ಕೋವಿಡ್‌ ಪರಿಸ್ಥಿತಿ: ಮಧ್ಯಪ್ರದೇಶ ಮಾಜಿ ಸಿಎಂ ಕಮಲ್ ನಾಥ್ ಭೇಟಿ ಮಾಡಿದ ಡಿಕೆಶಿ

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಅವರೊಂದಿಗೆ, ಉಭಯ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳು ಕೋವಿಡ್ ಪರಿಸ್ಥಿತಿಯ ಸತ್ಯಾಂಶ ಮುಚ್ಚಿಟ್ಟು, ಸುಳ್ಳು ಮಾಹಿತಿ ಮೂಲಕ ಜನರನ್ನು ದಾರಿತಪ್ಪಿಸುತ್ತಿರುವ ಬಗ್ಗೆ ಸಮಾಲೋಚನೆ ನಡೆಸಿದರು.

ಕೋವಿಡ್ ಸಾವಿನ ಪ್ರಮಾಣ ಕುರಿತು ಸರ್ಕಾರಗಳು ಸುಳ್ಳು ಲೆಕ್ಕ ನೀಡುತ್ತಿವೆ. ಸರ್ಕಾರ ಹೇಳುತ್ತಿರುವ ಅಂಕಿ-ಅಂಶಕ್ಕೂ ಚಿತಾಗಾರದಲ್ಲಿ ಅಂತ್ಯಸಂಸ್ಕಾರಗೊಂಡ ಶವಗಳ ಸಂಖ್ಯೆಗೂ ಅಜಗಜಾಂತರವಿದೆ. ಕೋವಿಡ್ ನಿಂದ ಸತ್ತವರ ಮಾಹಿತಿಯನ್ನು ಸ್ಮಶಾನ, ಚಿತಾಗಾರಗಳಿಂದ ಪಡೆಯುವಂತಹ ದುಸ್ಥಿತಿ ನಿರ್ಮಾಣವಾಗಿದೆ ಎಂಬ ಅಂಶವನ್ನು ಶಿವಕುಮಾರ್ ಅವರು ಗಮನಕ್ಕೆ ತಂದರು.

ಇದನ್ನು ಓದಿ: ಬಿಜೆಪಿಯವರಿಗೆ ಜನರಿಗಿಂತ ಅಧಿಕಾರವೇ ಮುಖ್ಯ: ವಿ.ಎಸ್‌.ಉಗ್ರಪ್ಪ

ಡಿ.ಕೆ. ಶಿವಕುಮಾರ್ ಅವರು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಕರ್ನಾಟಕ, ಮಧ್ಯಪ್ರದೇಶ ರಾಜ್ಯಗಳಲ್ಲಿನ ಕೋವಿಡ್ ದುಸ್ಥಿತಿ ಕುರಿತು ಚರ್ಚೆ ನಡೆಸಿದರು.

ಬೆಂಗಳೂರು ಹಾಗೂ ಕರ್ನಾಟಕ ಮೆಡಿಕಲ್ ಟೂರಿಸಂ, ಐಟಿ ಹಬ್ ಆಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿತ್ತು. ಆದರೆ ಬಿಜೆಪಿ ಸರ್ಕಾರಗಳು ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿದ್ದು, ಜಾಗತಿಕ ಮಟ್ಟದಲ್ಲಿ ರಾಜ್ಯದ ಘನತೆ-ಗೌರವ ನಾಶವಾಗಿದೆ. ಕೆಲವು ದೇಶಗಳು ಇಲ್ಲಿಂದ ಹೋಗುವವರಿಗೆ ನಿರ್ಬಂಧ ಹೇರಿವೆ. ಇಲ್ಲಿನ ಸರ್ಕಾರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದೂ ಅವರು ಬೇಸರ ವ್ಯಕ್ತಪಡಿಸಿದರು.

ಕೋವಿಡ್ ಸಮಯದಲ್ಲಿ ಬಿಜೆಪಿಯ ಸ್ವಾರ್ಥ ರಾಜಕಾರಣ, ದುರಾಡಳಿತ, ಭ್ರಷ್ಟಾಚಾರದಿಂದ ರೈತರು, ಕಾರ್ಮಿಕರ ಬದುಕು ಬೀದಿಪಾಲಾಗಿದೆ. ಅವರಿಗೆ ಸರ್ಕಾರದಿಂದ ಸೂಕ್ತ ನೆರವು ಸಿಕ್ಕಿಲ್ಲ. ಸಂಕಷ್ಟದಲ್ಲಿರುವ ಜನರ ರಕ್ಷಣೆಗೆ ಕಾಂಗ್ರೆಸ್ ಯಾವ ರೀತಿ ಕಾರ್ಯಕ್ರಮ ವಿಸ್ತರಿಸಬಹುದು ಎಂಬ ವಿಚಾರವಾಗಿಯೂ ಉಭಯ ನಾಯಕರು ಚರ್ಚೆ ನಡೆಸಿದರು.

Donate Janashakthi Media

Leave a Reply

Your email address will not be published. Required fields are marked *