ಬೆಂಗಳೂರು: ಕೋವಿಡ್ ರೋಗ ತಡೆ ನಿರ್ಬಂಧಗಳಿಗೆ ಮತ್ತಷ್ಟು ಸಡಿಲಿಕೆ ನೀಡಿರುವ ರಾಜ್ಯ ಸರ್ಕಾರವು ಚಿತ್ರಮಂದಿರಗಳಿಗೆ ಹೇರಲಾಗಿದ್ದ ನಿಯಮವನ್ನು ರಾಜ್ಯ ಸರ್ಕಾರ ಸಡಿಲಗೊಳಿಸಿದೆ. ಚಿತ್ರಮಂದಿರ ಹಾಗೂ ಜಿಮ್ ಗಳಿಗೆ ಹೇರಲಾಗಿದ್ದ ಶೇಕಡಾ 50ರಷ್ಟು ಮಂದಿ ಮಾತ್ರ ಭಾಗವಹಿಸಬೇಕೆಂಬ ನಿರ್ಧಾರ ತೆರವುಗೊಳಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ಬೆಂಗಳೂರಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಈ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಕೆ.ಸುಧಾಕರ್ ಅವರುʻʻ ಜನವರಿ ತಿಂಗಳಲ್ಲಿ ಆಸ್ಪತ್ರೆಗೆ ದಾಖಲಾದ ಪ್ರಮಾಣ 2ಕ್ಕೆ ಇಳಿದಿದೆ. ಹೀಗಾಗಿ ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಇಳಿಕೆಯಾಗಿದೆ. ನಾಳೆಯಿಂದ ಎಲ್ಲ ಚಿತ್ರಮಂದಿರಗಳಲ್ಲಿಯೂ ಶೇಕಡಾ 100 ರಷ್ಟು ಸೀಟು ಭರ್ತಿಗೆ ಅವಕಾಶ ಮಾಡಿಕೊಡಲಾಗಿದೆʼʼ ಎಂದು ತಿಳಿಸಿದರು.
ಶೇಕಡಾ 100ರಷ್ಟು ಅವಕಾಶ ಮಾಡಿಕೊಟ್ಟಿದ್ದರೂ ಸಹ ಕೆಲವೊಂದು ನಿಯಮಗಳನ್ನು ಪಾಲಿಸುವಂತೆ ಸರ್ಕಾರ ಸೂಚಿಸಿದೆ. ಎಲ್ಲಾ ಚಿತ್ರಮಂದಿರಲ್ಲಿ ಮಾಸ್ಕ್ ಕಡ್ಡಾಯಗೊಳಿಸಿದೆ. ಅಷ್ಟೇ ಅಲ್ಲದೇ ಚಿತ್ರಮಂದಿರದ ಒಳಗಡೆ ತಿಂಡಿ ತೆಗೆದಯಕೊಂಡು ಹೋಗಲು ಅವಕಾಶವಿಲ್ಲ ಎಂದು ಹೇಳಿದ್ದಾರೆ.
ಚಲನಚಿತ್ರಮಂದಿರಗಳು ಅಲ್ಲದೇ, ಜಿಮ್, ಈಜುಕೊಳ, ಯೋಗ ಕೇಂದ್ರಗಳಿಗೂ 100% ಭರ್ತಿಗೆ ಅವಕಾಶ ನೀಡಲಾಗಿದೆ.
ಡಿಸೆಂಬರ್ ಕೊನೆ ವಾರದಲ್ಲಿ ಓಮಿಕ್ರಾನ್ ಸೋಂಕು ಹೆಚ್ಚಳದ ಹಿನ್ನೆಲೆಯಲ್ಲಿ ಕೆಲ ಕ್ರಮ ತೆಗೆದುಕೊಂಡಿದ್ದೇವು. ರಾತ್ರಿ ಕರ್ಫ್ಯೂ, ವಾರಾಂತ್ಯ ಸೇರಿದಂತೆ ಹಲವು ನಿಯಮಗಳನ್ನು ಕೈಗೊಳ್ಳಲಾಗಿತ್ತು. ಈಗ ಹಂತ ಹಂತವಾಗಿ ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗುತ್ತಿದೆ.
ಕೋವಿಡ್ ನಿಯಂತ್ರಣಕ್ಕೆ ರಾಜ್ಯದಲ್ಲಿ ಜಾರಿಗೊಳಿಸಲಾಗಿದ್ದ, ರಾತ್ರಿ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ ತೆರವುಗೊಳಿಸಿದ ಬಳಿಕವೂ ಚಿತ್ರಮಂದಿರಗಳ ಭರ್ತಿಗೆ ಪೂರ್ಣ ಅವಕಾಶವಿರಲಿಲ್ಲ. ಸರ್ಕಾರದ ನಿರ್ಧಾರಕ್ಕೆ ಸಿನಿಮಾ ಕ್ಷೇತ್ರದ ಮಂದಿ ಕಿಡಿಕಾರಿದ್ದರು. ಕಳೆದ ವಾರ ಚಲನಚಿತ್ರ ವಾಣಿಜ್ಯ ಮಂಡಳಿಯ ನಿಯೋಗವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಶೇ 100ರಷ್ಟು ಭರ್ತಿಗೆ ಅವಕಾಶ ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದರು.