ಕೋವಿಡ್ 4ನೇ ಅಲೆ: ನಾಲ್ಕೈದು ವಾರಗಳಲ್ಲಿ ಪ್ರಕರಣಗಳು ಹೆಚ್ಚಳ; ಡಾ. ಸಿ.ಎನ್‌.ಮಂಜುನಾಥ್‌

ಬೆಂಗಳೂರು: ಕೋವಿಡ್‌ ನಾಲ್ಕನೇ ಅಲೆ ಆರಂಭವಾಗಿದ್ದು, ಮುಂದಿನ ನಾಲ್ಕೈದು ವಾರಗಳಲ್ಲಿ ಪ್ರಕರಣಗಳ ಸಂಖ್ಯೆ ಇನ್ನೂ ಹೆಚ್ಚಾಗಲಿದೆ, ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕೆಂದು ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯ ಮತ್ತು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ದೇಶದ ಮೂರ್ನಾಲ್ಕು ರಾಜ್ಯಗಳಲ್ಲಿ ಹೊಸ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ನಮ್ಮ ರಾಜ್ಯದಲ್ಲೂ ಇದು ಆರಂಭವಾಗಿದೆ, ವೈರಸ್ ರೂಪಾಂತರಗೊಳ್ಳುವುದು ಸಾಮಾನ್ಯ, ಆದರೆ, ಜನರು ಎಚ್ಚರಿಕೆಯಿಂದ ಇರಬೇಕಾದ್ದು ಅಗತ್ಯʼʼ ಎಂದು ಹೇಳಿದರು.

“ದೆಹಲಿ, ಹರಿಯಾಣ, ಮಹಾರಾಷ್ಟ್ರಗಳಲ್ಲಿ ಕೊರೊನಾ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿವೆ. ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ರಾಜ್ಯದಲ್ಲಿ ಮಾಸ್ಕ್ ಕಡ್ಡಾಯವಿಲ್ಲದಿದ್ದರೂ, ಮುನ್ನೆಚ್ಚರಿಕೆಯಾಗಿ ಜನರು ಮಾಸ್ಕ್ ಧರಿಸುವುದು ಸೂಕ್ತ” ಎಂದು ಸಲಹೆ ನೀಡಿದರು.

“ಕೋವಿಡ್ ಎರಡನೇ ಮತ್ತು ಮೂರನೇ ಅಲೆಯಲ್ಲಿ ಯಾವ ರೀತಿ ಕೊರೊನಾ ರೋಗಲಕ್ಷಣಗಳಿದ್ದವೋ, ಅದೇ ರೀತಿ ನಾಲ್ಕನೇ ಅಲೆಯಲ್ಲೂ ಇರಲಿದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಕಡಿಮೆಯಿರಲಿದೆ. ಆದರೆ ಜನರು ಎಚ್ಚರ ತಪ್ಪಬಾರದು” ಎಂದು ಡಾ.ಮಂಜುನಾಥ್ ಹೇಳಿದರು.

“ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆ ಇರುವವರು, ಕ್ಯಾನ್ಸರ್ ರೋಗಿಗಳು, ಡಯಾಲಿಸಿಸ್ ಚಿಕಿತ್ಸೆಗೆ ಒಳಪಡುವವರು, ಅಸ್ತಮಾ ಕಾಯಿಲೆ ಇರುವವರು ಎಚ್ಚರವಾಗಿರಬೇಕು. ಈಗ ಎದುರಾಗಿರುವುದು ಹೊಸ ತಳಿಯೇನೂ ಅಲ್ಲ, ವೈರಸ್ ರೂಪಾಂತರಗೊಳ್ಳುತ್ತಲೇ ಇರುತ್ತದೆ. ಜನರು ಮಾಸ್ಕ್ ಧರಿಸುವುದು ಅತ್ಯಂತ ಸೂಕ್ತ, ಎರಡೂ ಡೋಸ್ ಲಸಿಕೆ ಹಾಕಿಕೊಂಡಾಗಿದೆ ಎಂದು ನಿರ್ಲಕ್ಷ್ಯ ಬೇಡ. ಜ್ವರ, ಕೆಮ್ಮು, ನೆಗಡಿ ಎದುರಾದರೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ. ಮುಂದಿನ ವಾರಗಳಲ್ಲಿ ನಾಲ್ಕನೇ ಅಲೆ ಎದುರಾಗಲಿದ್ದು, ನಂತರ ಸಹಜವಾಗಿ ಕ್ಷೀಣಿಸುತ್ತ ಬರುತ್ತದೆ” ಎಂದು ಡಾ.ಮಂಜುನಾಥ್ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *