ಬೆಂಗಳೂರು: ನಾಳೆಯಿಂದ 18 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆ ಬಳಿ ಬರಬಾರದು. ಮುಂದಿನ ದಿನಾಂಕವನ್ನ ಅಧಿಕೃತವಾಗಿ ತಿಳಿಸುತ್ತೇವೆ ಎಂದು ಸಚಿವ ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ತೀರ್ಮಾನಿಸಲಾಗಿತ್ತು. ಅದರ ಅನ್ವಯ 3- 3.5 ಕೋಟಿ ಜನ ಕರ್ನಾಟಕದಲ್ಲಿ ಇದ್ದಾರೆ ಎಂದು ಅಂದಾಜಿಸಲಾಗಿದೆ. 1 ಕೋಟಿ ಕೋವಿ ಶೀಲ್ಡ್ ಗೆ 400 ಕೋಟಿ ಕೊಟ್ಟು ಆರ್ಡರ್ ಮಾಡಿದ್ದೇವೆ. ಆದರೆ ಕಂಪೆನಿಗಳು ಯಾವಾಗ ಕೊಡುತ್ತೆ ಅಂತ ಇದುವರೆಗೆ ನಮಗೆ ಮಾಹಿತಿ ಬಂದಿಲ್ಲ. ಹಾಗಾಗಿ ನಾಳೆಯಿಂದ 18 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆ ಬಳಿ ಬರಬಾರದು ಅಂತ ಮನವಿ ಮಾಡುತ್ತೇನೆ, ಕಂಪೆನಿಯವರು ಅಧಿಕೃತ ಮಾಹಿತಿ ಹಂಚಿಕೊಂಡ ನಂತರ ಲಸಿಕೆ ಯಾವ ವಾರದಿಂದ ಸಿಗುತ್ತೆ ಅಂತ ಘೋಷಿಸುವುದಾಗಿ ಹೇಳಿದರು.
ಇದನ್ನೂ ಓದಿ : ಲಸಿಕೆ! ಲಸಿಕೆ!! ಲಸಿಕೆ!!!
ಎಲ್ಲರಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕೊಡುತ್ತೇವೆ. 45 ವರ್ಷ ಮೇಲ್ಪಟ್ಟವರಿಗೆ ಈಗ ಉಚಿತವಾಗಿ ನೀಡುತ್ತಿರುವ ಲಸಿಕೆ ನೀಡಿಕೆ ಯತವತ್ತಾಗಿ ಮುಂದುವರಿಯಲಿದೆ. 45 ವರ್ಷ ಮೇಲ್ಪಟ್ಟವರಿಗೆ ನೀಡುವ ಲಸಿಕೆಯ 99 ಲಕ್ಷ ಡೋಸ್ ನಲ್ಲಿ 95 ಲಕ್ಷ ಡೋಸನ್ನ 45 ವರ್ಷ ಮೇಲ್ಪಟ್ಟವರಿಗೆ ಈಗಾಗಲೇ ನೀಡಲಾಗಿದೆ ಎಂದು ಸುಧಾಕರ್ ತಿಳಿಸಿದರು.