ಕೋವಿಡ್ ಲಸಿಕೆ ಲಭ್ಯವಾಗುವವರೆಗೂ ಶಾಲೆಗಳನ್ನು ತೆರೆಯದಿರಲು ಕೊಡಗು ಜಿಪಂ ನಿರ್ಣಯ

 

ಕೊಡಗು: ವಿಶ್ವವನ್ನೇ ಕಾಡುತ್ತಿರುವ ಮಹಾಮಾರಿ ಕೋವಿಡ್ ಗೆ ಲಸಿಕೆ ಲಭ್ಯ ಆಗೋವರೆಗೆ ಕೊಡಗು ಜಿಲ್ಲೆಯ ಶಾಲೆಗಳನ್ನು ತೆರೆಯುವುದಿಲ್ಲ ಎಂದು ಕೊಡಗು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. 

ಕೊಡಗು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ ಹರೀಶ್ ಅವರ ಅಧ್ಯಕ್ಷತೆಯಲ್ಲಿ ಇಂದು ಸಾಮಾನ್ಯ ಸಭೆ ನಡೆಯಿತು. ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿದ ಜಿಲ್ಲಾ ಪಂಚಾಯಿತಿ ಸದಸ್ಯರು ಲಸಿಕೆ ಲಭ್ಯವಾಗೋವರೆಗೆ ಶಾಲೆಯನ್ನು ತೆರೆಯದಂತೆ ನಿರ್ಣಯಿಸಿದರು. ಈ ನಿರ್ಣಯವನ್ನು ಸರ್ಕಾರಕ್ಕೂ ಕಳುಹಿಸಲು ನಿರ್ಧರಿಸಲಾಗಿದೆ.

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ಆದರೂ ಜಿಲ್ಲೆಯಲ್ಲಿ ಚಳಿಗಾಲ ಆರಂಭವಾದ ಮೇಲೆ ಮೈಕೊರೆಯುವ ಚಳಿ ಇದ್ದು, ವಾತಾವರಣದಲ್ಲಿ ತೀವ್ರ ಶೀತಾಂಶವಿದೆ. ಒಂದು ವೇಳೆ ಸರ್ಕಾರ ನಿರ್ಧರಿಸಿ ಶಾಲೆ ಆರಂಭಿಸಿದರೂ ಇಲ್ಲಿನ ವಾತಾವರಣ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಈ ದೃಷ್ಟಿಯಿಂದ ಕೋವಿಡ್‍ಗೆ ಲಸಿಕೆ ಲಭ್ಯವಾಗುವವರೆಗೆ ಯಾವುದೇ ಕಾರಣಕ್ಕೂ ಜಿಲ್ಲೆಯ ಶಾಲೆಗಳನ್ನು ತೆರೆಯುವುದಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ನಿರ್ಣಯ ಕೈಗೊಂಡಿದೆ.

ಇನ್ನು ಜಿಲ್ಲೆಯ ಕೆಲವು ಖಾಸಗಿ ಶಾಲೆಗಳಲ್ಲಿ ಕೋವಿಡ್ ಸಂದರ್ಭದಲ್ಲಿಯೂ ಹೆಚ್ಚಿನ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ. ಬೋಪಣ್ಣ ಆರೋಪಿಸಿದರು.  ಖಾಸಗಿ ಶಾಲೆಗಳಲ್ಲಿ ಮೊದಲ ಕಂತಿನ ಶುಲ್ಕ ಪಡೆಯಲಾಗಿದ್ದರೂ ಎರಡನೇ ಕಂತಿನ ಶುಲ್ಕ ಪಾವತಿಸುವಂತೆ ಪೋಷಕರಲ್ಲಿ ಒತ್ತಾಯ ಮಾಡಲಾಗುತ್ತಿದೆ. ಇದು ಸರಿಯಲ್ಲ ಎಂದು ಸಿ.ಕೆ.ಬೋಪಣ್ಣ ವಿಷಯ ಪ್ರಸ್ತಾಪಿಸಿದರು. ಜಿ.ಪಂ.ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಆರ್.ಮಂಜುಳಾ ಮತ್ತು ಸದಸ್ಯರಾದ ಸುನೀತಾ ಅವರು ಜಿಲ್ಲೆಯ ಎಲ್ಲಾ ಖಾಸಗಿ ಶಾಲೆಗಳು ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿವೆ. ಇದನ್ನು ತಡೆಯಬೇಕು ಎಂದು ಒತ್ತಾಯಿಸಿದರು.

 ಸದಸ್ಯರಾದ ವಿಜು ಸುಬ್ರಮಣಿ ಮತ್ತು ಬಾನಂಡ ಪ್ರಥ್ಯು ಅವರು ಹೆಚ್ಚಿನ ಶುಲ್ಕ ಪಡೆಯುತ್ತಿರುವ ಖಾಸಗಿ ಶಾಲೆಗಳ ವಿರುದ್ದ ಕ್ರಮ ತೆಗೆದುಕೊಂಡು, ತಾತ್ಕಾಲಿಕವಾಗಿ ಮಾನ್ಯತೆ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು. ಸದಸ್ಯರಾದ ಶಿವು ಮಾದಪ್ಪ ಮಾತನಾಡಿ ಖಾಸಗಿ ಶಾಲೆಗಳು ಆನ್‍ಲೈನ್ ಮೂಲಕ ಪಾಠ ಪ್ರವಚನ ಮಾಡುತ್ತಿದ್ದು, ಶಿಕ್ಷಕರಿಗೆ ವೇತನ ಪಾವತಿಸಬೇಕಿದೆ. ಆದ್ದರಿಂದ ಖಾಸಗಿ ಶಾಲೆ ನಿರ್ವಹಣೆಗೆ ಸಾಧ್ಯವಾದಷ್ಟು ಶುಲ್ಕ ಪಾವತಿಸಬೇಕಿದೆ. ಆದರೆ ಯಾವುದೇ ಕಾರಣಕ್ಕೂ ಸದ್ಯಕ್ಕೆ ಶಾಲೆಗಳನ್ನು ಆರಂಭಿಸುವುದು ಬೇಡ ಎಂದು ಧ್ವನಿಗೂಡಿಸಿದರು.

ಈ ಕುರಿತು ಮಾಹಿತಿ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಿ.ಎಸ್.ಮಚ್ಚಾಡೋ ಅವರು ಕೆಲವು ಖಾಸಗಿ ಶಾಲೆಗಳು ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೆ ನೇರವಾಗಿ ಬರುವುದಿಲ್ಲ. ಆ ಶಾಲೆಗಳಿಗೆ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ  ಸಮಿತಿ ಇದ್ದು, ಈ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನಿಸಬೇಕಿದೆ. ಈ ಬಗ್ಗೆ ವರದಿ ಸಿದ್ಧಪಡಿಸಲಾಗುತ್ತಿದೆ ಎಂದರು.

Donate Janashakthi Media

Leave a Reply

Your email address will not be published. Required fields are marked *