ರಂದು ಗೋವಾದ ಪಣಜಿಯಲ್ಲಿ ನಡೆಯುವ ’15 ನೆಯ ಜಾಗತಿಕ ಸಂವಹನಾ ಸಮಾವೇಶ’ ದ ಸಂದರ್ಭದಲ್ಲಿ ಸೆಪ್ಟಂಬರ್ 17, 2021ರಂದು ಸಂಜೆ 4.30ಕ್ಕೆ ನೀಡಲಾಗುವುದು. ಈ ಪ್ರಶಸ್ತಿಯನ್ನು ಗೋವಾ ರಾಜ್ಯದ ಮುಖ್ಯಮಂತ್ರಿಗಳಾದ ಡಾ. ಪ್ರಮೋದ್ ಸಾವಂತ್ ರವರು ಪ್ರಧಾನ ಮಾಡಲಿದ್ದಾರೆ ಎಂದು ಸಂಸ್ಥೆಯು ತಿಳಿಸಿದೆ. ಎ.ಬಿ.ಸಿ.ಐ ಸಂಸ್ಥೆಯ ಅದ್ಯಕ್ಷರಾದ ಶ್ರೀ ಯೋಗೀಶ್ ಜೋಶಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಪಿ.ಸಿ.ಅರ್.ಐ. ಸಂಸ್ಥೆಯ ಗೌರವ ಅದ್ಯಕ್ಷರು ಹಾಗೂ ಮಾರ್ಗದರ್ಶಕರಾದ ಶ್ರೀ ಎಂ.ಬಿ.ಜಯರಾಮ್ ಅವರು ಸಮಾರಂಭದ ಅದ್ಯಕ್ಷತೆಯನ್ಮು ವಹಿಸಲಿದ್ದಾರೆ.
ಈಗಾಗಲೇ ಡಾ. ಎ.ಅನಿಲ್ ಕುಮಾರ್ ರವರು ಸಲ್ಲಿಸಿರುವ ಸೇವೆಯನ್ನು ಗುರುತಿಸಿ ರೋಟರಿ ಯಂತಹ ಹಲವಾರು ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವದ ಬೆಂಬಲ ಸೂಚಿಸಿವೆ. ಈಗ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಪಡೆದಿರುವುದಕ್ಕೆ ಸಂಘ-ಸಂಸ್ಥೆಗಳು, ಹಿತೈಷಿಗಳು ಅವರನ್ನು ಅಭಿನಂದಿಸಿದ್ದಾರೆ. ಅವರು ಇನ್ನೂ ಹೆಚ್ಚಿನ ರೀತಿಯಲ್ಲಿ ಸಾರ್ವಜನಿಕ ರಂಗದಲ್ಲಿ ಬಹುಮುಖಿ ಕೊಡುಗೆ ನೀಡಲಿ ಎಂದು ಆಶಿಸಿದ್ದಾರೆ.